ಸಹೋದ್ಯೋಗಿ, ಪ್ರಿಯತಮೆ ಸೇರಿದಂತೆ ಮಹಿಳೆಯರ 13,000ಕ್ಕೂ ಹೆಚ್ಚು ನಗ್ನ ಫೋಟೋಗಳನ್ನು ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡಿದ್ದ ಯುವಕನನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆದಿತ್ಯ ಸಂತೋಷ ಬಂಧಿತ. ಈತನು ಬೆಳ್ಳಂದೂರಿನ ಬಿಪಿಒ ಕಂಪನಿಯಲ್ಲಿ ಗ್ರಾಹಕ ಸೇವಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯನ್ನು ಬಂಧಿತ ವ್ಯಕ್ತಿ ಪ್ರೀತಿ ಮಾಡುತ್ತಿದ್ದನು.
ಪ್ರಿಯತಮೆಯೊಂದಿಗೆ ಬಂಧಿತ ವ್ಯಕ್ತಿ ಫೋಟೋಗಳನ್ನು ತೆಗೆದುಕೊಂಡಿದ್ದನು. ಆತನೊಂದಿಗೆ ತೆಗೆದಿರುವ ಫೋಟೋಗಳನ್ನು ಡಿಲೀಟ್ ಮಾಡಲು ಯುವತಿ ಯುವಕನಿಗೆ ಗೊತ್ತಾಗದ ಹಾಗೇ ಆತನ ಮೊಬೈಲ್ ತೆಗೆದುಕೊಂಡಿದ್ದಾಳೆ. ಈ ವೇಳೆ, ಗ್ಯಾಲರಿಯಲ್ಲಿ ತನ್ನ ಸಹೋದ್ಯೋಗಿಗಳು ಸೇರಿದಂತೆ ಹಲವು ಮಹಿಳೆಯರ ನಗ್ನ ಫೋಟೋಗಳನ್ನು ಕಂಡು ಗಾಬರಿಗೊಂಡಿದ್ದಾಳೆ. ಬಳಿಕ, ಆತನ ಜತೆಗೆ ಜಗಳವಾಡಿ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಯುವತಿ ತನ್ನ ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಳು. ಜತೆಗೆ, ಕಂಪನಿಯ ಲೀಗಲ್ ಎಕ್ಸಿಕ್ಯುಟಿವ್ಗೆ ಮಾಹಿತಿ ನೀಡಿದ್ದಾರೆ. ನಂತರ ಯುವತಿ ವೈಟ್ ಫೀಲ್ಡ್ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಾದ ಬೆನ್ನಲ್ಲೆ, ತನಿಖೆಗೆ ಇಳಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕುಸಿದು ಬಿದ್ದ ಶಾಲಾ ಕಟ್ಟಡ; ಸಮಗ್ರ ತನಿಖೆ ನಡೆಯಲಿ ಎಂದ ಎಸ್‌ಐಒ
ಕಳೆದ ಐದು ತಿಂಗಳಿನಿಂದ ಬಂಧಿತ ಆರೋಪಿ ಗ್ರಾಹಕ ಸೇವಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಹಲವು ಮಹಿಳೆಯರ ಫೋಟೋಗಳನ್ನು ಕಲೆಹಾಕಿ ನಗ್ನ ರೂಪಕ್ಕೆ ಆ ಫೋಟೋಗಳನ್ನು ಎಡಿಟ್ ಮಾಡುತ್ತಿದ್ದನು. ತನ್ನ ಸಂತೋಷಕ್ಕಾಗಿ ಆತ ಹೀಗೆಲ್ಲ ಮಾಡುತ್ತಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ವಿರುದ್ಧ ಮಾಹಿತಿ ಸೆಕ್ಷನ್ 67, 67 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.