ಪ್ರತಿ ವರ್ಷ ಚಳಿಗಾಲದ ಅಧಿವೇಶನ ಕಲಾಪಕ್ಕಿಂತ ಹೆಚ್ಚಾಗಿ, ಸುವರ್ಣ ಸೌಧದ ಹೊರಗೆ ನಡೆಯುವ ಸರಣಿ ಪ್ರತಿಭಟನೆಗಳ ಸದ್ದು ಜೋರಾಗಿರುತ್ತದೆ. ಆದರೆ, ಇಲ್ಲಿ ನಡೆದ ಬಹುತೇಕ ಪ್ರತಿಭಟನೆಗಳಿಗೆ ಸಿಕ್ಕಿ ಪರಿಹಾರ ಮಾತ್ರ ಸೊನ್ನೆ.
ಈ ಬಾರಿ ಡಿಸೆಂಬರ್ 4ರಿಂದ 15ರವರೆಗೆ ಚಳಿಗಾಲ ಅಧಿವೇಶನದ ನಡೆಯಲಿದ್ದು ರೈತರು, ಕಾರ್ಮಿಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗೆ ತಯಾರಾಗಿವೆ. ಪ್ರತಿ ವರ್ಷದಂತೆ ಬರೀ ಭರವಸೆ ನೀಡುವ ಬದಲು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿಯಲು ನಿರ್ಧರಿಸಿವೆ.
ಪ್ರತಿಭಟನಾ ನಿರತರಿಗಾಗಿ ಸುವರ್ಣ ವಿಧಾನಸೌಧದ ಬಳಿ ವೇದಿಕೆ ಹಾಗೂ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಭದ್ರತೆಗಾಗಿ ಪೊಲೀಸರ ನಿಯೋಜನೆ ಮಾಡಲಾಗುತ್ತದೆ. ಕಳೆದ ವರ್ಷ 80 ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಬಾರಿ 20 ಸಂಘಟನೆಯವರು ಮಾತ್ರ ಮನವಿಪತ್ರ ಸಲ್ಲಿಸಿದ್ದಾರೆ. ಅಧಿವೇಶನ ಆರಂಭವಾಗುವ ಹಿಂದಿನ ದಿನದವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶವಿದೆ.
ಈ ಬಾರಿ ಪ್ರತಿಭಟನೆಗೆ ಹಲಗಾದ ಸುವರ್ಣ ಗಾರ್ಡನ್ ಮತ್ತು ಕೊಂಡಸಕೊಪ್ಪ ಗುಡ್ಡದ ಮೇಲೆ ವ್ಯವಸ್ಥೆ ಮಾಡಲಾಗಿದೆ.
ಸದನದೊಳಗೆ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಆದ್ಯತೆ ಕೊಡುವುದಾಗಿ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿ ಇತರ ಸಚಿವರಿಗೆ ಪತ್ರ ಬರೆದಿರುವ ಹೊರಟ್ಟಿ ಅವರು ‘ವಿವಿಧ ಸಂಘಟನೆಗಳೊಂದಿಗೆ ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸಿ’ ಎಂದು ಕೋರಿದ್ದಾರೆ.