ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಬೆಂಬಲಿಸುವ ಪರಿಸ್ಥಿತಿ ತಲುಪಿರುವ ರೈತ-ಕಾರ್ಮಿಕರ ಸಂಘಟನೆಗಳು ಕಾಂಗ್ರೆಸ್ಸಿನ ಮೇಲೆ ಒತ್ತಡ ಹೇರುವ ಶಕ್ತಿಯನ್ನೂ ಹೊಂದಿಲ್ಲವೇ? ವಿರೋಧ ಪಕ್ಷಗಳು ಜನಪರ ನೀತಿಯ ವಿಚಾರದಲ್ಲೂ ವಿರುದ್ಧವಾಗಿ ನಿಲ್ಲುವ ಶಕ್ತಿ ಪಡೆದುಕೊಂಡಿರುವುದೂ, ಜನಪರ ಸಂಘಟನೆಗಳ ಈ ದೌರ್ಬಲ್ಯದಿಂದ ಅಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಈ ಸಾರಿಯ ಮಹಾಧರಣಿಯು ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಂದೆಯೂ ಒಂದೆರಡು ಪ್ರಶ್ನೆಗಳನ್ನು ಇಟ್ಟಿದೆ
ನಾಳೆಯಿಂದ (26ನೇ ನವೆಂಬರ್, 2023) ಮೂರು ದಿನಗಳ ಕಾಲ ಬೆಂಗಳೂರಿನಲ್ಲೊಂದು ʼಮಹಾಧರಣಿʼ ನಡೆಯಲಿದೆ. ದೆಹಲಿ ರೈತರ ಹೋರಾಟದ ಕಾಲದಲ್ಲಿ ಕರ್ನಾಟಕದಲ್ಲಿ ರೂಪುಗೊಂಡ ಹಲವು ಸಂಘಟನೆಗಳ ಮೈತ್ರಿಯಾದ ʼಸಂಯುಕ್ತ ಹೋರಾಟ-ಕರ್ನಾಟಕʼವು ಇದಕ್ಕೆ ಕರೆ ನೀಡಿದೆ. ಹಾಗೆ ನೋಡಿದರೆ ಈ ಕರೆಯೂ ದೆಹಲಿಗೆ ಮುತ್ತಿಗೆ ಹಾಕಿದ್ದ ರೈತರ ಪ್ರತಿನಿಧಿ ʼಸಂಯುಕ್ತ ಕಿಸಾನ್ ಮೋರ್ಚಾʼದ್ದೇ.
ಆ ಮಹತ್ವದ ಒಕ್ಕೂಟಕ್ಕೆ ಹಲವು ಗರಿಗಳಿವೆ. ರೈತ ಹೋರಾಟಕ್ಕೆ ಕಾರ್ಮಿಕರ ಬೃಹತ್ ಮೈತ್ರಿ ʼಜೆಸಿಟಿಯುʼ ನಿರಂತರವಾಗಿ ಬೆಂಬಲ ಸೂಚಿಸುತ್ತಾ ಬಂದಿತ್ತು. ಈ ಸಾರಿ ಎರಡೂ ಒಕ್ಕೂಟಗಳೂ ಸೇರಿ ಮೂರು ದಿನಗಳ ಕಾಲ ದೇಶದೆಲ್ಲೆಡೆ ಧರಣಿ ಸತ್ಯಾಗ್ರಹ ನಡೆಸಬೇಕೆಂದು ತೀರ್ಮಾನಿಸಿವೆ. ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ರಾಜಧಾನಿಯಲ್ಲಿ ನಡೆಯುವ ಈ ಸತ್ಯಾಗ್ರಹವು ರಾಜ್ಯ ಸರ್ಕಾರವನ್ನೂ ಎಚ್ಚರಿಸಬಯಸಿದೆ.
ಕಳೆದ 25 ವರ್ಷಗಳಲ್ಲಿ ದೆಹಲಿ ರೈತರ ಹೋರಾಟದಷ್ಟು ಗಮನ ಸೆಳೆದ ರೈತ – ಕಾರ್ಮಿಕರ ಯಾವುದೇ ಹೋರಾಟ ನಡೆದಿರಲಿಲ್ಲ. ಜನಾಭಿಪ್ರಾಯವನ್ನು ತನಗೆ ಬೇಕಾದಂತೆ ರೂಪಿಸಿಕೊಳ್ಳಲು ಬೇಕಾದ ಮಾಧ್ಯಮ ಯಂತ್ರಾಂಗ ಹೊಂದಿರುವ ಪ್ರಧಾನಿ ಮೋದಿಯವರನ್ನೂ ಮಣಿಸಿದ ಹೋರಾಟವೆಂಬ ಖ್ಯಾತಿ ಅದಕ್ಕಿದೆ. ವಿಪರ್ಯಾಸವೆಂದರೆ, ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂತೆಗೆದುಕೊಂಡ ಕೇಂದ್ರ ಸರ್ಕಾರವು, ಸಂಯುಕ್ತ ಕಿಸಾನ್ ಮೋರ್ಚಾದ ಇನ್ನೆರಡು ಒತ್ತಾಯಗಳಿಗೆ (ಎಂಎಸ್ಪಿ ಕಾಯ್ದೆ ಜಾರಿ ಮತ್ತು ವಿದ್ಯುಚ್ಛಕ್ತಿ ಕಾಯ್ದೆ ಪ್ರಸ್ತಾಪ ಕೈಬಿಡುವುದು) ಒಪ್ಪಿದ್ದರೂ, ಅವನ್ನು ಇದುವರೆಗೆ ಜಾರಿ ಮಾಡಿಲ್ಲ.
