ದೇಶದ ದುಡಿಯುವ ಜನ ಮತ್ತು ರೈತಾಪಿ ಮಂದಿ ಸೇರಿ ನೂರಾರು ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ ಜಂಟಿ ಸಮಿತಿ ಮತ್ತು ಕಾರ್ಮಿಕ ವರ್ಗದ ಜಂಟಿ ಸಮಿತಿಯ ನೇತೃತ್ವದಲ್ಲಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ನವಂಬರ್ 26 ರಿಂದ 28 ರವರೆಗೆ ನಡೆಯುತ್ತಿರುವ 72 ಗಂಟೆಗಳ ಮಹಾಧರಣಿಗೆ ರಾಜ್ಯದ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲ ಇದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ತಿಳಿಸಿದೆ.
ಎಸ್‌ಎಫ್‌ಐನ ಪದಾಧಿಕಾರಿ ಗಣೇಶ ರಾಠೋಡ ಮಾತನಾಡಿ, “ಕಾರ್ಮಿಕರ ವಿರೋಧಿ ಕಾರ್ಮಿಕ ಕಾನೂನು ತಿದ್ದುಪಡಿ ಕೈಬಿಡಲು ಒತ್ತಾಯಿಸಿ ಮತ್ತು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಶಿಫಾರಸು ಮಾಡಿದ ಸ್ವಾಮಿನಾಥನ್ ವರದಿ ಜಾರಿ ಮಾಡಲು ಒತ್ತಾಯಿಸಿ ಮತ್ತು ರೈತ ವಿರೋಧಿ ಕಾಯ್ದೆಗಳ ರದ್ದುಪಡಿಸುವುದು ಸೇರಿದಂತೆ 24 ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆಯುತ್ತಿರುವ ಈ ಮಹಾಧರಣಿಗೆ ವಿದ್ಯಾರ್ಥಿ ಸಮುದಾಯವು ಸಂಪೂರ್ಣ ಬೆಂಬೆಲಿಸುತ್ತದೆ. ವಿದ್ಯಾರ್ಥಿ ವಿರೋಧಿ ನೀತಿ ಆಗಿರುವ ಎನ್‌ಇಪಿಯನ್ನು ರದ್ದುಪಡಿಸಲು ಒತ್ತಾಯಿಸಿ ಈ ಹೋರಾಟದಲ್ಲಿ ಭಾಗಿಯಾಗುತ್ತೇವೆ” ಎಂದು ತಿಳಿಸಿದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾರ್ಥಿ ವಿರೋಧಿ, ಶಿಕ್ಷಣ ವಿರೋಧಿ ನೀತಿ ಜಾರಿ ಮಾಡಿರುವುದರಿಂದ ಆ ನೀತಿಗಳ ವಿರುದ್ಧ ನಮ್ಮ ಹೋರಾಟ. ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಿಲ್ಲ. ಎಲ್ಲ ಹಳ್ಳಿಗಳಿಗೂ ಬಸ್ ಕೊರತೆ ಇದೆ, ಶೌಚಾಲಯಗಳ ಸಮಸ್ಯೆ, ಲೈಬ್ರರಿ ಸಮಸ್ಯೆ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಕೊರತೆ, ಪಠ್ಯ ಪುಸ್ತಕ, ಸೈಕಲ್, ಶೂ, ಬಟ್ಟೆಗಳನ್ನು ಕೊಡದೆ ಇರುವುದು ಖಂಡನೀಯ” ಎಂದರು.
“ಸ್ಕಾಲರ್ಶಿಪ್ ಸಮಸ್ಯೆ, ಕಡಿತ ಮಾಡಿರುವುದು, ಹಾಸ್ಟೆಲ್ ಸಮಸ್ಯೆ ವಿದ್ಯಾರ್ಥಿಗಳನ್ನು ನಿರಂತರವಾಗಿ ಕಾಡುತ್ತಿವೆ. ಅನೇಕ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ, ಉಪನ್ಯಾಸಕರ ಕೊರತೆ, ಖಾಯಂ ಅಧ್ಯಾಪಕರ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳು ವಿದ್ಯಾರ್ಥಿಗಳನ್ನು ಕಾಡುತ್ತಿವೆ” ಎಂದು ಹೇಳಿದರು.
“ಸರ್ಕಾರಗಳು ಯಾವುದೇ ಸಮಸ್ಯೆಗಳತ್ತ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿವೆ. ಈ ಸಮಸ್ಯೆಗಳನ್ನು ಬಗೆಹರಿಸಲು ಕನಿಷ್ಠ ಪಕ್ಷ ಒಂದಿಷ್ಟು ಪ್ರಯತ್ನವನ್ನೂ ಮಾಡದೇ ರಾಜ್ಯ ಸರ್ಕಾರ ಗ್ಯಾರಂಟಿಗಳ ಹಿಂದೆ ಬಿದ್ದಿದೆ. ಕೇಂದ್ರ ಸರ್ಕಾರ ಬರೀ ಸುಳ್ಳುಗಳನ್ನು ಬಿತ್ತರಿಸಿ ರಾಜಕೀಯ ಲಾಭ ಪಡೆಯಲು ಹೆಣಗುತ್ತಿದೆ. ಹಾಗಾಗಿ ಈ ಹೋರಾಟ ಅನಿವಾರ್ಯವಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಾಯಮಾತಿಗೆ ಗಡುವು ನೀಡಿದ ಅತಿಥಿ ಉಪನ್ಯಾಸಕರ ಸಂಘ
ರಾಜ್ಯದ ಜನತೆ ಈ ಮಹಾಧರಣಿಯಲ್ಲಿ ಜೊತೆಯಾಗಿ ನಿಲ್ಲಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆಯು ಜನತೆಯಲ್ಲಿ ಈ ಮೂಲಕ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರುಗಳಾದ ಗಣೇಶ ರಾಠೋಡ್, ಚಂದ್ರು ರಾಠೋಡ್, ಕಾರ್ಮಿಕ ಮುಖಂಡರುಗಳಾದ ಮೈಬೂ ಹವಾಲ್ದಾರ್, ಪ್ರದೀಪ್ ಎಂ, ಶರಣು ಎಂ, ಮಾಂತೇಶ ಪಿ ಇದ್ದರು.