ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಕದ್ರಿಯಲ್ಲಿರುವ ಕರ್ನಾಟಕ ಒನ್ ಕೇಂದ್ರದಲ್ಲಿನ ಕಳಪೆ ಸೌಲಭ್ಯಗಳ ಬಗ್ಗೆ ಸಾಮಾಜಿಕ ಕಾರ್ಯಕರ್ತ ಗೆರಾರ್ಡ್ ಟವರ್ಸ್ ಶನಿವಾರ ವಿಶಿಷ್ಟ ಪ್ರತಿಭಟನೆ ನಡೆಸಿದರು.
ಕೇಂದ್ರವನ್ನು ಪ್ರವೇಶಿಸಿದ ಕೂಡಲೇ, ಅವರು ಅನಾರೋಗ್ಯದಿಂದ ಬಳಲುತ್ತಿರುವಂತೆ ನಟಿಸಿದ್ದು, ಸುತ್ತಲೂ ನೆರೆದಿದ್ದ ಸಾರ್ವಜನಿಕರ ಗಮನವನ್ನು ಸೆಳೆಯಲು ಮೂರ್ಛೆ ಹೋದರು. ಅನೇಕರು ಅವರಿಗೆ ಸಹಾಯ ಮಾಡಲು ಮುಂದಾಗಿದ್ದು, ಅವರಿಗೆ ನೀರನ್ನು ನೀಡಿದರು.
ಸಾಮಾಜಿಕ ಕಾರ್ಯಕರ್ತ ಗೆರಾರ್ಡ್ ಟವರ್ಸ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಈವರೆಗೆ ಮಾಡಿದ ಹಲವಾರು ಮನವಿಗಳು ವ್ಯರ್ಥವಾದವು. ಹಾಗಾಗಿ ಈಗ ಹೊಸ ರೀತಿಯ ಪ್ರತಿಭಟನೆ ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಹೇಳಿದರು.
“ಹಿರಿಯ ನಾಗರಿಕರು ಸೇರಿದಂತೆ ಸುಮಾರು 1,000 ಜನರು ವಿವಿಧ ಸರ್ಕಾರಿ ಯೋಜನೆಗಳು ಮತ್ತು ಇತರ ಕೆಲಸಗಳಿಗಾಗಿ ಅರ್ಜಿಗಳನ್ನು ಸಲ್ಲಿಸಲು ಕೇಂದ್ರಕ್ಕೆ ಭೇಟಿ ನೀಡುತ್ತಾರೆ. ಕೇಂದ್ರದಲ್ಲಿನ ಹವಾನಿಯಂತ್ರಣ ಘಟಕಗಳು ಹಾಳಾಗಿದ್ದು, 14 ತಿಂಗಳಿಗಿಂತ ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸುತ್ತಿಲ್ಲ. ಕಳೆದ 10 ತಿಂಗಳಿನಿಂದ ನಾನು ಈ ಬಗ್ಗೆ ರಾಜ್ಯ ಮಟ್ಟದ ಅಧಿಕಾರಿಗಳಿಗೆ ದೂರು ನೀಡುತ್ತಿದ್ದೇನೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಆರೋಪಿಸಿದರು.
“ಕೇಂದ್ರದ ಒಳಗೆ ಸರಿಯಾದ ಅನುಕೂಲತೆ ಇಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚಿನ ಕೋಣೆಯ ತಾಪಮಾನದಿಂದಾಗಿ ಮಹಿಳೆಯೊಬ್ಬರು ಮೂರ್ಛೆ ಹೋಗಿ ಕೇಂದ್ರದಲ್ಲಿ ನೆಲದ ಮೇಲೆ ಬಿದ್ದರು. ಕುಡಿಯುವ ನೀರಿಲ್ಲ, ಶೌಚಾಲಯವೂ ಇರಲಿಲ್ಲ. ಪದೇ ಪದೆ ದೂರು ನೀಡಿದ ಬಳಿಕ ಮಹಿಳೆಯರಿಗಾಗಿ ಒಂದು ಶೌಚಾಲಯವನ್ನು ತೆರೆಯಲಾಯಿತು. ವೃದ್ಧರು ಮತ್ತು ದೈಹಿಕ ವಿಕಲಚೇತನರ ಅನುಕೂಲಕ್ಕಾಗಿ ಅಂಗವಿಕಲ ಸ್ನೇಹಿ ಮಾರ್ಗವಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಹಿಂದುಳಿದ ಸಮುದಾಯಗಳ ಏಳಿಗೆಗೆ ಶಿಕ್ಷಣ ಮುಖ್ಯ: ಸಚಿವ ಹೆಚ್ ಸಿ ಮಹದೇವಪ್ಪ
ಕರ್ನಾಟಕ ಒನ್ ಕೇಂದ್ರದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪ್ರಾಮಾಣಿಕ ವಿಧಾನವನ್ನು ಟವರ್ಸ್ ಶ್ಲಾಘಿಸಿದರು. “ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಗತ್ಯವಾದ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಮಾತ್ರ ನಾನು ‘ಅಣಕು ಮೂರ್ಛೆ’ ಪ್ರತಿಭಟನೆಯನ್ನು ನಡೆಸಬೇಕಾಯಿತು” ಎಂದು ಟವರ್ಸ್ ಹೇಳಿದರು.