ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು. ಈ ಹಿನ್ನೆಲೆ, ಆಯಾ ವಲಯ ವ್ಯಾಪ್ತಿಯಲ್ಲಿ ಸ್ಥಳಗಳನ್ನು ಗುರುತಿಸಿ ಕೂಡಲೇ ಪಟ್ಟಿ ನೀಡಬೇಕು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಲಯ ಆಯುಕ್ತರಿಗೆ ಸೂಚನೆ ನೀಡಿದರು.
ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ಬುಧವಾರ ಸಭೆ ನಡೆಯಿತು. ಈ ವೇಳೆ, ಮಾತನಾಡಿದ ಅವರು, “ನಗರದ ಆಯಾ ವಲಯ ವ್ಯಾಪ್ತಿಯಲ್ಲಿ ಜನದಟ್ಟಣೆ ಪ್ರದೇಶ, ಮಾರುಕಟ್ಟೆಗಳು, ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಹಾಗಾಗಿ, ತ್ವರಿತವಾಗಿ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡಿ” ಎಂದರು.
“ನಗರದಲ್ಲಿ ಈಗಾಗಲೇ 255 ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಶೌಚಾಲಯಗಳನ್ನು ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕಿದೆ. ಈ ಸಂಬಂಧ ವಿಶಾಲವಾದ ಸ್ಥಳಗಳನ್ನು ಗುರುತಿಸಬೇಕಿದೆ. ಜತೆಗೆ ನಗರದ ಕೇಂದ್ರ ಪ್ರದೇಶದಲ್ಲಿ ಹೆಚ್ಚಾಗಿ ಶೌಚಾಲಯ ನಿರ್ಮಿಸಬೇಕು. ಈ ಪೈಕಿ ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಅಲ್ಲದೆ, ಹೊಸದಾಗಿ 46 ಶೌಚಾಲಯಗಳನ್ನು ನಿರ್ಮಾಣ ಮಾಡಲು ಕೂಡಾ ಸೂಕ್ತ ಸ್ಥಳಗಳನ್ನು ಗುರುತಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದರು.
“ನಗರದಲ್ಲಿ 393 ಸಾರ್ವಜನಿಕ ಶೌಚಾಲಯಗಳಿದ್ದು, ಈ ಪೈಕಿ 360 ಸಾರ್ವಜನಿಕ ಶೌಚಾಲಯ, 6 ಕಮ್ಯುನಿಟಿ ಶೌಚಾಲಯ, 17 ಮಾಡ್ಯುಲರ್ ಶೌಚಾಲಯ ಹಾಗೂ 10 ಪ್ರೀ ಕಾಸ್ಟ್ ಶೌಚಾಲಯಗಳಿವೆ. ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ವರಿತಗತಿಯಲ್ಲಿ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಬೇಕು” ಎಂದು ಹೇಳಿದರು.
ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ
“ನಗರದಲ್ಲಿ ಮಹಿಳೆಯರು ಸಂಚರಿಸುವ/ಓಡಾಡುವ ಸ್ಥಳಗಳನ್ನು ಗುರುತಿಸಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪೈಕಿ ಎಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂಬುದನ್ನು ಗುರುತಿಸಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಲು ಕ್ರಮವಹಿಸಬೇಕು” ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇ-ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿ
“ನಗರದಲ್ಲಿ 229 ಇ-ಶೌಚಾಲಯಗಳಿದ್ದು, ಸದ್ಯ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ಇ-ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಸಲುವಾಗಿ ಕೂಡಲೇ ಟೆಂಡರ್ ಕರೆದು ಸರಿಯಾಗಿ ನಿರ್ವಹಣೆ ಮಾಡಬೇಕು. ಜೊತೆಗೆ ಬಸ್ ತಂಗುದಾಣಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ಸಾಧ್ಯವಾದಲ್ಲಿ ಕೆಲ ಪ್ರಮುಖ ಬಸ್ ತಂಗುದಾಣಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸಬೇಕು” ಎಂದು ಸೂಚಿಸಿದರು.
