ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಹಸುಗೂಸು ಮಾರಾಟ ದಂಧೆ ಮತ್ತೆ ಬೆಳಕಿಗೆ ಬಂದಿದೆ. ಮಕ್ಕಳಿಲ್ಲದವರಿಗೆ ಲಕ್ಷಾಂತರ ರೂಪಾಯಿಗೆ ಮಕ್ಕಳನ್ನು ಮಾರಾಟ ಮಾಡುವುದು. ಈ ಗ್ಯಾಂಗ್‌ನ ಕಸುಬಾಗಿದೆ. ಮಕ್ಕಳಿಲ್ಲದವರಿಗೆ ಮಗುವನ್ನು ನೀಡುವುದಕ್ಕಾಗಿ ಆಸ್ಪತ್ರೆ, ಮನೆ ಹಾಗೂ ಒಬ್ಬಂಟಿ ಮಹಿಳೆಯರು ಇರುವ ಮನೆಗಳಿಂದ ಮಕ್ಕಳನ್ನು ಕಳ್ಳತನ ಮಾಡುವುದು ಜತೆಗೆ ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಮಾರಾಟ ಮಾಡುತ್ತಿದ್ದರು. ಇದೀಗ 20 ದಿನದ ಗಂಡು ಹಸುಗೂಸನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ತಮಿಳುನಾಡಿನ ಈರೋಡ್ ಮೂಲದ ಮುರುಗೇಶ್ವರಿ(22) ಪರಿಚಯಸ್ಥರಾದ ಕಣ್ಮನ್ ರಾಮಸ್ವಾಮಿ(51), ಹೇಮಲತಾ (27), ಶರಣ್ಯಾ (33) ಎಂಬವರನ್ನು ಆರ್.ಆರ್.ನಗರದ ರಾಜರಾಜೇಶ್ವರಿ ದೇವಸ್ಥಾನದ ಬಳಿ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ಬೆಂಗಳೂರು ನಿವಾಸಿ ಮಹಾಲಕ್ಷ್ಮೀ ಎಂಬಾಕೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ತಮಿಳುನಾಡು ಮತ್ತು ಕರ್ನಾಟಕದಲ್ಲಿ ಸಕ್ರಿಯಾವಾಗಿದ್ದ ನವಜಾತಶಿಶು ಅಕ್ರಮ ಮಾರಾಟ ಜಾಲವನ್ನು ಸಿಸಿಬಿ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ಭೇದಿಸಿದೆ.
ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ಹಸುಗೂಸು ಮಾರಾಟ ಮಾಡುವ ತಂಡವನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಸುಳಿವು ಆಧರಿಸಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿಗಳನ್ನು ಬಂಧಿಸಿ 20 ದಿನದ ಗಂಡು ಮಗುವನ್ನು ರಕ್ಷಣೆ ಮಾಡಿದ್ದಾರೆ.
ಮಕ್ಕಳಾಗದ ದಂಪತಿಗೆ ಲಕ್ಷಲಕ್ಷಕ್ಕೆ 20 ದಿನದ ಮಗುವನ್ನು ಮಾರಾಟ ಮಾಡಲು ಆರೋಪಿಗಳು ಕಳೆದ ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರಕ್ಕೆ ರೆಡ್ ಕಲರ್ ಶಿಫ್ಟ್ ಕಾರಿನಲ್ಲಿ ಬಂದಿದ್ದಾರೆ. ಬೆಂಗಳೂರು ಮೂಲದ ಮಹಾಲಕ್ಷ್ಮಿ ಎಂಬುವವರು ಮಗು ಮಾರಾಟ ಮಾಡಲು ಕರೆಸಿದ್ದರು ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾರೆ.
ಬಂಧಿತ ಆರೋಪಿಗಳು ಇಲ್ಲಿಯವರೆಗೂ ಬರೋಬ್ಬರಿ 60ಕ್ಕೂ ಹೆಚ್ಚು ಶಿಶುಗಳನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಹೆತ್ತ ತಾಯಿಯೇ ತನ್ನ 20 ದಿನದ ಹಸುಗೂಸು ಮಾರಾಟಕ್ಕೆ ಮುಂದಾಗಿದ್ದರು ಎಂದು ತಿಳಿದುಬಂದಿದೆ. ಮರುಗೇಶ್ವರಿಗೆ ಸೇರಿದ 20 ದಿನದ ಗಂಡು ಮಗುವನ್ನು ರಕ್ಷಿಸಿ, ತಾಯಿ, ಮಗನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇನ್ನು ಪ್ರಕರಣದಲ್ಲಿ ಬಂಧನಕ್ಕೊಳಗಾದ ಮುರುಗೇಶ್ವರಿ ಅವಿವಾಹಿತೆ ಎಂಬುದು ಗೊತ್ತಾಗಿದೆ. ಆದರೂ, ಆಕೆ ಇದು ತನ್ನ ಮಗು ಎಂದು ಹೇಳುತ್ತಿದ್ದಾಳೆ. ಹೀಗಾಗಿ ತಾಯಿ, ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಖಚಿತ ಪಡಿಸಿಕೊಳ್ಳಲಾಗುತ್ತದೆ
ಈ ಸುದ್ದಿ ಓದಿದ್ದೀರಾ? ‘ಮಂತ್ರ ಮಾಂಗಲ್ಯ’ದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ನಟಿ ಪೂಜಾ ಗಾಂಧಿ
ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
“ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಹಸುಗೂಸು ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಕೂಡಲೇ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ವಿಫ್ಟ್ ಕಾರಿನಲ್ಲಿ ಮಗು ಸಾಗಿಸುತ್ತಿದ್ದಾಗ ಸಿಸಿಬಿ ತಂಡ ದಾಳಿ ಮಾಡಿತ್ತು. ಇಪತ್ತು ದಿನದ ಗಂಡು ಮಗುವನ್ನು ರಕ್ಷಣೆ ಮಾಡಲಾಗಿದೆ. ಬಂಧಿತ ಆರೋಪಿಗಳು ತಮಿಳುನಾಡು ಮೂಲದವರು. ಬಡ ಮಹಿಳೆಯರಿಗೆ ಗರ್ಭಧಾರಣೆ ಮಾಡಿಸಿ ಮಗು ಮಾರುತ್ತಿದ್ದರು” ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ ಹೇಳಿದ್ದಾರೆ.
“ಆ ಮಗುವನ್ನು 8 ರಿಂದ 10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ತಮಿಳುನಾಡಿನ ಆಸ್ಪತ್ರೆಗಳು, ವೈದ್ಯರು ಮತ್ತು ಬೆಂಗಳೂರಿನ ಓರ್ವ ಮಹಿಳೆ ಮಕ್ಕಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದಳು” ಎಂದು ತಿಳಿಸಿದ್ದಾರೆ.