“ಜಾತಿ ಸಮೀಕ್ಷೆ ಹೊರಬಂದರೆ ಯಾರು ಎಷ್ಟು ಕಬಳಿಸಿದ್ದಾರೆ ಎಂಬುದೆಲ್ಲ ಬಟಾಬಯಲಾಗುತ್ತದೆ…”
“ಇಂದು ಜಾತಿ ಸಮೀಕ್ಷೆಯನ್ನು ವಿರೋಧಿಸುತ್ತಿರುವವರು ಲೂಟಿಕೋರರು. ದಲಿತರಿಗೆ ಸೇರಿದ್ದನ್ನು ವಂಚಿಸಿದ ದರೋಡೆಕೋರರು” ಎಂದು ಕರ್ನಾಟಕ ಸರ್ಕಾರದ ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆಯಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಭಾನುವಾರ ಆರಂಭವಾಗಿರುವ ದುಡಿಯುವ ಜನರ 72 ಗಂಟೆಗಳ ಮಹಾ ಧರಣಿ, ರಾಜಭವನ್ ಚಲೋದ ಸಂವಿಧಾನ ಸಂಕಲ್ಪದಲ್ಲಿ ಅವರು ಮಾತನಾಡಿದರು.
ಸಂವಿಧಾನ ಪೀಠಿಕೆಯ ಫಲಕ ಅನಾವರಣ ಮಾಡಿದ ಅವರು, “ಹಿಂದುಳಿದ ಜಾತಿಗೆ ಸೇರಿದ್ದನ್ನು ಕಬಳಿಸಿರುವ ಕೋಮುವಾದಿಗಳು ಜಾತಿ ಸಮೀಕ್ಷೆಯನ್ನು ವಿರೋಧಿಸುತ್ತಿದ್ದಾರೆ. ಜಾತೀಯತೆ ಮೂಲಕ ಅಧಿಕಾರ ಹಿಡಿದಿರುವ ಬಂಡುಕೋರರು ಇವರು. ಜಾತಿ ಸಮೀಕ್ಷೆ ಹೊರಬಂದರೆ ಯಾರು ಎಷ್ಟು ಕಬಳಿಸಿದ್ದಾರೆ ಎಂಬುದೆಲ್ಲ ಬಟಾಬಯಲಾಗುತ್ತದೆ. ಹೀಗಾಗಿ ಜಾತಿ ಗಣತಿಯನ್ನು ವಿರೋಧಿಸುತ್ತಿದ್ದಾರೆ. ವರದಿಯನ್ನು ಕೊಡಬೇಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಮಠಾಧೀಶರೂ ಇದಕ್ಕೆ ಬೆಂಬಲಿಸಿದ್ದಾರೆ. ನನ್ನ ಬಳಿ ಬಂದು ಮಾತನಾಡುವವರು ಸಾಮಾಜಿಕ ನ್ಯಾಯದ ಕುರಿತು ಹೇಳುತ್ತಾರೆ. ನಾಳೆ ಹೋಗಿ ಅದರ ವಿರುದ್ಧ ಸ್ಟೇಟ್‌ಮೆಂಟ್ ಕೊಡುತ್ತಾರೆ” ಎಂದು ಟೀಕಿಸಿದರು.
