ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಹವಳಗಾ ಸರಹದ್ದಿನಲ್ಲಿರುವ ರೇಣುಕಾ ಸಕ್ಕರೆ ಕಾರ್ಖಾನೆ ಹಾಗೂ ಆಲಮೆಲ ತಾಲೂಕಿನ ಮನಿಲೀ ಶುಗರ್ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಉಂಟಾಗುತ್ತಿರುವ ರಸ್ತೆ ಅಪಘಾತಗಳನ್ನು ಖಂಡಿಸಿ ವಿವಿಧ ಸಂಘಟನೆಗಳು ಇಂದು (ನ.27) ಪ್ರತಿಭಟನೆ ನಡೆಸಿದವು.
ಆಲಮೇಲ ತಾಲೂಕಿನ ಬಗಲೊರು ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ಸಮತಾವಾದ ಮತ್ತು ಮಹರ್ಷಿ ವಾಲ್ಮೀಕಿ ಸಂಘಟನೆ, ಕನಕದಾಸ ಸಂಘಟನೆ, ಟಿಪ್ಪು ಸುಲ್ತಾನ ಸಂಘಟನೆ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಪ್ರತಿಭಟನೆ ಮಾಡಿ ತಹಸೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಲಕರಾದ ಧರ್ಮಣ್ಣ ಎಂಟಮಾನ ಮಾತನಾಡಿ, ‘ಸುಮಾರು ವರ್ಷಗಳಿಂದ ಕಬ್ಬಿನ ವಾಹನಗಳು ಹಗಲು ಮತ್ತು ರಾತ್ರಿ ವೇಳೆಯಲ್ಲಿ ರಸ್ತೆ ಮೇಲೆ ಬರುವಾಗ ವಾಹನಗಳ ಶಬ್ದದಿಂದ ಹಿಂದಿನಿಂದ ಹಾರ್ನ್ ಹಾಕಿದರೂ ಕೇಳಿಸುವುದಿಲ್ಲ. ಆ ವಾಹನಗಳ ಹಿಂದುಗಡೆ ರೇಡಿಯಮ್ ಮಿಶ್ರಿತ ಸೂಚನಾ ಫಲಕವನ್ನು ಹಾಕದೆ ವಾಹನ ಚಲಾವಣೆ ಮಾಡುವುದರಿಂದ ವಾಹನ ಸವಾರರಿಗೆ ರಾತ್ರಿ ವೇಳೆಯಲ್ಲಿ ತುಂಬಾ ತೊಂದರೆಯಾಗುತ್ತಿದೆ’ ಎಂದರು.
‘ಅಪಘಾತ ಸಂಭವಿಸಲು ಇವು ಸಹ ಕಾರಣವಾಗಿವೆ. ಇದರಿಂದ ಅನೇಕ ಅಪಘಾತಗಳು ಸಂಭವಿಸಿ ಸಾವು, ನೋವು ಉಂಟಾಗಿವೆ. ಇತ್ತೀಚಿನ ಘಟನೆಯಲ್ಲಿ ಕುಳೆಕುಟಾಗಿ ಗ್ರಾಮದ ಹತ್ತಿರ ಪಂಕ್ಚರ್ ಆಗಿ ನಿಂತಿರುವ ಕಬ್ಬಿನ ವಾಹನಕ್ಕೆ ಎರಡು ಬಾರಿ ಬೇರೆ ವಾಹನ ಗುದ್ದಿ, ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು, ಇನ್ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಿಂಗಣ್ಣ ವಾಲಿಕಾರ, ಹಾವಣ್ಣ ಕಕ್ಕಳಮೇಲಿ, ರಾಹುಲ್ ಹೊಸಮನಿ, ಮೆಹಬೂಬ ಸಿಂದಗಿಕರ, ಸಿದ್ದಣ್ಣ ಐರೊಡಗಿ, ಸುರೇಶ್ ವಾಲಿಕಾರ, ಸದ್ದಾಂ ಜಮಾದಾರ, ಭೀಮರಾವ ಕಟ್ಟಿಮನಿ, ಲಕ್ಷ್ಮಣ ಗೌಂಡಿ, ಶೇಕರ ಮಗಾಣಗೆರಿ ಇತರರು ಇದ್ದರು.