ಅಷ್ಟೇ ಅಲ್ಲದೇ, ಕೇಂದ್ರದಲ್ಲಿ ಜಾರಿಗೆ ತಂದಂತಹ ಕಾಯ್ದೆಗಳಲ್ಲಿ ಕೆಲವನ್ನು ರಾಜ್ಯ ಮಟ್ಟದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದ ಕಡೆ ಜಾರಿಗೆ ತಂದಿದ್ದರು. ಇದು ಈ ದೇಶದ ರಾಜಕೀಯ ಪಕ್ಷಗಳ ವಂಚನೆಯ ವಿಧಾನ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ 2014ರಲ್ಲಿ ಅವರ ಹಿಂದಿನ ಸರ್ಕಾರ ತಂದಿದ್ದ ಭೂಸ್ವಾಧೀನ (ರೈತರಿಗೆ ಸೂಕ್ತ ಪರಿಹಾರ ಕಲ್ಪಿಸುವ) ಕಾಯ್ದೆಯನ್ನು ಕಾರ್ಪೊರೇಟುಗಳ ಪರವಾಗಿ ತಿದ್ದಲು ಯತ್ನಿಸಿ ಸೋಲು ಕಂಡಿದ್ದರು. ಆದರೆ, ಅದನ್ನೇ ಇನ್ನೊಂದು ರೀತಿಯಲ್ಲಿ ವಿವಿಧ ರಾಜ್ಯ ಸರ್ಕಾರಗಳು (ಬಿಜೆಪಿಯೇತರ ರಾಜ್ಯ ಸರ್ಕಾರಗಳೂ ಸಹ) ತಂದು ಬಿಟ್ಟವು.
ಕರ್ನಾಟಕದಲ್ಲೇ ಬಿಜೆಪಿಯು ಜಾರಿಗೆ ತಂದಿದ್ದ ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿದಂತೆ ಕೆಲವು ಕಾನೂನುಗಳನ್ನು ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೂ ಹಿಂತೆಗೆದುಕೊಳ್ಳಲಾಗಿಲ್ಲ. ಒಂದು ಕಾಯ್ದೆಯ ವಿಚಾರದಲ್ಲಿ ನಡೆಸಿದ ಪ್ರಯತ್ನಕ್ಕೆ ವಿಧಾನಪರಿಷತ್ತಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸೋಲುಣಿಸಿದವು. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಈ ನಿಲುವನ್ನು ಜನರ ಮುಂದಿಟ್ಟು ಒತ್ತಡ ನಿರ್ಮಿಸುವಲ್ಲಿ ಅಥವಾ ಅದನ್ನು ಕನಿಷ್ಠ ಬಯಲುಗೊಳಿಸುವಲ್ಲಿ ರಾಜ್ಯ ಸರ್ಕಾರವೂ ಸಫಲವಾಗಿಲ್ಲ; ಸಂಯುಕ್ತ ಹೋರಾಟ – ಕರ್ನಾಟಕವೂ ಆ ನಿಟ್ಟಿನಲ್ಲಿ ಪರಿಣಾಮಕಾರಿಯಾದುದೇನನ್ನೂ ಮಾಡಲಿಲ್ಲ.