ಟಿಪ್ಪುಸುಲ್ತಾನ್ ದೇಶ ಮತ್ತು ಪ್ರಪಂಚಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಟಿಪ್ಪು ಸುಲ್ತಾನ್ ಜಯಂತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಲಾಗುತ್ತಿದೆ ಎಂದು ಹಿರಿಯ ಹೋರಾಟಗಾರರ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ವಿಷಾದ ವ್ಯಕ್ತಪಡಿಸಿದರು.
ರಾಯಚೂರು ನಗರದ ಕನ್ನಡ ಭವನದಲ್ಲಿ ನೆಹರೂ ಆಜಾದ್ ಸಾಮಾಜಿಕ ಸಬಲೀಕರಣ ಸಂಘ ಎಲ್‌ಬಿಎಸ್ ನಗರ ಮತ್ತು ಟಿಪ್ಪುಸುಲ್ತಾನ್ ಅಭಿಮಾನಿ ಸೇನೆ ಮಾಡಗಿರಿ ಗ್ರಾಮ ಘಟಕದ ಸಂಯುಕ್ತ ಆಶ್ರಯದಲ್ಲಿ ಹಜರತ್ ಟಿಪ್ಪುಸುಲ್ತಾನ್ ಜಯಂತಿ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
“ಟಿಪ್ಪುಸುಲ್ತಾನ್ ಜಯಂತಿಯನ್ನು ಯಾಕೆ ಮತ್ತು ಯಾರು ಆಚರಿಸಬೇಕು ಎನ್ನುವುದು ಮಹತ್ವದ್ದಾಗಿದೆ. ಟಿಪ್ಪುಸುಲ್ತಾನ್ ಜಯಂತಿ ಮುಸ್ಲಿಂ ಸಮಾಜ ಆಚರಿಸಬೇಕೆ ಇಲ್ಲವೇ ಎಂಬುದನ್ನು ಯೋಚಿಸಬೇಕಿದೆ. ರಾಜ್ಯ ಮತ್ತು ದೇಶಕ್ಕೆ ಕೊಡುಗೆ ನೀಡಿರುವವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ” ಎಂದರು.
“ಟಿಪ್ಪುಸುಲ್ತಾನ್ ಜಯಂತಿಯನ್ನು ರಾಜ್ಯದಲ್ಲಿ ಬ್ರಾಹ್ಮಣರೂ ಆಚರಿಸಬೇಕು. ಏಕೆಂದರೆ ಪೇಶ್ವೆಯರು ಶೃಂಗೇರಿ ಶಾರದಾಂಬೆ ಹೋರಾಟದ ನಂತರ ಪುನರ್ ನಿರ್ಮಾಣಕ್ಕೆ ಟಿಪ್ಪುಸುಲ್ತಾನ್ ಕಾರಣ ಭೂತರಾಗಿದ್ದಾರೆ. ಬ್ರಾಹ್ಮಣರು ಶಂಕರಾಚಾರ್ಯರು, ಮಧ್ವಾಚಾರ್ಯರರನ್ನು ನೆನೆಯುವ ಮುನ್ನ ಟಿಪ್ಪುಸುಲ್ತಾನ್ ಅವರನ್ನೂ ನೆನೆಯಬೇಕು. ಟಿಪ್ಪುವಿನ ಮೇಲೆ ಸಂಕುಚಿತ ಮನೋಭಾವನೆ ಬಿಟ್ಟು, ಅವರ ಸಾಧನೆ ಮತ್ತು ವ್ಯಕ್ತಿತ್ವವನ್ನು ನೆನಯಬೇಕಾಗಿದೆ” ಎಂದು ತಿಳಿಸಿದರು.
“ಟಿಪ್ಪುಸುಲ್ತಾನ್ ಮೊದಲ ಬಾರಿಗೆ ರಾಜ್ಯದಲ್ಲಿ ರೇಷ್ಮೆ ಕೃಷಿಯನ್ನು ಪರಿಚಯಿಸಿದರು. ರೇಷ್ಮೆ ಬೆಳೆಗಾರರು, ವರ್ತಕರು, ರೈತರು ಅವರ ಜಯಂತಿಯನ್ನು ಆಚರಿಸಬೇಕು. ಟಿಪ್ಪುಸುಲ್ತಾನ್ ಅವರು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಿ ಅನುಷ್ಠಾನಕ್ಕೆ ತಂದವರು. ಕನ್ನಡಿಗರು ಸ್ವಾಭಿಮಾನ ಕೃತಜ್ಞತೆ ಭಾವವಿರುವವರು ಟಿಪ್ಪು ಜಯಂತಿಯನ್ನು ಆಚರಿಸಬೇಕು. ವಿಜ್ಞಾನಿಗಳು ರಾಕೆಟ್‌ಗಳನ್ನು ಉಡಾವಣೆ ಮಾಡಲು ತಯಾರಿಸುತ್ತಾರೆ. ಆದರೆ ಮೊದಲ ಬಾರಿಗೆ ಯುದ್ಧದ ಸಂದರ್ಭದಲ್ಲಿ ರಾಕೆಟ್ ಪರಿಚರಿಸಿದರು” ಎಂದರು.
