ಶಿವಮೊಗ್ಗದಲ್ಲಿ ಸರ್ಕಾರಿ ಬಸ್‌ಗಾಗಿ ಜನರು ಪರದಾಡುತ್ತಿದ್ದು, ಉಚಿತ ಬಸ್ ಇರಲಿ, ಸದ್ಯ ಬಸ್ ಬಂದರೆ ಸಾಕಪ್ಪ ಎನ್ನುತ್ತಿದ್ದಾರೆ. ದಿನ ನಿತ್ಯ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲವೆಂದು ಸಾರ್ವಜನಿಕರು ದೂರುತ್ತಿದ್ದಾರೆ.
ಗಂಟೆಗಟ್ಟಲೇ ಕಾದರೂ ಬಸ್ ಬರುವುದೇ ಇಲ್ಲ. ಇದರಿಂದ ತಡವಾಗಿ ಬರುವ ಬಸ್‌ಗಳಲ್ಲಿ ನೂಕು ನುಗ್ಗುಲು ಜಾಸ್ತಿಯಾಗುತ್ತಿದೆ. ಕೆಲವು ದಿನಗಳ ಹಿಂದೆ ಶಿವಮೊಗ್ಗ-ಭದ್ರಾವತಿ ಮಧ್ಯ ಬರುವ ಮಾಚೇನಹಳ್ಳಿ ಹಾಲಿನ ಡೈರಿ ಬಳಿ ಬಸ್ ವಿಪರೀತ ರಶ್ ಇದ್ದ ಕಾರಣ ಒಬ್ಬ ಮಹಿಳೆ ಬಸ್ ಬಾಗಿಲಲ್ಲಿ ನಿಂತು, ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದರು.
ಶಿವಮೊಗ್ಗ ನಗರದ ಯಾವುದೇ ಬಸ್ ನಿಲ್ದಾಣ ನೋಡಿದರೂ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು ಕಾಣ ಸಿಗುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಹಿರಿಯ ನಾಗರಿಕರಿಗೆ, ಆಶಕ್ತರಿಗೆ, ಆಸ್ಪತ್ರೆಗೆ ಹೋಗುವ ರೋಗಿಗಳಿಗೆ, ಕಾರ್ಮಿಕರುಗಳು ಹಾಗೂ ಆಸ್ಪತ್ರೆ ಸಿಬ್ಬಂದಿ, ಗಾರ್ಮೆಂಟ್ಸ್ ಉದ್ಯೋಗಿಗಳು, ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ಪ್ರಯಾಣಿಸುವ ಶಿಕ್ಷಕ ವೃಂದ, ಬಸ್ ನಂಬಿಕೊಂಡಿರುವ ರೈತಾಪಿ ಜನಗಳಗೆ ತುಂಬಾ ಅನಾನುಕೂಲವಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ.
‘ಸರ್ಕಾರದ ಶಕ್ತಿ ಯೋಜನೆಯೇ ಇದಕ್ಕೆ ಕಾರಣ’ ಎಂದು ಹಲವರು ದೂರುತ್ತಿದ್ದರೆ, ಸಾರ್ವಜನಿಕರು ಸಾರಿಗೆ ಅಧಿಕಾರಗಳ ಬಳಿ ತಮ್ಮ ಅಹವಾಲು ಹೇಳಿಕೊಂಡರೂ ಕೂಡ ಸರಿಪಡಿಸಿಕೊಡುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಸಾರಿಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ, ಇನ್ನೂ ಕೂಡ ಸರಿಯಾದ ಕ್ರಮವಹಿಸಿಲ್ಲ. ಆದಷ್ಟು ಬೇಗ ಇದಕ್ಕೆ ಸರಿಯಾದ ಕ್ರಮ ವಹಿಸಿ ಸಕಾಲದಲ್ಲಿ ಬಸ್ ಒದಗಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಅಗ್ರಹಿಸುತ್ತಿದ್ದಾರೆ.