ರಾಯಚೂರು ಜಿಲ್ಲೆಯ ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಜೋಳದ ಬೆಳೆಗೆ ಲದ್ದಿ ಹುಳು ಕಾಟ ಹೆಚ್ಚಾಗಿದ್ದು, ಬರದ ನಡುವೆ ಬೆಳೆಯ ಆಶಯ ಇಟ್ಟುಕೊಂಡಿದ್ದ ರೈತರನ್ನು ಚಿಂತೆಗೀಡು ಮಾಡಿದೆ.
ಜಿಲ್ಲೆಯ ಕೋಠಾ, ಮೇದಿನಾಪುರ, ಆನ್ವರಿ, ಗೌಡೂರು, ಪೈದೊಡ್ಡಿ, ಮಾಚನೂರು, ವೀರಾಪುರ, ಗುಡದನಾಳ, ಹಟ್ಟಿ, ನಿಲೋಗಲ್ ಸೇರಿದಂತೆ ಸುತ್ತಮುತ್ತಲಿನ 4,500ಹೆಕ್ಟೇರ್ ಪ್ರದೇಶದಲ್ಲಿ ರೈತರು ಜೋಳದ ಬೆಳೆದಿದ್ದಾರೆ.
ಜೋಳದ ದಂಟಿನ ಮಧ್ಯ ಲದ್ದಿ ಹುಳು ಮೊಟ್ಟೆ ಇಡುತ್ತದೆ. ಮೊಟ್ಟೆಯಿಂದ ಹೊರಬರುವ ಹುಳು ಜೋಳದ ಸುಳಿಯನ್ನು ಕತ್ತರಿಸಿ ಹಾಕುತ್ತದೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ. ಜೋಳದ ಗಿಡ ಕಾಳು ಕಟ್ಟುವುದಿಲ್ಲ. ಲದ್ದಿ ಹುಳು ಕಾಟ ತಪ್ಪಿಸಲು ಏನು ಮಾಡಬೇಕು ಎಂದು ತಿಳಿಯದೇ ರೈತರು ಕಂಗಾಲಾಗಿದ್ದಾರೆ.
ರೈತ ಸಂರ್ಪಕ ಕೇಂದ್ರದ ಕೃಷಿ ಅಧಿಕಾರಿ ಅವರನ್ನು ವಿಚಾರಿಸಿದರೆ ಅಸಮರ್ಪಕವಾದ ಉತ್ತರ ನಿಡುತ್ತಿದ್ದಾರೆ. ಸಾಲ ಮಾಡಿ ಬಿತ್ತನೆ ಮಾಡಿದ್ದೇವೆ, ಇತ್ತ ಮಳೆಯೂ ಇಲ್ಲ, ಅತ್ತ ಬೆಳೆಯೂ ಕೈ ತಪ್ಪುವ ಭಯದಲ್ಲಿದ್ದೇವೆ, ಸಂಬಂಧಪಟ್ಟ ಅಧಿಕಾರಿಗಳು ರೈತರ ನೆರವಿಗೆ ಧಾವಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರೈತರು ಆಗ್ರಹಿಸುತ್ತಿದ್ದಾರೆ.