- ‘ಕಾಂಗ್ರೆಸ್ ಗೌರವಯುತವಾಗಿ ಅಂಬೇಡ್ಕರ್ ಅವರ ಶವಸಂಸ್ಕಾರ ಮಾಡಿಲ್ಲ’
- ‘ಮೋದಿ ಅವರು ಅಂಬೇಡ್ಕರ್ ಸ್ಮಾರಕ ಘೋಷಿಸಿ ಉದ್ಘಾಟನೆ ಮಾಡಿದ್ದಾರೆ’
ನೆಹರೂ ಕುಟುಂಬದ ಕಟ್ಟಕಡೆಯ ವ್ಯಕ್ತಿಗೂ ಅಧಿಕಾರ ಕೊಡುವುದೇ ಕಾಂಗ್ರೆಸ್ ಪಕ್ಷದ ಗುರಿ. ಡಾ.ಅಂಬೇಡ್ಕರ್ ಹೆಸರನ್ನು ನುಡಿಮುತ್ತಾಗಿ ಬಳಸುವ ಕಾಂಗ್ರೆಸ್ ಗೌರವಯುತವಾಗಿ ಅವರ ಶವಸಂಸ್ಕಾರವನ್ನೂ ಮಾಡಿಲ್ಲ. ಕಾಂಗ್ರೆಸ್‌ಗೆ ಬಾಬಾಸಾಹೇಬ ಅಂಬೇಡ್ಕರ್ ಹೆಸರು ಹೇಳುವ ನೈತಿಕತೆ ಇದೆಯೇ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹರಿಹಾಯ್ದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಎಸ್‍ಸಿ ಮೋರ್ಚಾ ಏರ್ಪಡಿಸಿದ್ದ “ಸಂವಿಧಾನ ಸಮರ್ಪಣಾ ದಿನ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ನೆಹರೂ ಸ್ಮಾರಕಕ್ಕೆ 30 ಎಕರೆ, ಇಂದಿರಾ ಗಾಂಧಿ ಅವರ ಸ್ಮಾರಕಕ್ಕೆ 20 ಎಕರೆ ನೀಡಿದ್ದರು. ಆದರೆ, ಸಂವಿಧಾನ ನೀಡಿದ ರಾಷ್ಟ್ರೀಯ ಸ್ಮಾರಕವನ್ನೇಕೆ ಮಾಡಿಲ್ಲ? ಅವರ ನೆನಪಾಗಲಿಲ್ಲವೇ? ಮೋದಿಜೀ ಅವರು ಅಂಬೇಡ್ಕರ್ ಅವರ ಸ್ಮಾರಕ ಘೋಷಿಸಿ ಉದ್ಘಾಟನೆ ಮಾಡಿದ್ದಾರೆ” ಎಂದು ತಿಳಿಸಿದರು.
“ಕಾಂಗ್ರೆಸ್ಸಿಗರಿಂದ ಅಂಬೇಡ್ಕರ್ ಅವರ ಬಗ್ಗೆ ತಿಳಿದುಕೊಳ್ಳುವ ಅಗತ್ಯ ಬಿಜೆಪಿಯವರಿಗೆ ಇಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. 26 ನವೆಂಬರ್ ಅನ್ನು ಸಂವಿಧಾನ ಸಮರ್ಪಣಾ ದಿನ ಎಂದು ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸೂಚಿಸಿದ್ದೇ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು. ಬಿಜೆಪಿ ಉದ್ದೇಶವೇ ಕಟ್ಟಕಡೆಯ ವ್ಯಕ್ತಿಗೂ ಕೂಡ ನ್ಯಾಯ ನೀಡುವುದು” ಎಂದರು.
“ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಂದು ಮಹತ್ವದ ದಿನ. 1949 ನವೆಂಬರ್ 26 ರಂದು ಭಾರತೀಯರಿಗೆ ಪವಿತ್ರವಾದ ಸಂವಿಧಾನವನ್ನು ಅಂಗೀಕರಿಸಿದ ದಿನ. ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಶ್ರಮ ಮತ್ತು ದೂರದೃಷ್ಟಿಯು ಈ ನಮ್ಮ ಸಂವಿಧಾನವನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ” ಎಂದು ತಿಳಿಸಿದರು.
