ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಹೊನಗುಂಟಾ ಗ್ರಾಮವು ಗ್ರಾಮ ಪಂಚಾಯತ್ ಕೇಂದ್ರವಾಗಿದೆ. ಆದರೆ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಗ್ರಾಮ ಪಂಚಾಯಿತಿಯು ಸಂಪೂರ್ಣವಾಗಿ ವಿಫಲವಾಗಿದೆ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆಯ ಕಾರ್ಯದರ್ಶಿ ರಾಜೇಂದ್ರ ಅತನೂರ ಆಕ್ರೋಶ ವ್ಯಕ್ತಪಡಿಸಿದರು.
ಹೊನಗುಂಟಾ ಗ್ರಾಮಸ್ಥರಿಗೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಲು ಆಗ್ರಹಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಗ್ರಾಮ ಪಂಚಾಯತ್ ಎದುರುಗಡೆ ಪ್ರತಿಭಟಿಸಿ ಗ್ರಾ.ಪಂ. ಪಿಡಿಓಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು, ಸೂಕ್ತ ರಸ್ತೆ, ಬೀದಿ ದೀಪ, ಸಾರ್ವಜನಿಕ ಗ್ರಂಥಾಲಯ, ಮಹಿಳಾ ಶೌಚಾಲಯ ಹಾಗೂ ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತವು ಸೋತಿದೆ. ಮತ್ತೊಂದೆಡೆ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೆಲಸ ನೀಡುತ್ತಿಲ್ಲ. ಇದರಿಂದ ಗ್ರಾಮಸ್ಥರು ಉದ್ಯೋಗಕ್ಕಾಗಿ ನಗರಗಳಿಗೆ ಗೂಳೆ ಹೋಗುತ್ತಿದ್ದಾರೆ. ಕೂಡಲೇ ನಿರುದ್ಯೋಗ ಕಾರ್ಮಿಕರಿಗೆ ಮನರೇಗಾ ಕೆಲಸ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
“ದಶಕಗಳಿಂದ ವಾಸವಿರುವ ಇಲ್ಲಿನ ಜನರು ನಿಗದಿತವಾಗಿ ತಮ್ಮ ಮನೆಯ ತೆರಿಗೆ ಪಾವತಿಸಿದ್ದಾರೆ. ಆದರೆ ಜನರು ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡಿದ್ದಾರೆಂದು ಹೇಳುತ್ತಿದ್ದಾರೆ. ಮುಗ್ಧ ಜನರ ಹಣ ದುರ್ಬಳಕೆ ಮಾಡಿಕೊಂಡು ಸರಕಾರಕ್ಕೆ ಹಾಗೂ ಜನರಿಗೆ ಮೋಸ ಮಾಡುತ್ತಿದ್ದಾರೆ. ಅಲ್ಲದೆ ಒಬ್ಬರ ಮನೆಯ ಹಕ್ಕು ಪತ್ರವನ್ನು ಮತ್ತೊಬ್ಬರ ಹೆಸರಿಗೆ ಮಾಡಿಕೊಟ್ಟು ಜನರನ್ನು ಆಂತಕಕ್ಕೆ ದೂಡಿದ್ದಾರೆ” ಎಂದು ಆರೋಪಿಸಿದರು.
ತಾವು ವಾಸಿಸುತ್ತಿರುವ ಮನೆಯು ಬೇರೆಯವರ ಹೆಸರಿನಲ್ಲಿರುವುದು ಕಂಡು ಗ್ರಾಮಸ್ಥರು ದಿಕ್ಕುತೋಚದೆ ಹಲವು ಬಾರಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯಿತ್ ಹಾಗೂ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿ ತಪ್ಪು ಸರಿಪಡಿಸಲು ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮದ ಸಮಸ್ಯೆಗಳನ್ನು ಪರಿಹರಿಸಬೇಕು. ನಿರ್ಲಕ್ಷ್ಯ ವಹಿಸಿದರೆ ತೀವ್ರ ಹೋರಾಟ ಸಂಘಟಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಮಹಾಧರಣಿ | ಮೋದಿ ಸರ್ಕಾರದಲ್ಲಿ ಮಹಿಳೆಯರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ: ಮೀನಾಕ್ಷಿ ಬಾಳಿ
ಈ ಸಂದರ್ಭದಲ್ಲಿ ಪ್ರಮುಖರಾದ ನೀಲಕಂಠ ಹುಲಿ, ಚಂದ್ರು ಮರಗೋಳ, ದೇವರಾಜ ರಾಜೋಳ, ಮೌನೇಶ ರಾಜೋಳ, ದೀಪಣ್ಣ ಓಲೇ, ಭೀಮು ವಾಲಿಕರ, ಬಸಲಿಂಗಪ್ಪ ದಂಡಾ, ಬಾಬು ಆಡಿನ್ ಇದ್ದರು.