ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಪ್ರಯಾಣಿಕರು ಭದ್ರತಾ ತಪಾಸಣೆಯ ಸಲುವಾಗಿ ಹೆಚ್ಚಿನ ಸಮಯ ಕಾಯಬೇಕಾದ ಸ್ಥಿತಿ ಇದೆ. ಈ ಸಮಸ್ಯೆಯನ್ನು ದೂರ ಮಾಡಲು ಏರ್‌ಪೋರ್ಟ್ ಅಧಿಕಾರಿಗಳು ಇದೀಗ, ಭದ್ರತಾ ತಪಾಸಣೆಗಾಗಿ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರಯಾಣಿಕರು ಟರ್ಮಿನಲ್ 2ಗೆ ತೆರಳಿದಾಗ ಭದ್ರತಾ ತಪಾಸಣೆಗಾಗಿಯೇ ಹಲವು ಗಂಟೆಗಳ ಸಮಯ ಹಿಡಿಯುತ್ತದೆ. ಭದ್ರತಾ ತಪಾಸಣೆ ನಡೆಸುವ ವೇಳೆ, ಪ್ರಯಾಣಿಕರ ಬ್ಯಾಗ್ ಚೆಕ್ ಮಾಡುವಾಗ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಸಾಧನಗಳನ್ನು ಭದ್ರತಾ ಸಿಬ್ಬಂದಿಗೆ ತೆಗೆದು ತೋರಿಸಬೇಕಾಗಿತ್ತು. ಇದರಿಂದ ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಈ ತೊಂದರೆಯನ್ನು ತಪ್ಪಿಸಲು ಕೆಂಪೇಗೌಡ ವಿಮಾನ ನಿಲ್ದಾಣ ಸಂಸ್ಥೆ ಮೊದಲ ಬಾರಿಗೆ ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ (ಸಿಟಿಎಕ್ಸ್) ಯಂತ್ರ ಸ್ಥಾಪಿಸಿದೆ. ಇದರಿಂದ ಪ್ರಯಾಣಿಕರ ಸಮಯ ಮತ್ತಷ್ಟು ಉಳಿತಾಯವಾಗಲಿದೆ.
ಪ್ರಯಾಣಿಕರ ಬ್ಯಾಗ್‌ನಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆಯದಂತೆ ಸ್ಕ್ಯಾನ್ ಮಾಡಲು ಈ ನೂತನ ತಂತ್ರಜ್ಞಾನ ಸಹಾಯ ಮಾಡುತ್ತದೆ. ಭದ್ರತಾ ತಪಾಸಣೆಗಾಗಿ ಹೆಚ್ಚು ಸಮಯ ವ್ಯಯಿಸುವ ಸಮಸ್ಯೆ ತಪ್ಪುತ್ತದೆ. ಡಿಸೆಂಬರ್‌ನಿಂದ ಈ ಯೋಜನೆಯನ್ನು ಜಾರಿಗೆ ತರುವ ಬಗ್ಗೆ ನಿಲ್ದಾಣ ಸಂಸ್ಥೆ ಯೋಜನೆ ರೂಪಿಸಿದೆ.
ಸದ್ಯ ಸಿಟಿಎಕ್ಸ್ ಯಂತ್ರಗಳ ಪ್ರಯೋಗಾತ್ಮಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಮೊದಲ ಹಂತದಲ್ಲಿ ದೇಶೀಯ ಗೇಟ್‌ಗಳಲ್ಲಿ ಮಾತ್ರ ನಿಯೋಜಿಸಲಾಗುವುದು ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೇಕಿಲ್ಲ ಕ್ಯಾಂಪಸ್ ಸೆಲೆಕ್ಷನ್?: ಎಎಪಿ ಅಭಿಯಾನ
“ಈ ನೂತನ ಯಂತ್ರ ಅಟೋಮೆಟಿಕ್ ಟ್ರೆ ರಿಟ್ರೈವಲ್ ಸಿಸ್ಟಮ್ ವ್ಯವಸ್ಥೆ ಹೊಂದಿದೆ. ಮಾನವ ದೇಹವನ್ನು ಸಂಪೂರ್ಣ ಸ್ಕ್ಯಾನ್ ಮಾಡುತ್ತದೆ. ಪ್ರಯಾಣಿಕರ ಬ್ಯಾಗ್ ಅನ್ನು ಈ ತಂತ್ರಜ್ಞಾನ ಬಳಸಿ ತಪಾಸಣೆ ಮಾಡಬಹುದು. ಇದು ಭದ್ರತಾ ತಪಾಸಣೆಗೆ ಬೇಕಾದ ಟ್ರೇಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ” ಎಂದು ವಿಮಾನ ನಿಲ್ದಾಣದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದರು.
ಈ ನೂತನ ತಂತ್ರಜ್ಷಾನವೂ ದ್ರವ ಪದಾರ್ಥಗಳು, ಸೇಂಟ್ ಹಾಗೂ ಜೆಲ್‌ಗಳನ್ನು ಪತ್ತೆ ಮಾಡುತ್ತದೆ. ಸ್ಪೋಟಕ ವಸ್ತುಗಳನ್ನು ಗುರುತಿಸಿ ಅಲಾರಾಮ್ ಹೊಡೆಯುತ್ತದೆ. ಇದರ 3ಡಿ ಚಿತ್ರವನ್ನು ಕ್ಲಿಕ್ ಮಾಡಿ ಸಿಬ್ಬಂದಿಗೆ ಕಳುಹಿಸುತ್ತದೆ.