“ಸಿದ್ದರಾಮಯ್ಯನವರ ಸರ್ಕಾರ ಜಾತಿ ಸಮೀಕ್ಷೆ ಮಾಡಬಾರದು, ವರದಿ ಸ್ವೀಕರಿಸಬಾರದು ಎನ್ನುತ್ತಿದ್ದಾರೆ. ಕಾಂತರಾಜ ಆಯೋಗವು ವರದಿಯಲ್ಲಿ ಸಿದ್ದರಾಮಯ್ಯನವರ ಫೋಟೋವನ್ನೂ ಹಾಕಿಲ್ಲ, ಕುಮಾರಸ್ವಾಮಿಯವರ ಫೋಟೋ ಹಾಕಿ ವರದಿ ನೀಡಿದೆ. ಕಾಂತರಾಜ ಅವರು ಅಂದಿನ ಸಿಎಂ ಯಡಿಯೂರಪ್ಪನವರಿಗೆ ಕಾಗದ ಬರೆದು, “ವರದಿ ಸಿದ್ಧವಿದೆ. ಸ್ವೀಕರಿಸಲು ಅಪಾಯ್ಟ್‌ಮೆಂಟ್ ಕೇಳಿದರು. ಮುಖ್ಯಮಂತ್ರಿಯವರಿಗೆ ಒಂದು ಪತ್ರ ಬರೆದು ನಂತರ ಪತ್ರಕರ್ತರಿಗೆ ವರದಿಯ ಅಂಶಗಳನ್ನು ಬಿಡುಗಡೆ ಮಾಡಿ ಎಂದು ಕಾಂತರಾಜ ಅವರಿಗೆ ತಿಳಿಸಿದ್ದೆ. ಅವರು ಹಾಗೆ ಮಾಡಲಿಲ್ಲ. ಇಂದು ವರದಿಯೇ ಇಲ್ಲ ಎನ್ನುತ್ತಿದ್ದಾರೆ. ವರದಿಯನ್ನು ಯಾಕೆ ವಿರೋಧಿಸುತ್ತಿದ್ದಾರೆ? ಯಾಕೆಂದರೆ ಈಗ ಫುಲ್ ಮೀಲ್ಸ್ ಹೊಡೆಯುತ್ತಿದ್ದಾರೆ. ವರದಿ ಬಂದರೆ ಯಾರು ಎಷ್ಟು ಅನುಭವಿಸುತ್ತಿದ್ದಾರೆ, ಕ್ರೋಢೀಕರಿಸಿದ್ದಾರೆ, ಮಠಗಳು ಎಷ್ಟು ನುಂಗಿವೆ, ಎಷ್ಟು ಆಸ್ತಿ ಕಬಳಿಸಿದ್ದಾರೆ ಎಂಬುದೆಲ್ಲ ಬಯಲಾಗುತ್ತದೆ” ಎಂದು ವಿವರಿಸಿದರು.
“ಸಾಮಾಜಿಕ ನ್ಯಾಯದಿಂದ ಹೆದರಿಕೆಗೊಂಡ ಶಕ್ತಿಗಳು ಮೀಸಲಾತಿಯನ್ನು ವಿರೋಧಿಸುತ್ತಿವೆ. ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಮೊದಲಿಗೆ ತಂದಿದ್ದು ಕರ್ನಾಟಕ. ರಕ್ತ ಕ್ರಾಂತಿ ಇಲ್ಲದೆ ಬದಲಾವಣೆ ತರುವುದು ಮೀಸಲಾತಿ. ಈ ರಾಷ್ಟ್ರದಲ್ಲಿ ಮೊದಲ ಬಾರಿಗೆ ನಡೆದ ಜನಗಣತಿ ಜಾತಿ ಗಣತಿಯಾಗಿತ್ತು. 1872ನೇ ಇಸವಿಯಲ್ಲಿ ಮೊಟ್ಟಮೊದಲ ಜನಗಣತಿ ನಡೆಯಿತು. ಆ ಬಳಿಕ ಹತ್ತು ವರ್ಷಗಳಿಗೊಮ್ಮೆ ಜನಗಣತಿ ನಡೆಯುತ್ತಾ ಬಂದಿದೆ” ಎಂದ ಅವರು, “ಸಾರ್ವಜನಿಕ ಹುದ್ದೆಗಳಲ್ಲಿ ಎಲ್ಲೆಲ್ಲಿಯೂ ಬ್ರಾಹ್ಮಣರೇ ಇರುವುದನ್ನು ನೋಡಿ ಇವರೇ ಬಹುಸಂಖ್ಯಾತರು ಎಂದು ಭಾವಿಸಲಾಗಿತ್ತು. ಆದರೆ ಅಂದಿನ ಜನಗಣತಿಯು ಮೂರು ಪರ್ಸೆಂಟ್ ಮಾತ್ರ ಬ್ರಾಹ್ಮಣರು ಇದ್ದಾರೆಂಬುದನ್ನು ಹೊರಗೆಡವಿತ್ತು. ಮೈಸೂರು ಸಂಸ್ಥಾನ ಮೊಟ್ಟಮೊದಲಿಗೆ 1874ರಲ್ಲಿ ಮೀಸಲಾತಿಯನ್ನು ಜಾರಿಗೊಳಿಸಿತು. ಆಗ ಮೀಸಲಾತಿಯ ಪರಿಕಲ್ಪನೆಯೇ ಇರಲಿಲ್ಲ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಮೈಸೂರಿನಲ್ಲಿ ಆಯಿತು” ಎಂದು ಸ್ಮರಿಸಿದರು.
