ವೈಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರೆದ್ರೂ ಮೌಢ್ಯ ಆಚರಣೆಗಳನ್ನ ಮಾತ್ರ ಬಿಟ್ಟಿಲ್ಲ. ಇದಕ್ಕೆ ಗದಗ ಜಿಲ್ಲೆಯ ಹಳ್ಳಿಗಳು ಸಾಕ್ಷಿ. ಸೋದರ ಸೊಸೆಗೆ ಸೋದರತ್ತೆಯರು ಸೀರೆ ಉಡಿಸಬೇಕು ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದು, ಗದಗ ಜಿಲ್ಲೆಯ ಕೆಲ ಭಾಗದಲ್ಲಿ ಕಳೆದ 10-15 ದಿನಗಳಿಂದ ಸೀರೆಗಳ ಮಾರಾಟ ಬಲು ಜೋರಾಗಿದೆ. ಮಹಿಳೆಯರು ತಮ್ಮ ಅಣ್ಣ ಅಥವಾ ತಮ್ಮನಿಗೆ ಒಬ್ಬಳೇ ಮಗಳಿದ್ದರೆ ಸೋದರತ್ತೆ ಸೀರೆ ಉಡಿಸಬೇಕು. ಇಲ್ಲಾಂದ್ರೆ ಕೇಡಾಗುತ್ತೆ ಅನ್ನೋ ಸುದ್ದಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹಳ್ಳಿಗಳಲ್ಲಿ ಹಬ್ಬಿದೆ.
ಹೀಗಾಗಿ ನಮ್ಮ ಅಣ್ಣ ಅಥವಾ ತಮ್ಮನ ಮಗಳಿಗೆ ಒಳ್ಳೆಯ ಸೀರೆ ಕೊಡಿ ಅಂತ ಮಹಿಳೆಯರು ಕೇಳ್ತಾಯಿದ್ದಾರೆ. ಇದರಿಂದ ಬಟ್ಟೆ ಅಂಗಡಿಗಳ ಮಾಲೀಕರು ಭರ್ಜರಿ ವ್ಯಾಪಾರವಾಗುತ್ತಿದೆ. ಭೀಕರ ಬರ ಹಿನ್ನೆಲೆಯಲ್ಲಿ ಈ ಬಾರಿ ಹಬ್ಬಗಳಲ್ಲಿ ಜನರು ಬಟ್ಟೆ ಖರೀದಿಗೆ ಮುಂದಾಗಿರಲಿಲ್ಲ. ಆದರೆ, ಈ ವದಂತಿ ಗ್ರಾಮೀಣ ಭಾಗದ ಜನರನ್ನು ದಂಗು ಬಡಿಸಿದೆ. ಮಹಿಳೆಯರು ಪಟ್ಟಣದ ಬಟ್ಟೆ ಅಂಗಡಿಗಳಲ್ಲಿ ಸೀರೆ ಖರೀದಿಗೆ ಮುಂದಾಗಿದ್ದಾರೆ.
ಕಳೆದ 15 ದಿನಗಳಿಂದ ತಾಲೂಕಿನ ಮಾಚೇನಹಳ್ಳಿ, ಬೆಳ್ಳಟ್ಟಿ, ಹೊಸಳ್ಳಿ, ನಾಗರಮಡುವು, ತಂಗೋಡ, ಕೋಗನೂರು, ಹಬ್ಬಾಳ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಈ ರೀತಿಯ ವದಂತಿ ಹಬ್ಬಿದೆ. ಸೀರೆ ಕೊಡಿಸದಿದ್ದರೆ ಕೇಡಾಗುತ್ತೆ ಎಂಬ ನಂಬಿಕೆಯಿಂದ ತವರು ಮನೆಗೆ ಹೆಣ್ಣುಮಕ್ಕಳು ಬಂದು ಅಣ್ಣ, ತಮ್ಮನ ಮಗಳಿಗೆ ಸೀರೆ ಉಡಿಸಿ, ಆರತಿ ಮಾಡುವುದು ಸಾಮಾನ್ಯವಾಗಿದೆ.
ಸೊಸೆಗೆ ಹೊಸ ಸೀರೆ ಉಡಿಸಿ ಹಣೆಗೆ ಕುಂಕುಮ ಇಟ್ಟು ಆರತಿ ಬೆಳಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಾಯಂದಿರು ತವರು ಮನೆಯವರನ್ನು ಹರಸುತ್ತಿದ್ದಾರೆ. ಈ ತರದ ವದಂತಿ ಇದೇ ಮೊದಲೇನಲ್ಲ, ಈ ಮೊದಲು, ತಾಯಿಗೆ ಮಗಳು ಸೀರೆ ಕೊಡಿಸುವುದು, ಒಬ್ಬನೇ ಮಗನಿದ್ದರೆ ಬೆಳ್ಳಿ ಕಡಗ ಕೊಡಿಸುವುದು ಸುದ್ದಿಯಾಗಿತ್ತು.
ಇವುಗಳನ್ನು ಯಾರು ಹಬ್ಬಿಸುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಹಳ್ಳಿಯ ಜನರನ್ನು ಇಂತಹ ವದಂತಿಗಳಿಂದ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಒಟ್ಟಾರೆ ಇಂತಹ ವದಂತಿಗಳು ಜನರಲ್ಲಿ ಪುನ: ಮೌಢ್ಯವನ್ನು ಹುಟ್ಟು ಹಾಕುತ್ತಿವೆ.