’ನಮ್ಮ ಹೆಸರಲ್ಲಿ ಈ ಕೃತ್ಯ ಎಸಗಬೇಡಿ’ ಎಂದು ಯಹೂದಿಗಳೇ ನೊಂದು ನುಡಿಯುತ್ತಿರುವಾಗ, ಕರ್ನಾಟಕ ಸರ್ಕಾರಕ್ಕೇನು ಬಂದಿದೆ ರೋಗ?
ಹಮಾಸ್ ಬಂಡುಕೋರರನ್ನು ದಮನ ಮಾಡುತ್ತೇವೆ ಎನ್ನುತ್ತಾ ಇಸ್ರೇಲ್ ಆರಂಭಿಸಿರುವ ಅಮಾಯಕ ಪ್ಯಾಲೆಸ್ತೀನಿಯರ ನರಮೇಧ ಇಡೀ ಜಗತ್ತನ್ನು ಬೆಚ್ಚಿಬೀಳಿಸುವ ಹೊತ್ತಿನಲ್ಲಿ ಕಾಂಗ್ರೆಸ್ ಆಳುತ್ತಿರುವ ಕರ್ನಾಟಕ ರಾಜ್ಯದಲ್ಲಿ ವಿಚ್ಛಿದ್ರಕಾರಿ ಬೆಳವಣಿಗೆಗಳಾಗುತ್ತಿವೆ.
ಮೂಲನಿವಾಸಿ ಪ್ಯಾಲೆಸ್ತೀನಿಯರನ್ನು ಮೂಲೆಗೆ ತಳ್ಳಿ, ಯಹೂದಿಗಳಿಗಾಗಿ ಅಮೆರಿಕ, ಇಂಗ್ಲೆಂಡ್ ದೇಶಗಳು ನಡೆಸಿದ ಪಿತೂರಿಗಳ ಫಲವಾಗಿ ರೂಪುಗೊಂಡ ಇಸ್ರೇಲ್, ನಂತರದಲ್ಲಿ ಏನೆಲ್ಲ ಮಾಡಿತು ಎಂಬುದನ್ನು ಅರಿಯಲು ದಿವ್ಯದೃಷ್ಟಿಯೇನೂ ಬೇಕಿಲ್ಲ.
ಉಳಿಯಲು ಬಂದವರು ಮನೆಯವರನ್ನೇ ಹೊರಹಾಕಿದ ದುರಂತ ಕಥೆ ಪ್ಯಾಲೆಸ್ತೀನಿಯರದ್ದು. ಬಯಲು ಬಂಧಿಖಾನೆಯೆಂದೇ ಪರಿಗಣಿಸಲ್ಪಟ್ಟಿರುವ ಗಾಜಾ ಪಟ್ಟಿ ಮತ್ತು ವೆಸ್ಟ್ಬ್ಯಾಂಕಿನಲ್ಲಿ ಅಳಿದುಳಿದ ಪ್ಯಾಲೆಸ್ತೇನಿಯರನ್ನು ಇಸ್ರೇಲ್ ಸರ್ಕಾರ ಮುಗಿಸುತ್ತಿರುವ ರೀತಿ ಮನುಷ್ಯರಾದವರನ್ನು ಅಲುಗಾಡಿಸದೇ ಇರದು.
ಹಮಾಸ್ ದಾಳಿ ನಡೆಸಿತೆಂದು ಆರಂಭವಾದ ಯುದ್ಧವು, ಈಗ ಒಂದು ಜನಾಂಗವನ್ನೇ ನಿರ್ನಾಮ ಮಾಡುವತ್ತ ಸಾಗಿದೆ. ಆರಂಭದಲ್ಲಿ ಇಸ್ರೇಲ್ ಪರ ನಿಂತ ಅನೇಕ ರಾಷ್ಟ್ರಗಳು ಕೂಡ ತಮ್ಮ ನಿಲುವನ್ನು ಪರಾಮರ್ಶೆ ಮಾಡಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ. ಆರಂಭದಲ್ಲಿ ಇಸ್ರೇಲ್ ಪರ ನಿಂತಂತೆ ವರ್ತಿಸಿದ್ದ ಭಾರತ ಸರ್ಕಾರ ಈಗ ಪ್ಯಾಲೆಸ್ತೀನಿಯರ ನೋವನ್ನು ಆಲಿಸುವುದು ಅನಿವಾರ್ಯವೆಂಬುದನ್ನು ಅರಿತುಕೊಂಡಿದೆ.
