ಭ್ರಷ್ಟಾಚಾರ ವಿರೋಧಿ ಓಂಬುಡ್ಸ್ಮನ್ ಲೋಕಪಾಲ್ ಅವರ ಉಲ್ಲೇಖದ ಮೇರೆಗೆ ತೃಣಮೂಲ ಕಾಂಗ್ರೆಸ್ ಲೋಕಸಭಾ ಸದಸ್ಯೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ಪ್ರಾಥಮಿಕ ತನಿಖೆ ನಡೆಸಲು ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಿಬಿಐ ಪ್ರಾಥಮಿಕ ತನಿಖೆಯನ್ನು ದಾಖಲಿಸಿಕೊಂಡಿರುವುದು, ಆರೋಪಗಳು ಪೂರ್ಣ ಪ್ರಮಾಣದ ತನಿಖೆಗೆ ಅರ್ಹವೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೊದಲ ಹೆಜ್ಜೆಯಾಗಿದೆ. ಪ್ರಾಥಮಿಕ ತನಿಖೆ ಹಂತದಲ್ಲಿ ಸಾಕಷ್ಟು ಸಾಕ್ಷ್ಯ ಕಂಡುಬಂದರೆ, ಸಿಬಿಐ ಅದನ್ನು ಎಫ್ಐಆರ್ ಆಗಿ ಪರಿವರ್ತಿಸಬಹುದು.
ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಎತ್ತಲು ಲಂಚ ಪಡೆದ ಆರೋಪದ ಮೇಲೆ ಮೊಯಿತ್ರಾ ವಿರುದ್ಧ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಪಾಲರಿಗೆ ದೂರು ನೀಡಿದ್ದರು. ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಇಚ್ಛೆಯ ಮೇರೆಗೆ ಅದಾನಿ ಗ್ರೂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಲು ಮೊಯಿತ್ರಾ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ದುಬೆ ಆರೋಪಿಸಿದ್ದರು.
ಆದರೆ, ಮಹುವಾ ಮೊಯಿತ್ರಾ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ದುಬೆ ಆರೋಪವನ್ನು ನಿರಾಕರಿಸಿದ್ದಾರೆ ಮತ್ತು ಅದಾನಿ ಸಮೂಹದ ವ್ಯವಹಾರಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರಿಂದ ತನ್ನನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದುಬೆ ಅವರು ವಿತ್ತೀಯ ಲಾಭಕ್ಕಾಗಿ ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ಮೊಯಿತ್ರಾ ಆರೋಪಿಸಿದ್ದರು. ಲೋಕಸಭೆಯ ನೈತಿಕ ಸಮಿತಿಯೂ ಮೊಯಿತ್ರಾ ವಿರುದ್ಧದ ಆರೋಪಗಳನ್ನು ಪರಿಶೀಲಿಸುತ್ತಿದೆ.