ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ನರ್ಸರಿ ಶಾಲೆ ಕಟ್ಟಡವೊಂದು ನ.27ರ ಬೆಳಗಿನ ಜಾವ ಕುಸಿದು ಬಿದ್ದಿದೆ.
ಬೆಂಗಳೂರಿನ ಶಿವಾಜಿನಗರದ ಕುಕ್ಸ್ ರೋಡ್‌ನ ಬಿ ಕ್ರಾಸ್‌ನಲ್ಲಿರುವ ಬಿಬಿಎಂಪಿಯ ನರ್ಸರಿ ಶಾಲೆ ಕುಸಿದು ಬಿದ್ದಿದೆ. ಈ ಶಾಲೆಯಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ನಿತ್ಯ 75 ರಿಂದ 80 ಮಕ್ಕಳು ಶಾಲೆಗೆ ಬರುತ್ತಿದ್ದವು.
ಈ ಅವಘಡ ನಡೆಯುವುದಕ್ಕೂ ನರ್ಸರಿ ಶಾಲೆ ಆರಂಭವಾಗುವುದಕ್ಕೂ ಕೆಲವೇ ಗಂಟೆಗಳ ವ್ಯತ್ಯಾಸವಿತ್ತು. ಬೆಳಗಿನ ಜಾವ ಈ ಕಟ್ಟಡ ಕುಸಿದಾಗ ಕಟ್ಟಡದಲ್ಲಿ ಯಾರು ಇರಲಿಲ್ಲ. ಇದರಿಂದ 80ಕ್ಕೂ ಹೆಚ್ಚು ಮಕ್ಕಳು, ಶಿಕ್ಷಕರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಶಾಲಾ ಆವರಣದಲ್ಲಿ ನಿಲ್ಲಿಸಿದ್ದ ಹತ್ತಾರು ವಾಹನಗಳು ಕಟ್ಟಡ ಅವಶೇಷಗಳಡಿ ಸಿಲುಕಿ ನಜ್ಜುಗುಜ್ಜಾಗಿವೆ.
ಸ್ಥಳೀಯರ ಆಕ್ರೋಶ
“ಈ ಕಟ್ಟಡ ಬೆಳಗಿನ ಜಾವ ಬಿದ್ದಿದ್ದರಿಂದ ಶಾಲೆಯಲ್ಲಿ ಯಾವ ಮಕ್ಕಳು ಇರಲಿಲ್ಲ. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಶಾಲೆಯಲ್ಲಿ 80ಕ್ಕೂ ಹೆಚ್ಚು ಮಕ್ಕಳು ನರ್ಸರಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಒಂದು ವೇಳೆ ಶಾಲಾ ಸಮಯದಲ್ಲಿ ಕಟ್ಟಡ ಕುಸಿದಿದ್ದರೆ ಮಕ್ಕಳ ಗತಿ ಏನು? ಅಪಾಯ ಜರುಗಿದ್ದರೆ ಇದಕ್ಕೆ ಯಾರು ಹೊಣೆ? ಈ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದರೂ ಸಹ ಇಲ್ಲೇ ಶಾಲೆ ನಡೆಸುತ್ತಿರುವುದು ಎಷ್ಟು ಸರಿ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಶಾಲೆಗೆ ಸುಮಾರು 75 ವರ್ಷಗಳ ಇತಿಹಾಸವಿದ್ದು, ಬಹಳ ವರ್ಷಗಳಿಂದಲೇ ಈ ಕಟ್ಟಡ ಕುಸಿಯುವ ಭೀತಿಯಲ್ಲಿತ್ತು. ಇದು ಬಿಬಿಎಂಪಿಗೆ ಸೇರಿದ ಇಂಗ್ಲಿಷ್ ಶಾಲೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಡಿ. 2ರಿಂದ ಮೂರು ದಿನ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ
ಬಿಬಿಎಂಪಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜೆಸಿಬಿ ಕಟ್ಟಡದ ಅವಶೇಷಗಳ ತೆರವು ಕಾರ್ಯ ನಡೆಸಿದೆ. ಇನ್ನು ವಾಹನಗಳಿಗೆ ಹಾನಿಯಾಗಿದ್ದರಿಂದ ಮಾಲೀಕರು ಕಂಗಾಲಾಗಿದ್ದಾರೆ.
A kindergarten run by the government collapsed in the wee hours of monday 27 November, damaging couple of cars but thanks god no one was injured, #bangalore #Bengaluru #bbmp #shivajinagar #school pic.twitter.com/pjfhhBEdRM
— Anees Shariff (@ShariffAnees) November 27, 2023
“ಈ ಶಾಲೆಯಲ್ಲಿ ಕಲಿಯುತ್ತಿದ್ದ ಶಾಲಾ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು” ಎಂದು ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಭರವಸೆ ನೀಡಿದ್ದಾರೆ.