ಅಕ್ಟೋಬರ್ 7ರಿಂದ ಈವರೆಗೆ 15,000 ಪ್ಯಾಲೆಸ್ತೀನಿಯರು, 1,200 ಇಸ್ರೇಲಿಯರು ಯುದ್ಧದಲ್ಲಿ ಮೃತಪಟ್ಟಿದ್ದಾರೆಂಬುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. ಹೀಗಿರುವಾಗ ಪ್ಯಾಲೆಸ್ತೀನಿಯರನ್ನು ಉಳಿಸಿ, ಯುದ್ಧ ನಿಲ್ಲಿಸಿ, ಪ್ಯಾಲೆಸ್ತೀನ್ಗೆ ಸ್ವಾತಂತ್ರ್ಯ ನೀಡಿ ಎಂದು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ತಪ್ಪೇ? ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಈ ಯುದ್ಧದ ವಿರುದ್ಧ ದನಿ ಎತ್ತಬೇಕಾದದ್ದು ಮಾನವೀಯ ನಡೆ. ಇದನ್ನು ಜಗತ್ತಿನ ಹಲವು ದೇಶದ ನಾಗರಿಕರು ಮಾಡುತ್ತಿದ್ದಾರೆ. ವಿಶ್ವದ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಹೀಗಿರುವಾಗ ಕರ್ನಾಟಕ ಸರ್ಕಾರಕ್ಕೆ ಏನಾಗಿದೆ? ಕಾಂಗ್ರೆಸ್ ಸರ್ಕಾರವು ಪ್ಯಾಲೆಸ್ತೀನ್ ಪರ ನಿಂತವರ ಸೊಲ್ಲು ಅಡಗಿಸುವ ಕೃತ್ಯವನ್ನು ಎಸಗುತ್ತಿದೆಯಲ್ಲ ಏಕೆ? ರಾಜ್ಯದಲ್ಲಿ ಪೊಲೀಸರು ಅತ್ಯಂತ ದುಷ್ಟತನದಿಂದ ನಡೆದುಕೊಳ್ಳುತ್ತಿದ್ದಾರೆ. ಇದರ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೊರಲೇಬೇಕು.
ಪ್ಯಾಲೆಸ್ತೀನ್ ಪರವಾಗಿ ರಾಜ್ಯದಲ್ಲಿ ದನಿ ಎತ್ತಿದರೆ ಕೇಸ್ಗಳನ್ನು ಜಡಿಯಲಾಗಿದೆ. ಮೂಲನಿವಾಸಿ ಪ್ಯಾಲೆಸ್ತೀನಿಯರನ್ನು ಒಕ್ಕಲೆಬ್ಬಿಸಿ ರೂಪುಗೊಂಡ ಇಸ್ರೇಲ್ನದ್ದು ಕಳಂಕಯುಕ್ತ ರಕ್ತಸಿಕ್ತ ಚರಿತ್ರೆ. ಜರ್ಮನಿಯಲ್ಲಿ ನಾಜಿಗಳಿಂದ ನರಮೇಧಕ್ಕೊಳಗಾದ ಯಹೂದಿಗಳು ಮಾಡಿದ್ದೇನು? ದಶಕಗಳಿಂದಲೂ ಅಲ್ಲಿನ ಪ್ಯಾಲೆಸ್ತೀನಿಯರನ್ನು ದಮನ ಮಾಡುತ್ತಲೇ ಬಂದರು. ಹಮಾಸ್ ತೋರಿದ ಹಿಂಸಾತ್ಮಕ ಪ್ರತಿರೋಧಕ್ಕೆ ಪ್ರತಿಯಾಗಿ ಇಸ್ರೇಲ್ ಅಮಾಯಕ ಪ್ಯಾಲೆಸ್ತೀನಿಯರ ಜಿನೊಸೈಡ್ ನಡೆಸಲಾರಂಭಿಸಿತು. ಒಂದು ಕಣ್ಣಿಗೆ ಸಾವಿರ ಕಣ್ಣು ನೀತಿಯನ್ನು ಇಸ್ರೇಲ್ ಅನುಸರಿಸುತ್ತಿದೆ.
