ಕರ್ನಾಟಕ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಇತರ ಸಂಸ್ಥೆಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿದೆ.
ನಿರ್ದೇಶನದ ಪ್ರಕಾರದಂತೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಾಕಿ ಉಳಿದಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ, ತಾವು ಭಾಗಿಯಾಗಿದ್ದೇವೆ ಎಂದು ಘೋಷಿಸಬೇಕು ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ.
ಅರ್ಜಿದಾರರ ಚುನಾವಣೆಯನ್ನು ಚುನಾವಣಾ ನ್ಯಾಯಮಂಡಳಿಯು ತನ್ನ ವಿರುದ್ಧದ ಬಾಕಿಯಿರುವ ಕ್ರಿಮಿನಲ್ ಮೊಕದ್ದಮೆಗಳನ್ನು ಬಹಿರಂಗಪಡಿಸಲು ವಿಫಲವಾಗಿದೆ ಎಂಬ ಕಾರಣಕ್ಕಾಗಿ ರದ್ದುಗೊಳಿಸಿದೆ ಮತ್ತು ಅಂತಹ ಅಮಾನ್ಯೀಕರಣವನ್ನು ಹೈಕೋರ್ಟ್ ಏಕ ಸದಸ್ಯ ಪೀಠವು ಎತ್ತಿಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು ಏಕ ಪೀಠದ ಆದೇಶದ ವಿರುದ್ಧ ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.
ಈ ಸುದ್ದಿ ಓದಿದ್ದೀರಾ? ಮಲ ಬಾಚುವ ಮೃತ ಕಾರ್ಮಿಕನ ಪತ್ನಿಗೆ 30 ಲಕ್ಷ ರೂ. ಪರಿಹಾರ ನೀಡಲು ದೆಹಲಿ ಹೈಕೋರ್ಟ್ ಆದೇಶ
ರಾಜ್ಯ ಚುನಾವಣಾ ಆಯೋಗ ಮತ್ತು ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಇತರ ಸಂಸ್ಥೆಗಳು ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯ ವಿಷಯದಲ್ಲಿ ಅಗತ್ಯವಾದ ನಮೂನೆಗಳನ್ನು ನೀಡುವ ಮೂಲಕ ಅಥವಾ ಸೇರಿಸುವ ಮೂಲಕ ಸುಪ್ರೀಂ ಕೋರ್ಟಿನ ನಿರ್ದೇಶನಗಳನ್ನು ಜಾರಿಗೊಳಿಸಬೇಕು. ಪ್ರತಿ ಅಭ್ಯರ್ಥಿಯು ಚುನಾವಣಾ ಆಯೋಗವು ಒದಗಿಸಿದಂತೆ ನಮೂನೆಯನ್ನು ಭರ್ತಿಮಾಡಬೇಕು ಮತ್ತು ನಮೂನೆಯಲ್ಲಿ ಅಗತ್ಯವಿರುವ ಎಲ್ಲ ವಿವರಗಳನ್ನು ದಾಖಲಿಸಬೇಕು. ಅಭ್ಯರ್ಥಿಯ ವಿರುದ್ಧ ಬಾಕಿಯಿರುವ ಕ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ದಪ್ಪ ಅಕ್ಷರಗಳಲ್ಲಿ ಹೇಳತಕ್ಕದ್ದು ಎಂದು ಪೀಠ ಹೇಳಿತು.
ಚುನಾವಣಾ ಆಯೋಗವು ಕೂಡ ಅಭ್ಯರ್ಥಿಯ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಆಯೋಗದ ವೆಬ್‌ಸೈಟ್ ಹಾಗೂ ಮಾಧ್ಯಮಗಳಿಗೆ ತಿಳಿಸಬೇಕು. ರಾಜಕೀಯ ಪಕ್ಷಗಳು ಕೂಡ ತಮ್ಮ ಪಕ್ಷದ ಅಭ್ಯರ್ಥಿಗಳ ಕ್ರಿಮಿನಲ್ ಮಾಹಿತಿ ಬಗ್ಗೆ ವ್ಯಾಪಕವಾಗಿ ಪ್ರಸಾರವಾಗುವ ಪತ್ರಿಕೆಗಳಲ್ಲಿ ಘೋಷಣೆಯನ್ನು ಹೊರಡಿಸಬೇಕು ಎಂದು ನ್ಯಾಯಾಲಯ ತಿಳಿಸಿತು.