ಜನರಿಂದ 55 ಪ್ರಶ್ನೆಗಳಿಗೆ ಉತ್ತರ ಮತ್ತು ಸಹಿಯನ್ನೂ ಪಡೆದಿದ್ದೇವೆ: ಜಾತಿ ಗಣತಿ ಕುರಿತು ಕಾಂತರಾಜ್‌ ಸ್ಪಷ್ಟನೆ

Date:

Advertisements

‘ಜಾತಿ ಗಣತಿ’ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರು, ಸದಸ್ಯರು ಸ್ಪಷ್ಟನೆಗಳನ್ನು ನೀಡಿದ್ದಾರೆ

ಎಚ್‌.ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ’ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ) ಕುರಿತು ಎದ್ದಿರುವ ಪ್ರಶ್ನೆಗಳಿಗೆ ಕಾಂತರಾಜ್ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಯೋಗದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು, ಜಾತಿ ಗಣತಿಯ ಮೂಲಪ್ರತಿ ಕಳವಾಗಿದೆ ಎಂಬ ವರದಿ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ.

Advertisements

ಕಾಂತರಾಜ ಅವರು ಮಾತನಾಡಿ, “ಯಾವುದೋ ಒಂದು ಊರು, ತಾಲ್ಲೂಕು ಇಟ್ಟುಕೊಂಡು ಸಮೀಕ್ಷೆ ಮಾಡಿರುವುದಿಲ್ಲ. ಮನೆಮನೆಗೆ ಹೋಗಿ ಸರ್ವೇ ಮಾಡಲಾಗಿದೆ. 55 ಪ್ರಶ್ನೆಗಳ ಅಳತೆಗೋಲನ್ನು ಇಟ್ಟುಕೊಂಡಿದ್ದೆವು. ಅವುಗಳಿಗೆಲ್ಲ ಉತ್ತರ ಪಡೆದು, ಉತ್ತರಿಸಿದವರಿಂದ ಸಹಿಯನ್ನು ದಾಖಲಿಸಿಕೊಂಡಿದ್ದೇವೆ” ಎಂದು ಸ್ಪಷ್ಟಪಡಿಸಿದರು.

1931ರ ನಂತರ ಇಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದು ಕರ್ನಾಟಕ ಸರ್ಕಾರ. 2015ರಲ್ಲಿ ಮನೆಮನೆಗೆ ಹೋಗುವ ಕೆಲಸ ಶುರುವಾಯಿತು. ನಲವತ್ತು ದಿನಗಳು ಈ ಕೆಲಸ ಮಾಡಿದೆವು. 2019ರವರೆಗೆ ಸಮೀಕ್ಷೆಯ ವರದಿಯನ್ನು ಏಕೆ ಕೊಟ್ಟಿಲ್ಲ ಎಂಬ ಪ್ರಶ್ನೆ ಬರಬಹುದು. ಇಷ್ಟು ಕಾಲ ಅಂಕಿ-ಅಂಶಗಳನ್ನು ಪಡೆದುಕೊಂಡು ಕ್ರೋಡೀಕರಿಸುವ ಕೆಲಸವಾಯಿತು. ಎಲ್ಲ ಅಂಶಗಳ ಗಣಕೀಕರಣ, ವಿಶ್ಲೇಷಣೆ, ವರದಿ ರೂಪಿಸುವುದು ನಡೆಯಿತು. ಮನೆಮನೆಗೆ ಹೋಗಿ ವರದಿಯನ್ನು ತೆಗೆದುಕೊಂಡು ಬರುವುದಷ್ಟೇ ಸಮೀಕ್ಷೆ ಅಲ್ಲ. ಸಮೀಕ್ಷೆ ಅಲ್ಲಿಗೆ ಮುಗಿಯುವುದಿಲ್ಲ. 2018ರಲ್ಲಿ ವರದಿ ಪೂರ್ಣಗೊಂಡಿದೆ. 2019ರಲ್ಲಿ ವರದಿಯನ್ನು ಸದಸ್ಯ ಕಾರ್ಯದರ್ಶಿ ವಸಂತ್‌ಕುಮಾರ್‌ (ಐಎಎಸ್‌) ಅವರಿಗೆ ಸಲ್ಲಿಕೆ ಮಾಡಿರುತ್ತೇವೆ ಎಂದು ತಿಳಿಸಿದರು.

“ನಮ್ಮ ಆಯೋಗಕ್ಕೂ ಹೊಸ ಆಯೋಗಕ್ಕೂ ಯಾವುದೇ ವ್ಯತ್ಯಾಸಗಳಿಲ್ಲ. ನಮ್ಮ ಸಮೀಕ್ಷೆ ವೈಜ್ಞಾನಿಕ ಅಲ್ಲ ಎಂಬ ಆರೋಪಗಳಿವೆ. ಇದು ಅವೈಜ್ಞಾನಿಕವಾಗಿದೆ, ಮನೆಯಲ್ಲಿ ಕುಳಿತು ಬರೆಯಲಾಗಿದೆ ಎಂದು ದೂರುತ್ತಿದ್ದಾರೆ. ಆಧಾರ ರಹಿತ ಯಾವುದೂ ಇಲ್ಲ. ಅಂಕಿ-ಅಂಶಗಳನ್ನು ದಾಖಲಿಸಿದ್ದೇವೆ. ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದವರನ್ನು, ತಜ್ಞರನ್ನು ಕರೆಸಿಕೊಂಡು ಅಂತಿಮ ತೀರ್ಮಾನ ತೆಗೆದುಕೊಂಡಿದ್ದೇವೆ. ನಾವು 55 ಪ್ರಶ್ನೆಗಳ ಅಳತೆಗೋಲನ್ನು ಇಟ್ಟುಕೊಂಡಿದ್ದೆವು. 55ರಲ್ಲಿ ಜಾತಿಯೂ ಒಂದು ಅಂಶವಾಗಿತ್ತು. ಒಂದು ಜಾತಿಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದಲ್ಲಿ, ಅದನ್ನೂ ಬರೆದುಕೊಂಡಿದ್ದೇವೆ” ಎಂದು ವಿವರಿಸಿದರು.

“ಜಾತಿ, ಧರ್ಮ ಯಾವುದು? ಆರ್ಥಿಕ ಸ್ಥಿತಿಗತಿ ಬಂದಾಗ ಖುಷ್ಕಿ ಜಮೀನು, ತರೀ ಜಮೀನು ಇದೆಯೇ? ಬ್ಯಾಂಕ್ ಅಕೌಂಟ್ ಇದೆಯೇ? ಶಿಕ್ಷಣ ಇದೆಯೇ? ಬ್ಯಾಂಕ್ ಸಾಲ ಪಡೆದಿದ್ದೀರಾ? ಕುಡಿಯುವ ನೀರಿನ ವ್ಯವಸ್ಥೆ ಇದೆಯೇ? ರಾಜಕೀಯ ಹಿನ್ನೆಲೆ ಇದೆಯೇ? ಇತ್ಯಾದಿ ಪ್ರಶ್ನೆಗಳು ಸೇರಿದಂತೆ 55 ಅಳತೆಗೋಲುಗಳನ್ನು ಇಟ್ಟುಕೊಂಡಿದ್ದೆವು. ಅವರು ಹೇಳಿದ್ದನ್ನು ಬರೆದುಕೊಂಡಿದ್ದೇವೆ. ಅವರ ಉತ್ತರಗಳ ಕೆಳಗೆ ಸಹಿಗಳನ್ನು ಹಾಕಿಸಿಕೊಂಡಿದ್ದೇವೆ. ಅವರು ಹೇಳಿದಂತೆಯೇ ಬರೆದುಕೊಂಡಿದ್ದೇವೆಯಾ ಎಂಬುದನ್ನು ಅವರಿಗೆ ತೋರಿಸಿ ಖಚಿತಪಡಿಸಿಕೊಂಡಿದ್ದೇವೆ” ಎಂದು ತಿಳಿಸಿದರು.

“ಸಮೀಕ್ಷೆಯ ವರದಿ ಕಳವಾಗಿದೆ ಎನ್ನಲು ಸಾಧ್ಯವಿಲ್ಲ. ಈಗ ನಾವು ಆಯೋಗದಲ್ಲಿ ಇಲ್ಲ. ಸಮೀಕ್ಷೆಯ ವರದಿ ಕುರಿತು ಖಚಿತವಾಗಿ ಅಲ್ಲಿಯೇ ಇರುವಂಥವರು ಹೇಳಬೇಕು. ನಮ್ಮ ಆಯೋಗದ ಸದಸ್ಯರೆಲ್ಲರೂ ಒಮ್ಮತದಿಂದ ನಿರ್ಧಾರ ತೆಗೆದುಕೊಂಡು ವರದಿಯನ್ನು ಸಲ್ಲಿಸಿದ್ದೇವೆ. ನಮ್ಮಲ್ಲಿ ಭಿನ್ನಾಭಿಪ್ರಾಯಗಳು ಇರಲಿಲ್ಲ. ವರದಿಗೆ ಸದಸ್ಯ ಕಾರ್ಯದರ್ಶಿ ಸಹಿಹಾಕಿಲ್ಲ ಎಂದು ದೂರಿದ್ದಾರೆ. ಆದರೆ ಕಾಯ್ದೆಯ ಪ್ರಕಾರ ಸಹಿ ಹಾಕಲೇಬೇಕೆಂಬ ನಿಯಮವಿಲ್ಲ. ಆ ಪುಸ್ತಕಕ್ಕೆ ಯಾರೂ ಸಹಿ ಹಾಕುವ ಅಗತ್ಯವೂ ಇಲ್ಲ” ಎಂದರು.