“ಎಲ್ಲರ ಭರವಸೆ ಇರುವುದು ನ್ಯಾಯಾಂಗದ ಮೇಲೆ. ಜಡ್ಜ್‌ಗಳು ಕಳಿಸಿದ ಪಟ್ಟಿಗೆ ಅನುಮೋದನೆ ನೀಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತದೆ. ಬಹಳ ಯಶಸ್ವಿಯಾಗಿ ಕುತಂತ್ರವನ್ನು ಸರ್ಕಾರ ಅನುಸರಿಸುತ್ತದೆ. ಪ್ರಾಮಾಣಿಕ, ನಿರಂಕುಶ ಮತಿಗಳಾಗಿರುವ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದರೆ ಅವರು ನೇಮಕಾತಿ ಮಾಡಲ್ಲ. ಅಂತಹ ವ್ಯಕ್ತಿಗಳನ್ನು ತಿಂಗಳುಗಟ್ಟಲೆ ಕಾಯಿಸಿಬಿಟ್ಟರೆ ಸಹಜವಾಗಿ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ತಾವು ನೇಮಕಾತಿಗೆ ಕೊಟ್ಟ ಅನುಮತಿಯನ್ನು ಪ್ರಾಮಾಣಿಕರು ಹಿಂಪಡೆಯುತ್ತಾರೆ. ಗೋಪಾಲ ಸುಬ್ರಮಣ್ಯಂ ಅವರ ನೇಮಕಾತಿಗೆ ಒಪ್ಪಿಗೆ ನೀಡಲಿಲ್ಲ, ಯಾಕೆಂದು ಉತ್ತರವನ್ನೂ ಮೋದಿಯವರು ನೀಡಲಿಲ್ಲ. ಪಾರಿನ್ ಟೂರ್ ಹೋಗಿಬಿಡುತ್ತಾರೆ. ಈಗ ನೇಮಕ ಮಾಡುತ್ತಿದ್ದಾರೆಂದರೆ ಸರ್ಕಾರದ ಮಾತು ಕೇಳುವಂಥವರು ಆಗಿರಬೇಕು. ಇಂದಿರಾಗಾಂಧಿಯವರ ಥರ ಸಂವಿಧಾನವನ್ನು ಸಸ್ಪೆಂಡ್ ಮಾಡದಿದ್ದರೂ ಪರವಾಗಿಲ್ಲ, ಜಾರಿಗೊಳಿಸದಿದ್ದರೆ ಸಾಕು ಎಂಬುದು ಸರ್ಕಾರದ ನಡೆಯಾಗಿದೆ” ಎಂದು ಎಚ್ಚರಿಸಿದರು.