ವೆಸ್ಟ್ ಬ್ಯಾಂಕ್ನಲ್ಲಿರುವ ನೂರಾರು ಪ್ಯಾಲೆಸ್ತೀನಿ ರೈತರನ್ನು ಕೊಂದು ಭೂಮಿ ಕಸಿದುಕೊಳ್ಳಲಾಗುತ್ತಿದೆ. ಜಗತ್ತಿನ ಯಾವುದೇ ಮೂಲೆಯ ಜನರನ್ನು ಚಿಂತೆಗೆ ಈಡು ಮಾಡಬೇಕಾದ ಸಂಗತಿ ಇದು. ಅಂತೆಯೇ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿಯವರ ಮನಸ್ಸು ಕೂಡ ತಲ್ಲಣಿಸಿತು. ’ದಿ ಹಿಂದೂ’ ಪತ್ರಿಕೆಯಲ್ಲಿ ಲೇಖನವನ್ನೂ ಬರೆದರು. “ಈ ಯುದ್ಧವು ಮಾನವೀಯತೆಯನ್ನೇ ಕಟೆಕಟೆಯಲ್ಲಿ ನಿಲ್ಲಿಸಿದೆ. ನ್ಯಾಯವಿಲ್ಲದೆ ಶಾಂತಿ ಸಾಧ್ಯವಿಲ್ಲ. ಅನ್ನ, ನೀರು ಕೊಡದೆ ಪ್ಯಾಲೆಸ್ತೀನಿಯರನ್ನು ಗಾಜಾದಲ್ಲಿ ನಡೆಸಿಕೊಳ್ಳುತ್ತಿರುವ ರೀತಿ ಅಮಾನವೀಯ” ಎಂದು ಮರುಗಿದರು. ಆದರೆ ಕಾಂಗ್ರೆಸ್ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ಆದದ್ದೇ ಬೇರೆ. ಪ್ಯಾಲೆಸ್ತೀನ್-ಇಸ್ರೇಲ್ನಲ್ಲಿ ಶಾಂತಿ ನೆಲೆಸಲಿ ಎಂದು ಶಾಂತಿಯುತ ಸಭೆಗಳನ್ನು ನಡೆಸುವುದು ಇಲ್ಲಿ ತಪ್ಪೆಂದಾಗಿದೆ. ಪ್ಯಾಲೆಸ್ತೀನ್ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದರೆ ಎಫ್ಐಆರ್ ಹಾಕಲಾಗುತ್ತದೆ. Solidarity with the Palestinian ದಿನದ ಭಾಗವಾಗಿ ಬೆಂಗಳೂರಿನ ರಂಗಶಂಕರದಲ್ಲಿ ಕವನ ವಾಚನ, ನಾಟಕ ಪ್ರದರ್ಶನ ಹಮ್ಮಿಕೊಂಡರೆ ಪೊಲೀಸರಿಗೆ ಸ್ಕ್ರಿಪ್ಟ್ಗಳನ್ನು ಮುಂದಾಗಿಯೇ ತೋರಿಸಬೇಕಂತೆ! ಅಬ್ಬಾ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದೆಯೇ? ಇಂದಿರಾ ಗಾಂಧಿಯವರು ಎಮರ್ಜೆನ್ಸಿ ಹೇರಿದ್ದಾಗಲೂ ಇಂತಹ ದುಷ್ಟತನವನ್ನು ತೋರಿದ್ದಿಲ್ಲ. ರಾಜ್ಯದ ಪೊಲೀಸರಿಗೆ ಏನಾಗಿದೆ? ಕಾಂಗ್ರೆಸ್ ವರಿಷ್ಠರು ಹೇಳುವುದೊಂದು ಇಲ್ಲಿನ ಸರ್ಕಾರ ಮಾಡುತ್ತಿರುವುದು ಇನ್ನೊಂದು! ನಿಜಕ್ಕೂ ಇಲ್ಲಿ ಅಧಿಕಾರ ನಡೆಸುತ್ತಿರುವುದು ಯಾರು?