“ಯಾರನ್ನು ಕೇಳಿ ವರದಿಯನ್ನು ಓಪನ್ ಮಾಡಿದ್ದಾರೆ? ನಾವು ಕೊಟ್ಟಿದ್ದನ್ನು ಸರ್ಕಾರಕ್ಕೆ ಯಥಾವತ್ತು ಕೊಡಬಹುದಷ್ಟೇ. ನಿಮಗೆ ಸಮೀಕ್ಷೆ ಮಾಡಲು ಅಧಿಕಾರವಿಲ್ಲ ಎನ್ನುತ್ತಾರೆ. ಆದರೆ ಕಾಯ್ದೆಯ ಸೆಕ್ಷನ್‌ 9 (2)  ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸರ್ವೇ ಮಾಡಲು ಹೇಳುತ್ತದೆ” ಎಂದು ಹೇಳಿದರು.

‘ಇದು ಗಣತಿಯೋ, ಸಮೀಕ್ಷೆಯೋ?’ ಎಂಬ ಪ್ರಶ್ನೆ ಕೇಳಿದಾಗ, “ಗಣತಿ ಎಂದರೆ ಎಣಿಸುವುದು ಎಂದರ್ಥ. ಸರ್ವೇ ಎಂಬುದು ದೊಡ್ಡ ಪದ. ಗಣತಿ ಎಂಬುದು ಸಮೀಕ್ಷೆಯ ಭಾಗ” ಎಂದು ಪ್ರತಿಕ್ರಿಯಿಸಿದರು.

“ಗ್ರಾಮಾಂತರ ಪ್ರದೇಶದಲ್ಲಿ ಶೇ. 98ರಿಂದ ಶೇ.99ರಷ್ಟು ಸಮೀಕ್ಷೆ ನಡೆದಿದೆ. ಬೆಂಗಳೂರಿನಂತಹ ನಗರ ಪ್ರದೇಶದಲ್ಲಿ ಶೇ. 78ರಿಂದ 80ರಷ್ಟು ಸಮೀಕ್ಷೆ ಆಗಿದೆ. ಸರ್ವೇಗೆ ಬೆಂಗಳೂರು ನಗರದಲ್ಲಿ ಜನರ ಸಹಕಾರವೂ ಅಗತ್ಯವಿತ್ತು. ಹೀಗಾಗಿ ತೊಡಕು ಎದುರಿಸಿದ್ದು ಸತ್ಯ” ಎಂದು ಒಪ್ಪಿಕೊಂಡರು.

ಆಯೋಗದ ಸದಸ್ಯರಾದ ಕೆ.ಎನ್.ಲಿಂಗಪ್ಪ ಮಾತನಾಡಿ, ”ಈಗಿನ ಆಯೋಗದ ಅಧ್ಯಕ್ಷರೇ ಗೊಂದಲ ಉಂಟು ಮಾಡಿರಬಹುದು. ನಮಗ್ಯಾರಿಗೂ ಗೊತ್ತಿಲ್ಲ. ನಮ್ಮ ಆಯೋಗದ ವರದಿಯನ್ನು ನೋಡುವುದಕ್ಕೆ ಇನ್ನೊಂದು ಆಯೋಗಕ್ಕೆ ಇಲ್ಲ. ಈ ವರದಿಯನ್ನು ತೆರೆದು ನೋಡಲು ಸರ್ಕಾರ ಹೇಳಿದೆಯಾ? ಅದು ಸರ್ಕಾರದ ಆಸ್ತಿ. ಸರ್ಕಾರ ಹೇಳಿದರೆ ಮಾತ್ರ ತೆರೆದು ನೋಡಬಹುದು” ಎಂದರು.

ಆಯೋಗದ ಇತರ ಮಾಜಿ ಸದಸ್ಯರಾದ ಜಿ.ಡಿ.ಗೋಪಾಲ್‌, ಪ್ರೊ.ಎಂ.ಗುರುಲಿಂಗಯ್ಯ, ಎನ್‌.ಪಿ.ಧರ್ಮರಾಜ್‌, ಶರಣಪ್ಪ ಡಿ.ಮಾನೇಗಾರ ಸುದ್ದಿಗೋಷ್ಠಿಗೋಷ್ಠಿಯಲ್ಲಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X