“ಸಂವಿಧಾನವನ್ನು ವಿಫಲ ಮಾಡುವಂತಹ ವ್ಯಕ್ತಿಗಳನ್ನು ನ್ಯಾಯಾಂಗಕ್ಕೆ ನೇಮಕ ಮಾಡಲಾಗುತ್ತಿದೆ. ನ್ಯಾಯಾಂಗ ನಿಷ್ಕ್ರಿಯವಾದರೆ ಸಾಕು. ಸಂವಿಧಾನಕ್ಕೆ ಹೊಡೆಯುವ ಕೊನೆಯ ಮೊಳೆ ಅದಾಗಿರುತ್ತದೆ. ಮೋದಿಯವರ ಕಾಲದಲ್ಲಿ ಇದು ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದು ಮೋದಿ ಸರ್ಕಾರದ ಸಾಧನೆ. ನ್ಯಾಯಾಂಗ ಎತ್ತ ಸಾಗಿದೆ ಎಂದು ಕೇಳಲಿಕ್ಕೆ ನನಗೆ ದುಃಖ ವಾಗುತ್ತದೆ. ಜನರ ಹಕ್ಕುಗಳ ಪಾಡೇನು, ಸಂವಿಧಾನದ ಗತಿಯೇನು?” ಎಂದು ಪ್ರಶ್ನಿಸಿದರು.
“ರಾಜ್ಯದಲ್ಲಿ ಸಂವಿಧಾನ ಜಾರಿಗೊಳಿಸಲು ರಾಜ್ಯಪಾಲರು ಇರುತ್ತಾರೆ. ಪ್ರತಿಯೊಂದು ಕಾಯ್ದೆಗೂ ಅವರ ಅಂಕಿತ ಮಾಡಲ್ಲ. ಸುಪ್ರೀಂಕೋರ್ಟ್ ಉಗಿಯುತ್ತಿದೆ. ರಾಜ್ಯಪಾಲರ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.
“ನೀವು ಒಂದು ನದಿಯ ಓರೆಕೋರೆಯನ್ನು ತಿದ್ದಬಹುದೇ ಹೊರತು, ಅದರ ಪಾತ್ರವನ್ನಾಗಲೀ, ಧಿಕ್ಕನ್ನಾಗಲೀ ಬದಲಿಸಲು ಸಾಧ್ಯವಿಲ್ಲ. ಸಂವಿಧಾನದ ವಿರುದ್ಧ ಪಾರ್ಲಿಮೆಂಟ್ ನಿಂತರೆ ಪಾರ್ಲಿಮೆಂಟ್ ಸುಟ್ಟುಬೂದಿಯಾಗುತ್ತದೆ. ಒಂದು ಸಾವಿರ ಸಭೆಗಳನ್ನು ನಡೆಸಿ ಸಂವಿಧಾನದ ಪ್ರತಿಯೊಂದು ಶಬ್ಧವನ್ನು ಪರಿಶೀಲಿಸಿ, ಮೂರು ಸಲ ಓದಿ, ಚರ್ಚೆ ಮಾಡಿ ಪ್ರಾಮಾಣಿಕವಾಗಿ ಸಂವಿಧಾನವನ್ನು ಈ ದೇಶಕ್ಕೆ ಕೊಟ್ಟ ಕೀರ್ತಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಈ ದೇಶವನ್ನು ಆಳುತ್ತಿರುವ ಶಕ್ತಿಗಳು ಐದು ವರ್ಷದ ಮೇಲೆ ಈ ಸಂವಿಧಾನ ಇರುವುದಿಲ್ಲ, ಅದರ ಆಯಸ್ಸು ಮ್ಯಾಟ್ನಿ ಷೋ ಅಷ್ಟೆ. ಈ ದೇಶ ನರನಾಡಿಗಳನ್ನು ನಡೆಸುತ್ತಿರುವ ಆರ್‌ಎಸ್‌ಎಸ್ ಸರಸಂಘಚಾಲಕರು ಸಂವಿಧಾನದ ಭವಿಷ್ಯ ಐದು ವರ್ಷ ಎಂದಿದ್ದರು. ಒಂದು ರಾಷ್ಟಕ್ಕೆ ಒಂದೇ ನೀತಿ, ಒಂದೇ ಸಂಸ್ಕೃತಿ ಅವರ ನೀತಿ. ಭಾರತದ ಬಹುಮುಖಿ ಸಮಾಜವನ್ನು ಅನಾವರಣಗೊಳಿಸುವ ಭದ್ರಬುನಾದಿಯ ಮೇಲೆ ರಚಿತವಾದದ್ದು ಭಾರತ ಸಂವಿಧಾನ ಎಂದು ಬಣ್ಣಿಸಿದರು.
“ಬಾಬಾಸಾಹೇಬರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಶ್ರೀಲಂಕಾ ದೇಶ ಸರ್ ಐ ಜೆನ್ನಿಂಗ್ಸ್ ಮೂಲಕ ಸಂವಿಧಾನ ರೂಪಿಸಿಕೊಂಡಿತು. ಪಾಕಿಸ್ತಾನ ಕೂಡ ಅದೇ ರೀತಿ ಮಾಡಿತು. ಆ ದೇಶಗಳಲ್ಲಿ ಸಂವಿಧಾನ ಏನಾಯಿತೆಂದು ತಿಳಿದಿದೆ. ಬಹುತೇಕ ರಾಷ್ಟ್ರಗಳಲ್ಲಿ ಸಂವಿಧಾನ ನುಚ್ಚುನೂರಾಗಿದೆ. ಸರಾಸರಿ 17 ವರ್ಷಗಳು ಸಂವಿಧಾನದ ಆಯಸ್ಸು ಎನ್ನಲಾಗುತ್ತದೆ. ಆದರೆ ನಮ್ಮ ಸಂವಿಧಾನಕ್ಕೆ 74 ವರ್ಷಗಳಾಗಿವೆ” ಎನ್ನುವ ಮೂಲಕ ಅಂಬೇಡ್ಕರ್ ಅವರ ಕೊಡುಗೆಯನ್ನು ನೆನೆದರು.
ಸರ್ವಾಧಿಕಾರಿಯಾಗಬೇಕು ಎಂದು ಹೊರಟ ಇಂದಿರಾಗಾಂಧಿಯರ ಕಥೆ ಏನಾಯಿತು? ಸಂವಿಧಾನವನ್ನು ಅಮಾನತಿನಲ್ಲಿ ಇಟ್ಟು ಎಮರ್ಜೆನ್ಸಿ ಹೇರಿದರು. ನಿಮ್ಮನ್ನು ಸೋಲಿಸುವವರು ಯಾರೂ ಇಲ್ಲ, ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ ಎಂದು ಭಟ್ಟಂಗಿಗಳು ಹೊಗಳುತ್ತಿದ್ದರು. ಆದರೆ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತರು. ನರೇಂದ್ರ ಮೋದಿಯವರು ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕುಟುಕಿದರು.
ಭಾರತದ ಸಂವಿಧಾನದ ಅಡಿಯಲ್ಲಿ ಪ್ರಧಾನಿ, ರಾಷ್ಟ್ರಪತಿ, ಪಾರ್ಲಿಮೆಂಟ್, ನ್ಯಾಯಾಂಗ, ಕಾರ್ಯಾಂಗ ಯಾರೂ ಮೊದಲ ವ್ಯಕ್ತಿಯಲ್ಲ. ಈ ಎಲ್ಲ ಸಂಸ್ಥೆಗಳು ಈ ಸಂವಿಧಾನದ ಶಿಶುಗಳು. ಈ ಸಂವಿಧಾನ ಹೇಳಿದಂತೆ ಅವರು ನಡೆದುಕೊಳ್ಳಬೇಕು. ಅವರು ಹೇಳಿದಂತೆ ಸಂವಿಧಾನ ರಚಿಸಲಾಗುವುದಿಲ್ಲ. ಇಂದಿರಾ ಗಾಂಧಿಯವರು ಮಾಡಿದ ಒಂದು ತಪ್ಪಿಗೆ ಪರಿತಪಿಸಿದರು. ತುರ್ತುಪರಿಸ್ಥಿತಿ ಪ್ರಮಾದ ಎಸಗಿದೆ ಎಂದು ಬಿಬಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ಸಂವಿಧಾನ ಎಲ್ಲರಿಗಿಂತ ಶ್ರೇಷ್ಟ. ಸಂವಿಧಾನವೇ ಈ ದೇಶದ ಮೂಲ ಶಕ್ತಿ. ಈ ದೇಶದ ಪ್ರಜೆಗಳೇ ಈ ದೇಶದ ಮಾಸ್ಟರ್ ಎಂದರು.