“ಸಿದ್ದರಾಮಯ್ಯನವರು ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಬಾಸಾಹೇಬರ ಆಶಯವನ್ನು ಮೋದಿಜೀ ಅವರು ಅನುಷ್ಠಾನ ಮಾಡುತ್ತಿದ್ದಾರೆ. ಸಂವಿಧಾನವನ್ನು ಉಳಿಸುವ ಮಹತ್ವದ ಜವಾಬ್ದಾರಿ ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೂ ಇದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮಾತನಾಡಿ, ‘ಕಾಂಗ್ರೆಸ್ ಪಕ್ಷದವರು ದೀನದಲಿತರನ್ನು ಮತಬ್ಯಾಂಕಾಗಿ ಬಳಸಿಕೊಂಡರೇ ಹೊರತು ಅಂಬೇಡ್ಕರ್ ಅವರು ಬಯಸಿದಂತೆ ದಲಿತರನ್ನು ಮೇಲೆತ್ತುವ ಕೆಲಸ ಮಾಡಲಿಲ್ಲ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ಕೊಡಲು ಹೇಳಿದ್ದರು. ಬಡತನ, ಮೂಢನಂಬಿಕೆ, ಶಿಕ್ಷಣ ವಂಚಿತರಾಗಿರುವ ದಲಿತರನ್ನು ಮೇಲೆತ್ತುವ ಕೆಲಸವನ್ನು ಯಾವತ್ತೂ ಕಾಂಗ್ರೆಸ್ ಮಾಡಲಿಲ್ಲ” ಎಂದು ತಿಳಿಸಿದರು.
“ಸಿದ್ದರಾಮಯ್ಯನವರು ಅಕ್ಕಿ ಕೊಡ್ತೀನಿ, ಬ್ಯಾಳಿ ಕೊಡ್ತೀನಿ, ಕೋಳಿ, ಕುರಿ ಕೊಡ್ತೀನಿ ಎನ್ನುತ್ತಾರೆ. 140 ಕೋಟಿಯಲ್ಲಿ ಶೇ 25 ದಲಿತರಿರುವ ನಾವು ನಮಗೆ ಕೋಳಿ, ಕುರಿ, ಅಕ್ಕಿ ಬೇಡ; ಶಿಕ್ಷಣ ಕೊಡಿ ಎಂದು ಒತ್ತಾಯಿಸಬೇಕು” ಎಂದು ಕಿವಿಮಾತು ಹೇಳಿದರು.
ಸಿ ಟಿ ರವಿ ಮಾತನಾಡಿ, “2015ರವರೆಗೂ ನವೆಂಬರ್ 26ರ ದಿನವನ್ನು ಲಾಡೆ ಎಂದು ಕರೆಯುತ್ತಿದ್ದರು. ಸಂವಿಧಾನ ಗೌರವ ದಿನ ಎಂದು ಅದನ್ನು ಆಚರಿಸಲು ನರೇಂದ್ರ ಮೋದಿಜೀ ಅವರು ತಿಳಿಸಿದರು. ಭಾರತ ರತ್ನವನ್ನು ಅವರಿಗೆ ಅವರೇ ಕೊಟ್ಟುಕೊಂಡರು. ನೈಜ ಭಾರತರತ್ನ ಡಾ. ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ಹಲವು ದಶಕಗಳ ಬಳಿಕ ಅಟಲ್‍ಜೀ ಅವರ ಪ್ರಸ್ತಾವನೆಯ ನಂತರ ಪ್ರಧಾನಿ ವಿ.ಪಿ.ಸಿಂಗ್ ಅವರು ಬಿಜೆಪಿ ಬೆಂಬಲದ ಸರಕಾರ ಇದ್ದಾಗ ನೀಡಿದ್ದರು” ಎಂದು ನೆನಪಿಸಿದರು.
ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, “ಧರ್ಮದ ಮುಂದುವರೆದ ಭಾಗವೇ ಸಂವಿಧಾನ. ಧರ್ಮವನ್ನು ಹೊರತುಪಡಿಸಿದ ಸಂವಿಧಾನ ನಮ್ಮ ದೇಶದಲ್ಲಿ ಇಲ್ಲ” ಎಂದು ಅಭಿಪ್ರಾಯಪಟ್ಟರು.