“17ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹಾರಾಟದಲ್ಲಿ ರಾಕೆಟ್ ಬಳಸಿದವರಾಗಿದ್ದಾರೆ. ವಿಜ್ಞಾನಿಗಳೂ ಕೂಡ ಟಿಪ್ಪುಸುಲ್ತಾನ್ ಜಯಂತಿಯನ್ನು ಆಚರಿಸಬೇಕಿದೆ. ಟಿಪ್ಪುಸುಲ್ತಾನ್ ಆಡಳಿತ ಸಂದರ್ಭದಲ್ಲಿ ಕಂದಾಯವನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ಹಾಗೂ ಕಂದಾಯ ಆಡಳಿತವನ್ನು ಬಲಪಡಿಸಿಲು ತಿಳಿಸಿಕೊಟ್ಟವರು ಟಿಪ್ಪುಸುಲ್ತಾನ್. ಇವರ ಆಡಳಿತದ ವೇಳೆ ನಾಣ್ಯಗಳನ್ನು ಪರಿಚಯಿಸಿದರು” ಎಂದರು.
“ಈ ಹಿಂದೆ ಕಾಂಗ್ರೆಸ್ ಸರ್ಕಾರ ಆಡಳಿತ ಸಂದರ್ಭದಲ್ಲಿ ಟಿಪ್ಪುಸುಲ್ತಾನ್ ಜಯಂತಿಯನ್ನು ಸರ್ಕಾರದಿಂದ ಆಚರಣೆಗೆ ಜಾರಿಗೆ ತಂದರು. ನಂತರ ಬಿಜೆಪಿ ಸರ್ಕಾರ ಜಯಂತಿ ರದ್ದುಗೊಳಿಸಿತು. ಇದೀಗ ಕಾಂಗ್ರೆಸ್ ಸರ್ಕಾರ ಬಂದಿದೆ. ಟಿಪ್ಪು ಜಯಂತಿ ಒಂದು ಜಾತಿ ಸಮುದಾಯಕ್ಕೆ ಸೀಮಿತವಾಗಿದೆ ಹಾಗೂ ಗುರುತಿಸಲಾಗಿದೆ. ರಾಜ್ಯದಲ್ಲಿ ಸಾಕಷ್ಟು ಮಹನೀಯರ ಜಯಂತಿಯನ್ನು ಸರ್ಕಾರ ಮತ್ತು ಜಾತಿ ಹಾಗೂ ಸಮುದಾಯಗಳು ಆಚರಿಸುತ್ತಿವೆ. ರದ್ದುಗೊಳಿಸದರೆ ಎಲ್ಲ ಜಯಂತಿಗಳನ್ನು ರದ್ದುಪಡಿಸಿ ಜಾತಿ ಸಮುದಾಯಗಳಿಗೆ ಬಿಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ʼನನ್ನ ಅರಿವಿನ ಪ್ರವಾದಿʼ ಪುಸ್ತಕ ಬಿಡುಗಡೆ
ಈ ಸಂದರ್ಭದಲ್ಲಿ ನೆಹರೂ ಸಾಮಾಜಿಕ ಸಬಲೀಕರಣ ಸಂಘದ ಅಧ್ಯಕ್ಷ ರಸೂಲ್ ಅಹಮದ್,
ಟಿಪ್ಪುಸುಲ್ತಾನ್ ಫೆಡರೇಶನ್ ಅಧ್ಯಕ್ಷ ಸೈಯದ್ ಶಾಲಂ, ಟಿಪ್ಪುಸುಲ್ತಾನ್ ಅಭಿಮಾನಿ ಸೇನೆ ಅಧ್ಯಕ್ಷ ಹುಸೇನ್ ಭಾಷಾ, ಬಶೀರ್ ಅಹ್ಮದ್ ಹೊಸಮನಿ, ಹಿಮಾಮುದ್ದಿನ್ ಮಾಡಿಗಿರಿ, ಆಂಜನೇಯ ಜಾಲಿಬೆಂಚಿ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