ಕರ್ನಾಟಕ ಸರ್ಕಾರ ಪ್ರತಿ ಶಾಲೆಯಲ್ಲೂ ಸಂವಿಧಾನದ ಪೀಠಿಕೆಯನ್ನು ಪ್ರತಿದಿನ ಪಠಿಸುವುದನ್ನು ಆರಂಭಿಸಿದೆ. ಪ್ರಸ್ತಾವನೆಯನ್ನು ಸಣ್ಣ ಮಕ್ಕಳು ಬಾಯಿ ಪಾಠ ಮಾಡುತ್ತಿದ್ದಾರೆ. ಈ ಬದಲಾವಣೆಗೆ ತಂದಿರುವುದಕ್ಕೆ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರಕ್ಕೆ ಧನ್ಯವಾದಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೋರಾಟಗಾರ್ತಿ ಡಾ.ವಿಜಯಮ್ಮ ಸಂವಿಧಾನ ಪೀಠಿಕೆ ಬೋಧನೆ ಮಾಡಿದರು. ದೆಹಲಿ ರೈತ ಚಳವಳಿಯ ’ಕದನ ಕಣ’ ಕೃತಿಯನ್ನು ಪ್ರೊ.ಪುರುಷೋತ್ತಮ ಬಿಳಿಮಲೆ ಬಿಡುಗಡೆ ಮಾಡಿದರು. ಕಾರ್ಮಿಕ ಸಂಘಟನೆಗಳ ಪರವಾಗಿ ಕೆ.ಎನ್.ಉಮೇಶ್, ದಲಿತ ಸಂಘರ್ಷ ಸಮಿತಿಯ ಪರವಾಗಿ ವಿ.ನಾಗರಾಜ್, ರೈತ ಸಂಘಟನೆಗಳ ಪರವಾಗಿ ಅಮೀನ್ ಪಾಷ ದಿದ್ಗಿ ಹಾಜರಿದ್ದರು.
ಹೋರಾಟಗಾರರಾದ ಚಾಮರಸ ಮಾಲಿ ಪಾಟೀಲ್, ಶ್ರೀನಿವಾಸ್, ಎಚ್.ಆರ್.ನವೀನ್‌ಕುಮಾರ್, ದೀಪಕ್, ಅಬ್ಬಣಿ ಶಿವಪ್ಪ, ಎಚ್.ಎನ್.ಗೋಪಾಲಗೌಡ, ಡಾ.ಸಿದ್ಧನಗೌಡ ಪಾಟೀಲ್, ನಾಗನಾಥ್, ಪುಟ್ಟಮಾದು, ಕೆ.ವಿ.ಭಟ್, ನಾಗಮ್ಮಾಳ್, ಎಂ.ಝಡ್ ಅಲಿ, ಗುರುಪ್ರಸಾದ್ ಕೆರೆಗೋಡು, ಮೈತ್ರಿ, ಕೆ.ಎಸ್.ವಿಮಲಾ, ಕಾಳಪ್ಪ, ಕರಿಯಪ್ಪ ಗುಡಿಮನಿ, ಇಕೆಎನ್ ರಾಜನ್, ಡಿ.ಎಚ್.ಪೂಜಾರ್, ಧನಶೇಖರ್, ಸಿದ್ಧಗೌಡ ಮೋದಗಿ, ಸುಷ್ಮಾ ವರ್ಮ, ಎಸ್.ಆರ್.ಹಿರೇಮಠ, ಮುನಿಯಪ್ಪ ಹೋರಾಟದ ಅಧ್ಯಕ್ಷೀಯ ಮಂಡಳಿಯಲ್ಲಿದ್ದಾರೆ.