ರಾಜ್ಯ ಪೊಲೀಸರು ಪ್ಯಾಲೆಸ್ತೀನ್ ವಿಚಾರವಾಗಿ ಮಾಡಿದ್ದು ಒಂದೇ ಎರಡೇ? ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಸಾವಿರಾರು ಶಾಂತಿಪ್ರಿಯ ನಾಗರಿಕರು ಸ್ವಪ್ರೇರಿತರಾಗಿ ಸೇರಿ ಯುದ್ಧ ವಿರಾಮವನ್ನು ಆಗ್ರಹಿಸಿ ಭಿತ್ತಿಪತ್ರ ಪ್ರದರ್ಶನ ಮಾಡಿದರೆ, ಕಾನೂನು ಉಲ್ಲಂಘನೆಯ ಆಪಾದನೆ ಹೊರಿಸಿ 30ಕ್ಕೂ ಹೆಚ್ಚು ಪ್ರತಿಭಟನಾಕಾರರ ಮೇಲೆ ಪ್ರಕರಣ ದಾಖಲಿಸಲಾಯಿತು. ಫ್ರೀಡಂಪಾರ್ಕಿನಲ್ಲಿ ಮಾತ್ರ ಪ್ರತಿಭಟನೆಗೆ ಅವಕಾಶ ಎಂಬ ಸಬೂಬು ನೀಡಲಾಯಿತು. (ಫ್ರೀಡಂಪಾರ್ಕ್ನಲ್ಲಿ ಮಾತ್ರ ಪ್ರತಿಭಟಿಸಬೇಕೆಂದು ಹೈಕೋರ್ಟ್ ಆದೇಶವಿಲ್ಲ ಎಂಬುದು ವಾಸ್ತವ. ಅದು ಪೊಲೀಸರೇ ಮಾಡಿಕೊಂಡಿರುವ ನಿಯಮ. ಅಂತಹ ನಿರ್ಬಂಧಗಳನ್ನು ಕೋರ್ಟ್ ಸೂಚಿಸಿದರೂ ಅದು ಪ್ರಶ್ನಾರ್ಹ ಎಂಬುದು ಬೇರೆಯ ಮಾತು.) ಎಸ್ಯುಸಿಐ ಸಂಘಟನೆ ಫ್ರೀಡಂಪಾರ್ಕಿನಲ್ಲೇ ಪ್ರತಿಭಟನೆಗೆ ಅವಕಾಶ ನೀಡಿರೆಂದು ಮನವಿ ಕೊಟ್ಟರೆ, ಶಾಂತಿ ಸುವ್ಯವಸ್ಥೆಯ ನೆಪವೊಡ್ಡಿ ಅನುಮತಿ ನಿರಾಕರಿಸಲಾಯಿತು. ಸಿಪಿಐ, ಸಿಪಿಎಂ, ಸಿಪಿಐ-ಎಂಎಲ್ ಸಂಘಟನೆಗಳು ಪ್ರತಿಭಟನೆಗೆ ಅವಕಾಶ ಕೇಳಿದರೆ ಸ್ಥಳಾವಕಾಶದ ಕೊರತೆ ನೆಪ ನೀಡಿ ತಡೆಯಲಾಯಿತು. ಹತ್ತಾರು ವರ್ಷಗಳಿಂದ ಪರಿಸರ ಪರ, ಪ್ರಗತಿಪರ ಚಳವಳಿಯಲ್ಲಿ ಮುಂಚೂಣಿಯಲ್ಲಿರುವ ತುಮಕೂರಿನ ಸಿ.ಯತಿರಾಜು ಹಾಗೂ ಇತರರ ಮೇಲೆ ಕೇಸ್ ಜಡಿಯಲಾಗಿದೆ. ಯುದ್ಧ ನಿಲ್ಲಬೇಕೆಂದು ಶಾಂತಿಯುತ ಪ್ರತಿಭಟನೆ ನಡೆಸಿದರೆ ಎರಡು ಕೋಮುಗಳ ನಡುವೆ ವೈಷಮ್ಯ ಬಿತ್ತುತ್ತಿದ್ದಾರೆಂದು ಪ್ರಕರಣ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ.
