ಬರದ ತೀವ್ರತೆಗೆ ಸಿಲುಕಿ ಬೆಳೆದ ಫಸಲು ಕೈಗೆ ಸಿಗದೆ ತತ್ತರಿಸಿದ ಎಲ್ಲ ರೈತರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಿಬೇಕೆಂದು ಅಖಿಲ ಭಾರತ ಕಿಸಾನ್ ಸಭಾ ಹಾಗೂ ಭಾರತೀಯ ಮಜ್ದೂರ್ ಯೂನಿಯನ್ ಮುಖಂಡರು ಒತ್ತಾಯಿಸಿದ್ದಾರೆ.
ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಜಿಲ್ಲಾಧ್ಯಕ್ಷ ಮೌಲಾ ಮುಲ್ಲಾ ಹಾಗೂ ರಾಜ್ಯ ಉಪಾಧ್ಯಕ್ಷ ಬಾಬು ಹೊನ್ನಾ ಅವರು ಸಂಯುಕ್ತ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
“ಬೆಳೆ ಪರಿಹಾರ, ಸಮರ್ಪಕ ವಿದ್ಯುತ್ ಪೂರೈಕೆ, ವಿದ್ಯುತ್ ಪರಿವರ್ತಕಗಳ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಈಗಾಗಲೇ ನ.17ರಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರುಗಡೆ ಅಖಿಲ ಭಾರತ ಕಿಸಾನ್ ಸಭಾ ಹಾಗೂ ಭಾರತೀಯ ಮಜ್ದೂರ್ ಯೂನಿಯನ್ ಕಾರ್ಯಕರ್ತರು ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೂ ಈವರೆಗೆ ರಾಜ್ಯ ಸರಕಾರ ಯಾವುದೇ ರೀತಿಯ ಕೈಗೊಂಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
“ಗ್ರಾಮೀಣ ಭಾಗದಲ್ಲಿ ಜಾರಿಗೆ ತಂದಿರುವ ಅವೈಜ್ಞಾನಿಕ ಲೋಡ್ ಶೆಡ್ಡಿಂಗ್ ರದ್ದುಪಡಿಸಿ ನಿರಂತರ 8 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆ ಅಡಿ ದುಡಿಯುವ ಕಾರ್ಮಿಕರಿಗೆ ಈಗಿರುವ 100 ದಿನಗಳ ಬದಲು ಉದ್ಯೋಗದ ದಿನಗಳನ್ನು 150 ಕ್ಕೆ ಹೆಚ್ಚಿಸಬೇಕು. ರೈತರ ಹೊಲಗಳಲ್ಲಿ ಗುಣಮಟ್ಟದ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಮೂಲಕ ಠೇವಣಿ ಆಧರಿತ ಜನರಲ್ ಕನೆಕ್ಷನ್ ವ್ಯವಸ್ಥೆ ಜಾರಿಗೆ ತರಬೇಕು. ಪ್ರಸ್ತುತ ಕಾಡುತ್ತಿರುವ ಬರಗಾಲ ಪರಿಸ್ಥಿತಿಯ ನಿರ್ವಹಣೆಯ ಭಾಗವಾಗಿ ಮನರೇಗಾ ಯೋಜನೆಯಡಿ ರೈತರ ಗದ್ದೆಗಳಿಗೆ ರಸ್ತೆ, ದನಗಳ ಕೊಟ್ಟಿಗೆ ಹಾಗೂ ಕುರಿ ದೊಡ್ಡಿ ನಿರ್ಮಾಣಕ್ಕೆ ಆದ್ಯತೆ ನೀಡಬೇಕು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎಂದೆಂದಿಗೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ: ಉಸ್ತುವಾರಿ ಸಚಿವ ಈಶ್ವರ ಖಂಡ್ರೆ
ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ಮಾರ್ತಾಂಡ ವಾಗ್ಮೋರೆ, ಕಲ್ಯಾಣಿ ಅವಟೆ, ಲಕ್ಷ್ಮಣ ಕಾಂಬಳೆ ಸೇರಿದಂತೆ ಇತರರಿದ್ದರು.