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅನಿವಾರ್ಯವಾಗಿ ಬೆಂಬಲಿಸುವ ಪರಿಸ್ಥಿತಿ ತಲುಪಿರುವ ರೈತ-ಕಾರ್ಮಿಕರ ಸಂಘಟನೆಗಳು ಕಾಂಗ್ರೆಸ್ಸಿನ ಮೇಲೆ ಒತ್ತಡ ಹೇರುವ ಶಕ್ತಿಯನ್ನೂ ಹೊಂದಿಲ್ಲವೇ? ವಿರೋಧ ಪಕ್ಷಗಳು ಜನಪರ ನೀತಿಯ ವಿಚಾರದಲ್ಲೂ ವಿರುದ್ಧವಾಗಿ ನಿಲ್ಲುವ ಶಕ್ತಿ ಪಡೆದುಕೊಂಡಿರುವುದೂ, ಜನಪರ ಸಂಘಟನೆಗಳ ಈ ದೌರ್ಬಲ್ಯದಿಂದ ಅಲ್ಲವೇ ಎಂಬ ಪ್ರಶ್ನೆ ಏಳುತ್ತದೆ. ಈ ಸಾರಿಯ ಮಹಾಧರಣಿಯು ರಾಜ್ಯದ ಕಾಂಗ್ರೆಸ್ ಸರ್ಕಾರದ ಮುಂದೆಯೂ ಒಂದೆರಡು ಪ್ರಶ್ನೆಗಳನ್ನು ಇಟ್ಟಿದೆ. ಇಂತಹ ನೂರಾರು ಸಣ್ಣ, ದೊಡ್ಡ ಚಳವಳಿಗಳ ಫಲವಾಗಿಯೇ ಈ ದೇಶದಲ್ಲಿ ಇನ್ನೂ ಪ್ರಜಾತಂತ್ರ ಜೀವಂತವಾಗಿದ್ದು, ಬಿಜೆಪಿಯೇತರ ರಾಜಕೀಯ ಪಕ್ಷಗಳಿಗೂ ಜೀವ ಉಳಿದುಕೊಂಡಿದೆ ಎಂಬುದು ಕಾಂಗ್ರೆಸ್ಸಿಗೂ ಅರಿವಾದಂತಿಲ್ಲ. ಪ್ರಜಾತಂತ್ರವನ್ನೇ ಇಲ್ಲವಾಗಿಸಿಬಿಡುವ ಆತಂಕ ಬಿಜೆಪಿಯಿಂದ ಎದುರಾಗಿರುವಾಗ, ಕಾಂಗ್ರೆಸ್ಸಿನ ಸೆರಗು ಹಿಡಿದು ಸಾಗುವ ಅನಿವಾರ್ಯತೆ ಜನಸಂಘಟನೆಗಳಿಗೂ ಇದೆ.
ಈ ಅನಿವಾರ್ಯತೆಯ ಜೊತೆ ಜೊತೆಗೇ ಒಂದು ಜನಪರ್ಯಾಯವನ್ನು ಕಟ್ಟುವ ಗಂಭೀರ ಪ್ರಯತ್ನವನ್ನು ಚಳವಳಿನಿರತ ಸಂಘಟನೆಗಳು ನಿರಂತರವಾಗಿ ನಡೆಸದೇ ಇರುವುದೇ ಈ ಸ್ಥಿತಿಗೆ ಕಾರಣ. ಚುನಾವಣೆ ಬಂದಾಗ ಆಡಳಿತ ಪಕ್ಷವನ್ನು ಸೋಲಿಸುವ ಮಟ್ಟಿಗಷ್ಟೇ ಜನರ ಹಾಗೂ ಜನಸಂಘಟನೆಗಳ ಪಾಲಿಗಿರುವ ಅವಕಾಶವಾಗಿದೆ. ಅದನ್ನು ದಾಟಿ ಜನಾಭಿಪ್ರಾಯದ ಒತ್ತಾಸೆ, ಆಂದೋಲನದ ಒತ್ತಡ ಮತ್ತು ಚುನಾವಣಾ ರಾಜಕೀಯ ಪರ್ಯಾಯದ ಬೆದರಿಕೆ ಇಲ್ಲದೇ ಯಾವ ರಾಜಕೀಯ ಪಕ್ಷಗಳೂ ಬಗ್ಗುವ ಸಾಧ್ಯತೆ ಇಲ್ಲ. ಈ ಹಿಂದೆಯೂ ಸರ್ಕಾರಗಳು ಬಗ್ಗಿದ್ದು ಅಂತಿಮವಾಗಿ ಚುನಾವಣೆಯಲ್ಲಿ ಜನಬೆಂಬಲ ಕಳೆದುಕೊಂಡುಬಿಡಬಹುದಾದ ಭಯಕ್ಕೇನೇ. ದೆಹಲಿ ರೈತರ ಹೋರಾಟಗಾರರ ಜೊತೆಗೆ ಮಾತುಕತೆಗೆ ಮುಂದಾಗಿದ್ದೂ ಸಹ ಉತ್ತರ ಪ್ರದೇಶ ಚುನಾವಣೆಗೆ ಮುಂಚೆ ಎಂಬುದನ್ನು ಮರೆಯಲಾಗದು.
ಈ ಸಾರಿ ಮಹಾಧರಣಿ ಅಂತಹ ಪ್ರಕ್ರಿಯೆಗೆ ನಾಂದಿ ಹಾಡಿದರೆ ಜನಾಂದೋಲನಗಳ ಬಿಕ್ಕಟ್ಟನ್ನು ದಾಟಲು ಸಾಧ್ಯವಾಗಬಹುದು; ಸಾಧ್ಯವಾಗಲಿ ಎಂಬ ಆಶಯವಷ್ಟೇ ನಮ್ಮದು.