ಎಸ್ಡಿಪಿಐ ಹಾಗೂ ಕೆಲವು ಸಂಘಟನೆಗಳು ಶಾಂತಿಗಾಗಿ ಧರಣಿ ಮಾಡಲು ಅವಕಾಶ ಕೋರಿದರೆ ವಿಜಯಪುರದ ಪೊಲೀಸ್ ಅಧಿಕಾರಿಗಳು ಕೊಟ್ಟ ಕಾರಣ ಆತಂಕ ಹುಟ್ಟಿಸುತ್ತದೆ: “ಕೇಂದ್ರ ಸರ್ಕಾರದ ಅಧಿಕೃತ ನಿಲುವಿಗೆ ಈ ಧರಣಿ ವಿರುದ್ಧವಿದೆ” ಎಂದಿದ್ದರು. ಬೆಂಗಳೂರಿನ ಫ್ರೇಜರ್ಟೌನ್ನಲ್ಲಿ ಹಮ್ಮಿಕೊಂಡಿದ್ದ ಯುದ್ಧ ವಿರೋಧಿ ಕಲಾ ಪ್ರದರ್ಶನ, ಭಾಷಣಕ್ಕೆ ತಡೆ ನೀಡಿದ್ದು, ಕರ್ನಾಟಕ ಸಾಲಿಡಾರಿಟಿ ಯೂಥ್ ಮೂವ್ಮೆಂಟ್ ಸಂಘಟನೆ ತನ್ನ ಕಚೇರಿಯಲ್ಲಿ ತನ್ನ ಸದಸ್ಯರೊಂದಿಗೆ ಪ್ಯಾಲೆಸ್ತೀನ್ ಬಿಕ್ಕಟ್ಟಿನ ಕುರಿತು ಚರ್ಚಿಸಲು ಮುಂದಾದಾಗ ತಡೆ ನೀಡಿ ಕಾರ್ಯಕ್ರಮವನ್ನು ಮುಂದೂಡಿಸಿದ್ದು- ಹೀಗೆ ಸಾಗುತ್ತದೆ ಪೊಲೀಸರ ದುಷ್ಕೃತ್ಯ. ಅಮೆರಿಕ, ಇಂಗ್ಲೆಂಡ್ನಂತಹ ದೇಶಗಳಲ್ಲೇ ಪ್ಯಾಲೆಸ್ತೀನ್ ಪರ ಘೋಷಣೆಗಳು ಮೊಳಗುತ್ತಿವೆ, ಯುದ್ಧ ವಿರೋಧಿ ನಿಲುವುಗಳನ್ನು ನಾಗರಿಕರು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಕಾಣದ ಕೈಗಳು, ಇಸ್ರೇಲಿ ಸಂತತಿಯವರು ಕೆಲಸ ಮಾಡುತ್ತಿದ್ದಾರೆಯೇ?
ಪ್ಯಾಲೆಸ್ತೀನ್ ಜನರ ನರಮೇಧವನ್ನು ಹೇಗೆ ಮಾಡಲಾಗುತ್ತಿದೆ ಎಂಬುದನ್ನು ಸ್ವಲ್ಪ ವಿವರಿಸಿದರೂ ಜಡ್ಡುಗಟ್ಟಿದ ಪೊಲೀಸರಿಗೆ ಮನವರಿಕೆಯಾಗುತ್ತದೆ ಎಂದು ಭಾವಿಸುವುದು ತಪ್ಪಾದೀತು. ಆದರೆ ಹೇಳುವುದು ಅನಿವಾರ್ಯ. ಐದು ದಿನಗಳ ಹಿಂದೆ ಬಿಬಿಸಿಯಲ್ಲಿ ಪತ್ರಕರ್ತ ಪಾಲ್ ಆಡಮ್ಸ್ ಅವರು ಬೆಚ್ಚಿಬೀಳಿಸುವ ವರದಿಯೊಂದನ್ನು ಮಾಡಿದ್ದಾರೆ. ಅದನ್ನು ಇಸ್ರೇಲ್ ಸರ್ಕಾರವಾಗಲೀ, ಅಮೆರಿಕವಾಗಲೀ ತಳ್ಳಿ ಹಾಕಿಲ್ಲ ಎಂಬುದನ್ನು ಗಮನಿಸಬೇಕು. ಬಿಬಿಸಿ ವರದಿ ಏನು ಹೇಳಿದೆ ಗೊತ್ತೆ?
