- ವಿ.ಸೋಮಣ್ಣರನ್ನು ಎರಡು ಕಡೆ ನಿಲ್ಲಿಸಿ ಬಲಿಪಶು ಮಾಡಿದರು: ಪಾಟೀಲ
- ಬಿಜೆಪಿಯಲ್ಲಿನ ಅಸಮಾಧಾನಿತ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ
ಲೋಕಸಭಾ ಚುನಾವಣೆ ಹೊತ್ತಿಗೆ ಅಥವಾ ನಂತರ ಬಿಜೆಪಿಯೊಳಗೆ ದೇಶ ಮತ್ತು ರಾಜ್ಯದಲ್ಲಿ ಬಹಳಷ್ಟು ಬದಲಾವಣೆ ಆಗುತ್ತವೆ. ಸೋಮಣ್ಣ, ಸಿ ಟಿ ರವಿ, ಯತ್ನಾಳ್ ಸೇರಿ ಹಲವರು ಅಸಮಾಧಾನಗೊಂಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಎರಡು ಕಡೆ ವಿ.ಸೋಮಣ್ಣರನ್ನು ನಿಲ್ಲಿಸಿ ಬಲಿಪಶು ಮಾಡಿದರು ಎಂದು ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
ವಿಜಯಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ” ಎಂದರು.
“ಬಿಜೆಪಿಯಲ್ಲಿ ಅಸಮಾಧಾನ ಹೊಂದಿದ ಸಾಕಷ್ಟು ನಾಯಕರು ಸಿಎಂ, ಡಿಸಿಎಂ, ಸತೀಶ್ ಹಾಗೂ ನನ್ನನ್ನು ಸಂಪರ್ಕಿಸಿದ್ದಾರೆ. ಕಾದು ನೋಡಿ, ಬದಲಾವಣೆಗಳು ಖಚಿತ” ಎಂದು ತಿಳಿಸಿದರು.
ಡಿ ಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ವಿಚಾರವಾಗಿ ಪ್ರತಿಕ್ರಿಯಿಸಿ, “ಕಾನೂನಿನ ಪ್ರಕಾರವೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಅಡ್ವೊಕೇಟ್ ಜನರಲ್ ಸಲಹೆ ಪಡೆದು ಅನುಮತಿ ಹಿಂಪಡೆಯಲಾಗಿದೆ. ಹಿಂದಿನ ಬಿಜೆಪಿ ಸಂಪುಟದಲ್ಲಿ ಈ ಬಗ್ಗೆ ಮೊದಲು ಅನುಮೋದನೆ ಪಡೆದಿತ್ತು. ಸಂಪುಟ ಒಪ್ಪಿಗೆ ಬಳಿಕ ಎಜಿ ಅಭಿಪ್ರಾಯ ಪಡೆದಿತ್ತು ಎಂಬ ಆರೋಪವಿದೆ. ಡಿ.ಕೆ ಶಿವಕುಮಾರ್ ವಿರುದ್ಧ ಷಡ್ಯಂತ್ರ ಹಣೆಯಲಾಗಿದೆ ಎಂಬ ಶಂಕೆ ಕೂಡ ಇದೆ. ಹೀಗಾಗಿ ಸಂಪುಟದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆಯಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ
ಲಿಂಗಾಯತ, ಒಕ್ಕಲಿಗರಿಂದ ಜಾತಿ ಗಣತಿ ವರದಿ ಮಂಡನೆಗೆ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸಿ, “ಈ ಬಗ್ಗೆ ಸಿಎಂ ಜೊತೆ ಚರ್ಚಿಸಿದ ಬಳಿಕ ನನ್ನ ಅಧಿಕೃತ ನಿಲುವು ಸ್ಪಷ್ಟಪಡಿಸುತ್ತೇನೆ. ಇನ್ನುಳಿದಂತೆ ಜಾತಿ ಗಣತಿ ವರದಿ ಮಂಡನೆಯಿಂದ ಜಾತಿಗಳ ನಡುವೆ ಸಂಘರ್ಷ ವಿಚಾರ. ಅದು ಏನೇ ಇದ್ದರೂ ಪಕ್ಷ ಹಾಗೂ ಸರ್ಕಾರದ ಚೌಕಟ್ಟಿನಲ್ಲಿ ಮಾತನಾಡುತ್ತೇವೆ” ಎಂದು ಹೇಳಿದರು.