ಹಿಂದೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡು ಜಲಪಾತ ನೋಡಲು ಪ್ರವಾಸಿಗರು ಮುಗಿಬೀಳುತ್ತಿದ್ದರು. ಆದರೆ, ಸದ್ಯ ಈ ಸ್ಥಳಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆ ಬಹಳ ಕಡಿಮೆ ಆಗಿದೆ.
ಪ್ರವಾಸಿ ತಾಣಕ್ಕೆ ಹೋಗಲು ರಸ್ತೆ ಸಂಪರ್ಕ ಹಾಳಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ ಸ್ಥಳೀಯರು.
ವೀಕೆಂಡ್ ಬಂದರೆ ಸಾಕು ಜನಜಂಗುಳಿಯಿಂದ ತುಂಬುತ್ತಿದ್ದ ಈ ತಾಣದಲ್ಲಿ, ಬೆರಳೆಣಿಕೆಯಷ್ಟು ಜನ ಮಾತ್ರ ಕಾಣಸಿಗುತ್ತಿದ್ದಾರೆ. ಒಮ್ಮೆ ಭೇಟಿ ನೀಡಿದವರು, ಇನ್ನೊಮ್ಮೆ ಇಲ್ಲಿಗೆ ಬರಲು ಮನಸ್ಸು ಮಾಡಲ್ಲ. ಅಲ್ಲದೆ, ಇಲ್ಲಿಗೆ ಹೋಗಬೇಡಿ. ಹೋಗೊದಾದ್ರೆ ಎಚ್ಚರಿಕೆಯಿಂದ ಹೋಗಿ ಎಂದು ಸಲಹೆ ನೀಡುತ್ತಿದ್ದಾರೆ.
ಮಾಗೋಡು ಫಾಲ್ಸ್ ಗೆ ಹೋಗಲು ಇರುವ ರಸ್ತೆ ತುಂಬಾ ಹಾಳಾಗಿದೆ. ಕಾರು, ಟ್ಯಾಕ್ಸಿ ಮೂಲಕ ಈ ಸ್ಥಳಕ್ಕೆ ಬಂದರೆ, ವಾಹನಗಳು ಹಾಳಾಗುವುದು ಖಂಡಿತ ಎನ್ನುವಂತಾಗಿದೆ. ದೂರದೂರಿನಿಂದ ಇಲ್ಲಿಗೆ ಬಂದು ಕಾರು ಹಾಳಾದ್ರೆ ರಿಪೇರಿ ಮಾಡಲು ಕೂಡ ಇಲ್ಲಿ ವ್ಯವಸ್ಥೆಯಿಲ್ಲ. ಹೀಗಾಗಿ ಎಷ್ಟೊ ಜನ ಪ್ರವಾಸಿಗರು ಪರದಾಡಿದ್ದು ಇದೆ.
ಇಲ್ಲಿನ ರಸ್ತೆಗಳು ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನ ಗೋಳಾಗಿ ಪರಿಣಮಿಸುತ್ತಿವೆ. ಇದರಿಂದ ಇಲ್ಲಿಗೆ ಬರುವ ಪ್ರವಾಸಿಗರು ಪರದಾಡುತ್ತಿದ್ದಾರೆ. ಪ್ರವಾಸಿ ತಾಣಗಳಲ್ಲಿ ಮೂಲಭೂತಸೌಕರ್ಯ, ರಸ್ತೆ, ವಸತಿ ಇತ್ಯಾದಿ ಸೌಲಭ್ಯ ಒದಗಿಸಬೇಕಿರುವ ಇಲಾಖೆಗಳು ಕೈಕಟ್ಟಿ ಕುಳಿತಿವೆ. ಈ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ ಎನ್ನುತ್ತಿದ್ದಾರೆ ಸ್ಥಳೀಯರು.