ಉತ್ತರ ಗಾಜಾದಲ್ಲಿನ ಪ್ಯಾಲೆಸ್ತೀನಿಯರನ್ನು ದಕ್ಷಿಣ ಗಾಜಾದ ಕೇವಲ ಹತ್ತು ಚದುರ ಕಿಲೋಮೀಟರ್ರಷ್ಟಿರುವ ಅಲ್ಮವಾಸಿ ಎಂಬ ಸ್ಥಳಕ್ಕೆ ದೂಡುವ ಯೋಜನೆಯನ್ನು ಇಸ್ರೇಲ್ ರೂಪಿಸಿದೆ. ಗಾಜಾ ಈಗಾಗಲೇ ಬಯಲು ಬಂಧಿಖಾನೆ. ಜಗತ್ತಿನಲ್ಲಿ ಅತಿ ಜನಸಾಂಧ್ರತೆ ಇರುವ ಜಾಗಗಳಲ್ಲಿ ಗಾಜಾಪಟ್ಟಿಯೂ ಒಂದು. ಅದರ ವ್ಯಾಪ್ತಿ 13 ಕಿಲೋಮೀಟರ್ ಅಗಲ, 40 ಕಿಲೋಮೀಟರ್ ಉದ್ದ. ಇಲ್ಲಿಗೆ ದೂಡಲ್ಪಟ್ಟ ಪ್ಯಾಲೆಸ್ತೀನಿಯರ ಜನಸಂಖ್ಯೆ ಸುಮಾರು 23 ಲಕ್ಷ. ಉತ್ತರ ಗಾಜಾದಲ್ಲಿ ಸುಮಾರು 11 ಲಕ್ಷ ಜನ ಇದ್ದಾರೆ. ದಕ್ಷಿಣ ಗಾಜಾದಲ್ಲಿ 12 ಲಕ್ಷ ಇದ್ದಾರೆ. ಈಗ ಇಷ್ಟೂ ಜನರನ್ನು ಕೇವಲ ಎರಡೂವರೆ ಕಿಲೋಮೀಟರ್ ಅಗಲ ಮತ್ತು ನಾಲ್ಕು ಕಿಲೋಮೀಟರ್ ಉದ್ದದ ಅಲ್ಮವಾಸಿ ಎಂಬಲ್ಲಿ ದೂಡುವ ಸಂಚನ್ನು ಇಸ್ರೇಲ್ ನಡೆಸಿದೆ. ಯುದ್ಧ ನಿಲ್ಲಿಸುತ್ತೇವೆ ಎನ್ನುತ್ತಾ ಇಸ್ರೇಲ್ ಮಾಡಲು ಹೊರಟಿರುವ ಎರಡನೇ ಹಂತದ ನರಮೇಧವಿದು. ಇಷ್ಟು ಚಿಕ್ಕ ಜಾಗದಲ್ಲಿ 23 ಲಕ್ಷ ಜನ ಬದುಕುವುದೆಂದರೆ ಸ್ವಲ್ಪ ಊಹಿಸಿಕೊಳ್ಳಿ. ಅರವತ್ತು ಲಕ್ಷ ಯಹೂದಿಗಳ ಮೇಲೆ ಹಿಟ್ಲರ್ ನಡೆಸಿದ ನರಮೇಧವನ್ನು ಈ ಘಟನೆ ನೆನಪಿಸುತ್ತಿದೆ. ಯಹೂದಿಗಳನ್ನು ಹಿಟ್ಲರ್ ಹೇಗೆ ಕೊಂದನೋ ಅಂತಹದ್ದೇ ನರಮೇಧವನ್ನು ಇಸ್ರೇಲಿಯನ್ನರು (ಅಂದರೆ ಯಹೂದಿಗಳು), ಪ್ಯಾಲೆಸ್ತೀನಿಯನ್ನರ ಮೇಲೆ ಮಾಡಲು ಹೊರಟಿದ್ದಾರೆ.