ಇಂದಿರಾ ಕ್ಯಾಂಟೀನ್‌ಲ್ಲಿರುವ ಶೌಚಾಲಯ ಸಾರ್ವಜನಿಕರಿಗೆ ಬಳಕೆ
“ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿರ್ಮಿಸಿರುವ ಶೌಚಾಲಯಗಳನ್ನು ಸಾರ್ವಜನಿಕರು ಉಪಯೋಗಿಸಲು ಅನುವು ಮಾಡಬೇಕು. ಈ ಸಂಬಂಧ ಕೂಡಲೆ ಆದೇಶ ಹೊರಡಿಸಿ ಎಂದು ಅಧಿಕಾರಿಗೆ ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಯುವತಿ ಮೇಲೆ ಅತ್ಯಾಚಾರ – ಜಾತಿ ನಿಂದನೆ; ಆರೋಪಿ ಬಂಧನ
ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಸಮಿತಿ ರಚನೆ
ಉಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನದನ್ವಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸಂಕ್ಷಿಪ್ತ ಯೋಜನೆಗಳನ್ನು ರೂಪಿಸುವ ಕುರಿತು ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಸಮಿತಿಗಳನ್ನು ರಚಿಸಲು ಆದೇಶಿಸಲಾಗಿದೆ. ಅದರಂತೆ ಘನ ಕರ್ನಾಟಕ ಸರ್ಕಾರದ ಆದೇಶದನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಹಾಗೂ ನಿರ್ವಹಣೆ ಮಾಡುವ ಸಂಕ್ಷಿಪ್ತ ಯೋಜನೆಗಳನ್ನು ರೂಪಿಸಲು ಸಮಿತಿ ರಚಿಸಲಾಗಿದೆ.
ಸಮಿತಿಯ ವಿವರ
ಈ ಸಮಿತಿಯ ಅಧ್ಯಕ್ಷರು ಬಿಬಿಎಂಪಿ ಮುಖ್ಯ ಆಯುಕ್ತರು ಇರಲಿದ್ದಾರೆ. ಘನ ತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತರು, ಕಲ್ಯಾಣ ವಿಶೇಷ ಆಯುಕ್ತರು, ಎಲ್ಲಾ ವಲಯ ಆಯುಕ್ತರು(ಪೂರ್ವ, ಪಶ್ಚಿಮ, ದಕ್ಷಿಣ, ಯಲಹಂಕ, ಆರ್.ಆರ್.ನಗರ, ದಾಸರಹಳ್ಳಿ, ಬೊಮನಹಳ್ಳಿ ಹಾಗೂ ಮಹದೇವಪುರ ವಲಯ), ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು (ರಸ್ತೆ ಮೂಲ ಭೂತ ಸೌಕರ್ಯ), ಮುಖ್ಯ ಅಭಿಯಂತರರು (ಘ.ತ್ಯಾ.ನಿ), ಮಹಿಳಾ ಸದಸ್ಯರು (ಕೌನ್ಸಿಲರ್), ಮುಖ್ಯ ಆರೋಗ್ಯಾಧಿಕಾರಿಗಳು (ಸಾರ್ವಜನಿಕ), ಉಪ ಆಯುಕ್ತರು (ಕಲ್ಯಾಣ), NGO ಓರ್ವ ಸಕ್ರಿಯ ಮಹಿಳಾ ಪ್ರತಿನಿಧಿ ಸದಸ್ಯರಿಲಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಜಂಟಿ ಆಯುಕ್ತರು(ಘ.ತ್ಯಾ.ನಿ) ಇರಲಿದ್ದಾರೆ.
ಸಭೆಯಲ್ಲಿ ಘನತ್ಯಾಜ್ಯ ವಿಭಾಗದ ವಿಶೇಷ ಅಯುಕ್ತ ಡಾ. ಕೆ. ಹರೀಶ್ ಕುಮಾರ್, ಕಲ್ಯಾಣ ವಿಶೇಷ ಆಯುಕ್ತ ರೆಡ್ಡಿ ಶಂಕರ ಬಾಬು, ಎಲ್ಲ ವಲಯ ಆಯುಕ್ತರು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತೆ ಪ್ರತಿಭಾ, ಬಿಎಸ್‌ಡಬ್ಲೂಎಮ್‌ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಬಸವರಾಜ್ ಕಬಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.