ಬರ ಕೇವಲ ರೈತರನ್ನು ಕಾಡುತ್ತಿಲ್ಲ, ಸಮುದ್ರ ಮೀನುಗಾರಿಕೆಗೂ ಈ ಬಾರಿ ಬರ ಆವರಿಸಿದೆ. ನಿರಂತರ ಮೀನುಗಾರಿಕೆ ಚಟುವಟಿಕೆಯಲ್ಲಿ ಇರುತ್ತಿದ್ದ ಕರಾವಳಿ ಭಾಗದಲ್ಲಿ ಮೌನ ಆವರಿಸಿದೆ. ಮೂರು ತಿಂಗಳು ಮೀನು ಬೇಟೆಯಾಡಿದ್ದ ಬೋಟುಗಳಲ್ಲಿ ಬಹುತೇಕ ಮೀನುಗಾರಿಕಾ ಬೋಟ್‌ಗಳು ಮೀನು ಕೊರತೆಯ ಕಾರಣಕ್ಕೆ ದಡದಲ್ಲೇ ಲಂಗರು ಹಾಕಿವೆ.
ಆಳಸಮುದ್ರದ ಮೀನುಗಾರಿಕೆ ಮಾಡತ್ತಿದ್ದ ಪರ್ಸಿನ್ ಬೋಟ್‌ಗಳು ಕೂಡ ಬಂದರಿನಲ್ಲಿ ಬಿಡೂ ಬಿಟ್ಟಿವೆ. ಕೆಲಸ ಹುಡುಕಿ ಹೊರರಾಜ್ಯದಿಂದ ಬರುತ್ತಿದ್ದ ಕಾರ್ಮಿಕರ ಸಂಖ್ಯೆ ಸಹ ಕ್ಷೀಣಿಸಿದೆ. ಹೀಗಾಗಿ ಮೀನುಗಾರಿಕೆ ಚಟುವಟಿಕೆಗೆ ಹಿನ್ನಡೆಯಾಗಿದ್ದು, ಸಮುದ್ರದ ದಡದಲ್ಲಿ ಹಲವು ದಿನಗಳಿಂದ ಲಂಗರು ಹಾಕಿರುವ ಸಾಲು ಬೋಟುಗಳು ಕಾಣುತ್ತಿವೆ.
ಜಿಲ್ಲೆಯಲ್ಲಿ 1,113 ಪರ್ಸಿನ್, 4,027 ಟ್ರಾಲರ್ ಬೋಟುಗಳಿವೆ. ಬಹುತೇಕ ಬಂದರುಗಳಲ್ಲಿ ಪರ್ಸಿನ್, ಟ್ರಾಲರ್ ಬೋಟುಗಳು ದಡದಲ್ಲೇ ಉಳಿದಿದ್ದು, ಮೀನು ಬೇಟೆಗೆ ಉತ್ಸಾಹ ತೋರಿಸುತ್ತಿಲ್ಲ. ಮೀನುಗಳು ಸಿಗದೆ, ಮೀನುಗಾರಿಕೆ ಆಧರಿಸಿ ಜೀವನ ಸಾಗಿಸುತ್ತಿರುವ 15ಸಾವಿರಕ್ಕೂ ಹೆಚ್ಚು ಕುಟುಂಬಗಳು ಅತಂತ್ರವಾಗಿವೆ.
ಆಳ ಸಮುದ್ರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮೀನುಗಳು ಸಿಗುತ್ತಿಲ್ಲ. ದಡಕ್ಕೆ ಸಮೀಪದಲ್ಲಿ ಮೀನು ಸಿಗುತ್ತಾವಾದರೂ, ಲೋಳೆ ಮೀನುಗಳು ಹೆಚ್ಚಾಗಿರುವುದರಿಂದ ಬಲೆ ಬೀಸುವುದು ಕಷ್ಟವಾಗಿದೆ. ಇದರಿಂದ ಮೀನು ಸಿಗದೆ ಸಂಕಷ್ಟ ಎದುರಿಸುತ್ತಿದ್ದೇವೆ. ಇಂತಹ ಸ್ಥಿತಿ ಇದೇ ವರ್ಷ ಎದುರಾಗಿದೆ ಎಂದು ಬೋಟ್ ಮಾಲೀಕರು ಸಂಕಷ್ಟ ತೋಡಿಕೊಳ್ಳುತ್ತಾರೆ.
ಒಂದು ತಿಂಗಳಿನಿಂದಲೂ ಮೀನು ಸಿಗದೆ ಆರ್ಥಿಕ ಸಂಕಷ್ಟ ಎದುರಾಗಿದೆ. ಬೋಟುಗಳನ್ನು ನೀರಿಗಿಳಿಸಿದರೆ ಕನಿಷ್ಠ ₹15 ಸಾವಿರ ಮೌಲ್ಯದ ಮೀನುಗಳಾದರೂ ಲಭಿಸಬೇಕು. ಆಗ ಮಾತ್ರ ಡೀಸೆಲ್ ವೆಚ್ಚ, ಕಾರ್ಮಿಕರ ವೇತನದ ವೆಚ್ಚ ನಿಭಾಯಿಸಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ಒಂದು ಸಾವಿರ ಮೌಲ್ಯದಷ್ಟು ಮೀನು ಕೂಡ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಬಿನ್ ಬೋಪಣ್ಣ, ಮಳೆ ಕೊರತೆ ಜೊತೆಗೆ ಹವಾಮಾನ ವೈಪರೀತ್ಯದ ಕಾರಣ ಮೀನು ಇಳುವರಿ ಕಡಿಮೆಯಾಗಿರುವ ಸಾಧ್ಯತೆ ಇದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಮಸ್ಯೆಯಾಗಿ ಜನವರಿಯಲ್ಲಿ ಎಲ್ಲವೂ ಸರಿಯಾಗಿತ್ತು ಎಂದು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ನೆರೆಯ ಗೋವಾ ಮಹಾರಾಷ್ಟ್ರ ಭಾಗದಲ್ಲಿ ವ್ಯಾಪಕವಾಗಿದೆ ಅವೈಜ್ಞಾನಿಕ ಮೀನುಗಾರಿಕೆಯಿಂದ ಸಮುದ್ರದಲ್ಲಿ ಮೀನು ಕ್ಷಾಮ ಉಂಟಾಗಿದೆ. ಮೀನು ಮರಿ ಮೊಟ್ಟೆಗಳನ್ನು ಹಾಳುಗೆಡವುವ ಬುಲ್ ಟ್ರಾಲ್ ಬೆಳಕಿನ ಮೀನುಗಾರಿಕೆ ಚಟುವಟಿಕೆ ಅವ್ಯಾಹತವಾಗಿ ನಡೆದಿರುವುದು ಈಗ ಮೀನು ಕೊರತೆ ಎದುರಾಗಲು ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.