ಪ್ಯಾಲೆಸ್ತೀನ್- ಇಸ್ರೇಲ್ನ ಈ ಐತಿಹಾಸಿಕ ಬಿಕ್ಕಟ್ಟಿಗೆ ಕಾರಣವಾದ ಇಂಗ್ಲೆಂಡ್, ಅಮೆರಿಕದಂತಹ ದೇಶಗಳು ಕೂಡ ಇಸ್ರೇಲ್ ನಡೆಯನ್ನು ಸಮರ್ಥಿಸಲಾಗದ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿದೆ. ವಿಶ್ವದ ಹಲವು ದೇಶಗಳಲ್ಲಿ ಪ್ಯಾಲೆಸ್ತೀನ್ ಪರವಾಗಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಈ ಅಮಾನವೀಯ ಬಿಕ್ಕಟ್ಟಿನ ಸನ್ನಿವೇಶದಲ್ಲಿ ನವೆಂಬರ್ 29ರಂದು ಜಗತ್ತಿನಾದ್ಯಂತ ನಡೆದ ‘International Day of Solidarity with the Palestinian People’ ಗಮನ ಸೆಳೆದಿದೆ. 1977ರಿಂದಲೂ ನವೆಂಬರ್ 29ರಂದು ಪ್ರತಿವರ್ಷವೂ ವಿಶ್ವಸಂಸ್ಥೆ ಈ ದಿನವನ್ನು ಆಚರಿಸುತ್ತಾ ಬಂದಿದೆ. ಈ ವರ್ಷ ಯುದ್ಧದ ಹಿನ್ನೆಲೆಯಲ್ಲಿ ಈ ದಿನವು ಮಹತ್ವ ಪಡೆದುಕೊಂಡಿತ್ತು. ಹೀಗಾಗಿ ಫಿಲಿಫೈನ್ಸ್ ದೇಶದ ರಾಜಧಾನಿ ಮನಿಲಾ, ಟ್ಯುನೇಷಿಯಾದ ಟುನಸ್, ಇರಾನ್ನ ತೆಹ್ರಾನ್, ಪಾಕಿಸ್ತಾನದ ಕರಾಚಿ, ಲೆಬನಾನ್ನ ಬೈರೂತ್, ಜಿಂಬಾಂಬೆಯ ಹರಾರೆ, ಜಪಾನ್ನ ಟೋಕಿಯೊ, ಸ್ವೀಡನ್ನ ಸ್ಟಾಕ್ಹೋಮ್, ಇಂಗ್ಲೆಂಡ್ನ ಲಂಡನ್, ಸೌತ್ ಆಫ್ರಿಕಾದ ಜೊಹಾನ್ಸ್ಬರ್ಗ್, ಫಿಲಿಫೈನ್ಸ್ನ ಕ್ಯೂಸನ್ ಸಿಟಿ, ಉತ್ತರ ಇಟಲಿಯ ಮಿಲಾನ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ಯಾಲೆಸ್ತೀನ್ ಪರ ಶಾಂತಿಯುತ ಪ್ರತಿಭಟನೆಗಳು ನಡೆದಿವೆ.
ಗಾಜಾ ಪಟ್ಟಿಯ ಮೇಲೆ ದಾಳಿ ನಡೆದ ಆರಂಭದಲ್ಲೇ ಅಂದರೆ ಅಕ್ಟೋಬರ್ 15, 16ರಂದು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರತಿಭಟನೆಗಳು ಆರಂಭವಾದವು. ಸಾವಿನ ಸಂಖ್ಯೆ ಏರುತ್ತಲೇ ಇದ್ದದ್ದನ್ನು ಕಂಡು ಆತಂಕಿತರಾದ ಜನರು ಪ್ಯಾಲೆಸ್ತೀನ್ ಪರ ನಿಂತು ಅಮೆರಿಕದ ರಾಜಧಾನಿಯಲ್ಲಿ ಜಮಾಯಿಸಿ ವೈಟ್ ಹೌಸ್ ಕಡೆಗೆ ಸಾಗುತ್ತಾ, “ಫ್ರೀ ಪ್ಯಾಲೆಸ್ತೀನ್” ಘೋಷಣೆಗಳನ್ನು ಕೂಗಿದರು. ಅಮೆರಿಕದ ಲಾಸ್ ಏಂಜಲೀಸ್, ನ್ಯೂಯಾರ್ಕ್, ಮಿಚಿಗನ್ನಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ ಜನ ಆಕ್ರೋಶ ಹೊರಹಾಕಿದ್ದರು.
