ʼಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆʼಯನ್ನು ಅಮಾಯಕ ಆದಿವಾಸಿಗಳಿಗಾಗಿ ಉಳಿಸಬೇಕು. ಆದರೆ, ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಸಂಸ್ಥೆಯ ನಿರ್ದೇಶಕ ಎಲ್ ಶ್ರೀನಿವಾಸ ಅವರು ಆದಿವಾಸಿ ವಿರೋಧಿ ನಿಲುವನ್ನು ಹೊಂದಿದ್ದಾರೆ. ಅವರನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಬೇಕು. ಆ ಮೂಲಕ ಸಂಸ್ಥೆಯನ್ನು ಉಳಿಸಬೇಕು ಎಂದು ಆದಿವಾಸಿ ಬಿರ್ಸಾ ಮುಂಡ ಯುವಸೇನೆ ಆಗ್ರಹಿಸಿದೆ.
ಸೋಮವಾರ ನಡೆದ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸಂಘಟನೆಯ ಮುಖಂಡರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಕರ್ನಾಟಕದ ನಿಜವಾದ (ಅಸಂಘಟಿತ) ಆದಿವಾಸಿಗಳಾದ ನಾವು ಇವತ್ತಿಗೂ ಕಾಡು ಮತ್ತು ಕಾಡಂಚಿನಲ್ಲಿ ವಾಸ ಮಾಡುತ್ತಿದ್ದೇವೆ. ನಾವು ಸ್ವತಂತ್ರ ಭಾರತದಲ್ಲೂ ಅತೀವ ನಿರ್ಲಕ್ಷ್ಯಕ್ಕೆ ಒಳಗಾಗಿದ್ದೇವೆ. 75 ವರ್ಷಗಳಿಂದ ಬಂದ ಸರ್ಕಾರಗಳು ನಮ್ಮ ಹೆಸರಿನಲ್ಲಿ ಸಂಸ್ಥೆಗಳನ್ನು ರೂಪಿಸಿದ್ದರೂ, ವಾಸ್ತವದಲ್ಲಿ ಆ ಸಂಸ್ಥೆಗಳು ಆಯಾ ಸರ್ಕಾರಗಳ ಕ್ಷುಲ್ಲಕ ರಾಜಕಾರಣದಿಂದಾಗಿ, ಇವತ್ತಿಗೂ ಸರ್ಕಾರ ಮತ್ತು ಸ್ವತಂತ್ರ ಎಂಬುದು ನಮ್ಮನ್ನು ತಲುಪಿಯೇ ಇಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಆದಿವಾಸಿಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ಕೈಗೊಂಡು, ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಬೇಕಾಗಿದ್ದ ‘ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ’ ನಿರಾಶ್ರಿತ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಬರುವ ಅಧಿಕಾರಿಗಳು ಕೇವಲ ಹಣ ಅಧಿಕಾರಕ್ಕೆ ಸೀಮಿತಗೊಳ್ಳುತ್ತಿದ್ದಾರೆ. ಸಂಸ್ಥೆಗೆ ಬರುವ ಅಧಿಕಾರಿಗಳಿಗೆ ಆದಿವಾಸಿಗಳ ಬಗ್ಗೆ ಕಿಂಚಿತ್ತು ಕಾಳಜಿ, ಕಳಕಳಿ ಇಲ್ಲ. ಅವರು ಅರಿವು ಕಾರ್ಯಕ್ರಮ, ಆರೋಗ್ಯ ಶಿಬಿರಗಳಂತಹ ನಾಮಮಾತ್ರದ ಕೆಲಸಗಳಿಗೆ ಸೀಮಿತವಾಗಿದ್ದು, ಹಣಗಳಿಸುವ ಕಾಯಕದಲ್ಲಿ ಮುಳುಗಿ ಹೋಗಿರುತ್ತಾರೆ. ಪ್ರಸ್ತುತ ಸಂಸ್ಥೆಯ ನಿರ್ದೇಶಕ ಎಲ್ ಶ್ರೀನಿವಾಸ ಎಂಬುವವರು ಆಡಳಿತ ಜ್ಞಾನವನ್ನೇ ಹೊಂದಿಲ್ಲ. ಅವರು ಆದಿವಾಸಿ ವಿರೋಧಿ ಧೋರಣೆ ಹೊಂದಿರುವ ಪ್ರಬಲ ಜಾತಿಯವರಾಗಿದ್ದಾರೆ. ಕೃತಿ ಚೌರ್ಯ ಎಸಗಿದ ಆರೋಪವೂ ಅವರ ಮೇಲಿದೆ. ಅವರು ಈ ಹುದ್ದೆಯನ್ನು ಹಣ ಗಳಿಸುವ ಸಾಧನವಾಗಿ ಬಳಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಸಂಸ್ಥೆಯನ್ನು ಅಸಹಾಯಕ ಆದಿವಾಸಿಗಳ ಪರವಾಗಿ ಕೆಲಸ ಮಾಡುವಂತೆ ಮಾಡಬೇಕು. ಅಸಮರ್ಥ ಅಧಿಕಾರಿ ಎಲ್ ಶ್ರೀನಿವಾಸ್ ಅವರನ್ನು ಕೂಡಲೆ ಹುದ್ದೆಯಿಂದ ಬಿಡುಗಡೆ ಮಾಡಬೇಕು. ಆದಿವಾಸಿಗಳ ಬಗ್ಗೆ ನೈಜ ಕಾಳಜಿ ಮತ್ತು ಬದ್ಧತೆ ಇರುವ ಅಧಿಕಾರಿಯನ್ನು ಸಂಸ್ಥೆಗೆ ನೇಮಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ಮಹಾಧರಣಿ’ಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ: ಡಿ.19ರಂದು ಮಹತ್ವದ ಸಭೆ
“ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಆದಿವಾಸಿಗಳ ಹೆಸರಿನಲ್ಲಿ ಕೆಲವು ನಕಲಿ ಆದಿವಾಸಿ ಸಂಘಟನೆಗಳು ಹುಟ್ಟಿಕೊಂಡಿವೆ. ಅವರು ತಾವೇ ಬುಡಕಟ್ಟುಗಳ ಪ್ರತಿನಿಧಿಗಳು ಎಂದು ಹೇಳಿಕೊಂಡು, ಸರ್ಕಾರ ಮತ್ತು ಅಧಿಕಾರಿಗಳ ಮೂಲಕ ತಮ್ಮ ಸ್ವಾರ್ಥಸಾಧನೆಯಲ್ಲಿ ತೊಡಗಿದ್ದಾರೆ. ಆದರೆ, ಕಾಡಂಚಿನಲ್ಲಿ ಯಾವುದೇ ಸವಲತ್ತುಗಳಿಲ್ಲದೆ ಬದುಕುತ್ತಿರುವ ನಾವುಗಳು ಇಂದಿಗೂ ಅಸಹಾಯಕ ಪರಿಸ್ಥಿತಿಯಲ್ಲಿದ್ದೇವೆ. ಕೆಲವೇ ಪಟ್ಟಭದ್ರರು, ಕೆಲವು ಪ್ರಾಧ್ಯಾಪಕರುಗಳು ಆದಿವಾಸಿಗಳ ಹೆಸರನ್ನು ಹೇಳಿಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ರಾಜ್ಯ ಸಂಘಟನೆ ಹಾಗೂ ರಾಷ್ಟ್ರ ಸಂಘಟನೆಗಳ ಲೇಬಲ್ ಹಚ್ಚಿಕೊಂಡು ನಿಜವಾದ ಆದಿವಾಸಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
“ಶ್ರೀನಿವಾಸ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಆದೇಶಿಸಿ ತಿಂಗಳುಗಳು ಕಳೆದಿವೆ. ಅದರೂ, ಕ್ರಮ ಕೈಗೊಳ್ಳಲಾಗಿಲ್ಲ. ಕೆಲವು ನಕಲಿ ಆದಿವಾಸಿಗಳು ಆದಿವಾಸಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಅವರಿಗೆ ಶ್ರಿನಿವಾಸ್ ಪ್ರಮಾಣ ಪತ್ರ ನೀಡಿ, ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅವರನ್ನು ಕೂಡಲೇ ಹುದ್ದೆಯಿಂದ ಬಿಡುಗಡೆ ಮಾಡಬೇಕು. ನಕಲಿ ಆದಿವಾಸಿ ಪ್ರಮಾಣ ಪತ್ರ ಪಡೆಯುತ್ತಿರುವವರ ವಿರುದ್ಧ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಸಂಘಟನೆಯ ಮುಖಂಡ ಪ್ರದೀಪ್ ಕುಮಾರ್ ಸೇರಿದಂತೆ ಹಲವರು ಇದ್ದರು.