ಬಸವಣ್ಣನವರ ವೈಚಾರಿಕತೆ ತತ್ವ ಬಗ್ಗೆ ಮಾತನಾಡುವರಿಗೆ ದೇಶದ್ರೋಹದ ಪಟ್ಟ ಕಟ್ಟಲಾಗುತ್ತಿದೆ. ಇಂದು ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದಂತಾಗಿದೆ. ಬಸವತತ್ವದ ಬಗ್ಗೆ ಮಾತನಾಡಬೇಕಾದರೆ ಹೆದರಿಕೆ ಆಗುತ್ತಿದೆ ಎಂದು ಬೈಲೂರು ಮಠದ ನಿಜಗುಣಾನಂದ ಸ್ವಾಮಿಜಿ ಕಳವಳ ವ್ಯಕ್ತಪಡಿಸಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ವಿಶ್ವ ಬಸವ ಧರ್ಮ ಟ್ರಸ್ಟ್ ಆಯೋಜಿಸಿದ್ದ 44ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವದಲ್ಲಿ ‘ಅನುಭವ ಮಂಟಪ ಮತ್ತು ಮಹಿಳಾ ಮಿಸಲಾತಿ’ ಕುರಿತು ಅವರು ಮಾತನಾಡಿದರು.
“ಬಸವತತ್ವ ಹೇಳಿದರೆ ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಆದರೆ ಯಾವುದೇ ಬೆದರಿಕೆಗಳಿಗೆ ಬಗ್ಗದೆ ಲಿಂಗಾಯತ ಧರ್ಮ ಉಳಿಸಿಕೊಂಡು ಹೋಗಬೇಕಾಗಿದೆ. ನಾನು ಮೂವತ್ತು ವರ್ಷಗಳಿಂದ ಪ್ರವಚನ ಹೇಳುತ್ತಿದ್ದೇನೆ. ಆದರೆ ಯಾವತ್ತೂ ಹೆದರಿಕೆಯಾಗಲಿಲ್ಲ. ಇಂದು ಭಯವಾಗುತ್ತಿದೆ. ಬಸವಣ್ಣನವರ ವೈಚಾರಿಕತೆ ಹೇಳುವವರ ಬಾಯಿಗೆ ಬೀಗ ಹಾಕುವ ಹುನ್ನಾರ ನಡೆಯುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಬಸವ ಧರ್ಮಕ್ಕೆ ಅನ್ಯರಿಂದ ಆತಂಕವಿಲ್ಲ. ಲಿಂಗಾಯತರಲ್ಲಿನ ವೀರಶೈವ ಮನಸ್ಥಿತಿಯ ಜನರಿಂದಲೇ ಲಿಂಗಾಯತ ಧರ್ಮಕ್ಕೆ ಕಂಟಕವಿದೆ. ಆದ್ದರಿಂದ ಮೊದಲು ವೈದಿಕ ಆಚರಣೆಯಿಂದ ಹೊರಬರುವಂತೆ ನಮ್ಮವರನ್ನು ಜಾಗೃತಿಗೊಳಿಸಬೇಕೆಂದು” ಕರೆ ನೀಡಿದರು.
ಡಾ ಬಸವಲಿಂಗ ಪಟ್ಟದೇವರು ಮಾತನಾಡಿ, “ಬಸವಕಲ್ಯಾಣ ದಿಂದ 12ನೇ ಶತಮಾನದಲ್ಲಿ ಶರಣರು ಕಲ್ಯಾಣದಿಂದ ಉಳವಿಗೆ ಹೋಗಿದ್ದರು, ಆದರೆ ಇಂದು ಶರಣರು ಉಳವಿಯಿಂದ ಬಸವಕಲ್ಯಾಣ ಅನುಭವ ಮಂಟಪ ಉತ್ಸವಕ್ಕೆ ಪಾದಯಾತ್ರೆ ಮುಖಾಂತರ ಬಂದಿದ್ದಾರೆ. ಈ ಶ್ರೇಯಸ್ಸು ಬಸವಾನಂದ ಸ್ವಾಮೀಜಿಗಳಿಗೆ ಸಲ್ಲುತ್ತದೆ. ಪ್ರತಿ ವರ್ಷದ ಅನುಭವ ಮಂಟಪ ಉತ್ಸವಕ್ಕೆ ಉಳವಿಯಿಂದ ಶರಣರು ಬರಬೇಕೆಂದು” ಹೇಳಿದರು.
ಈ ಸುದ್ದಿ ಓದಿದ್ದೀರಾ? ಒಂದು ಕಾರಣಕ್ಕೆ ಸಾಯೋಣ ಅಂತ ಬಂದಿದ್ವಿ ಅಂದ್ರು ಇಳಿ ವಯಸ್ಸಿನವರು: ಪ್ರೊ.ಬಿಳಿಮಲೆ ಕಂಡಂತೆ ದೆಹಲಿ ರೈತ ಹೋರಾಟ
ಕಾರ್ಯಕ್ರಮದಲ್ಲಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಚಂದ್ರಕಾಂತ ಬೆಲ್ಲದ, ಪ್ರೊ. ಶಿವಗಂಗಾ ರುಮ್ಮಾ, ರಾಜಶೇಖರ ಸೋಲಾಪುರೆ, ಮಲ್ಲಿಕಾರ್ಜುನ ಗುಂಗೆ ಸೇರಿದಂತೆ ಪೂಜ್ಯರು, ಗಣ್ಯರು ಉಪಸ್ಥಿತರಿದ್ದರು.