ಯುನೈಟೆಡ್ ಕಿಂಗ್ಡಮ್ನಲ್ಲಿ ಪ್ರತಿಭಟನೆಗಳನ್ನು ಆಯೋಜಿಸಿದಾಗ ಅಲ್ಲಿನ ಪ್ರಭುತ್ವ ಬೆದರಿಕೆ ಹಾಕಿತ್ತು. ಇದಕ್ಕೆಲ್ಲ ಸಡ್ಡು ಹೊಡೆದ ಜನರು ಉತ್ತರ ಇಂಗ್ಲೆಂಡ್ನ ಮ್ಯಾಂಚೆಸ್ಟರ್, ಸ್ಕಾಟ್ಲೆಂಡ್ನ ಎಡಿನ್ಬರೊ, ಗ್ಲಾಸ್ಗೋ ಮತ್ತು ಲಂಡನ್ನಲ್ಲಿ ರ್ಯಾಲಿಗಳನ್ನು ನಡೆಸಿದರು. ಸ್ವಿಟ್ಜರ್ಲೆಂಡ್ನ ರಾಜಧಾನಿ ಜಿನೀವಾದಲ್ಲಿ, ವಾಯುವ್ಯ ಇಟಲಿಯ ಟುರಿನ್ನಲ್ಲಿ ಮತ್ತು ಐರಿಶ್ ರಾಜಧಾನಿ ಡಬ್ಲಿನ್ನಲ್ಲಿ ಪ್ಯಾಲೆಸ್ತೀನ್ ಪರವಾದ ಹೋರಾಟ ನಡೆದಿವೆ. ಮೊರಾಕೊದ ರಬಾತ್ನಲ್ಲಿ ಸಾವಿರಾರು ಜನರು ಪ್ಯಾಲೆಸ್ತೀನ್ ಜನರೊಂದಿಗೆ ನಿಲ್ಲುವ ಘೋಷಣೆ ಮಾಡಿದ್ದಾರೆ.
ಅಕ್ಟೋಬರ್ 20ರಂದು ಆಗಿರುವ ವರದಿಯ ಪ್ರಕಾರ, ಮತ್ತಷ್ಟು ರಾಷ್ಟ್ರಗಳಲ್ಲಿ ಪ್ಯಾಲೆಸ್ತೀನ್ ಪರ ದನಿ ಎದ್ದಿತು. ಜೋರ್ಡಾನ್ನ ರಾಜಧಾನಿ ಅಮ್ಮಾನ್ನಲ್ಲಿ ಅಂದಾಜು 6,000 ಜನರು ಬೀದಿಗಿಳಿದಿದ್ದರು. ನೂರಾರು ಇರಾಕಿ ಪ್ರತಿಭಟನಾಕಾರರು ಜೋರ್ಡಾನ್ ಬಳಿಯ ಪಶ್ಚಿಮ ಟ್ರೆಬಿಲ್ ಗಡಿಯಲ್ಲಿ ಸೇರಿ ಆಕ್ರೋಶ ಹೊರಹಾಕಿದರು. ಸಾವಿರಾರು ಈಜಿಷ್ಟಿಯನ್ನರು ಉತ್ತರ ಆಫ್ರಿಕಾದ ದೇಶಗಳ ಪ್ರಮುಖ ನಗರಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದರು.
ಗಾಜಾದ ಜನರಿಗಾಗಿ ಟರ್ಕಿ ಸರ್ಕಾರ ಮೂರು ದಿನಗಳ ಶೋಕಾಚರಣೆಯನ್ನು ಘೋಷಿಸಿತ್ತು. ಇಸ್ತಾಂಬುಲ್ ಮತ್ತು ಅಂಕಾರಾದಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಸಾವಿರಾರು ಜನರು ಮಸೀದಿಗಳ ಹೊರಗೆ ಪ್ರತಿಭಟನೆ ನಡೆಸಿದ್ದರು.
ಕತಾರ್ನ ದೋಹಾದಲ್ಲಿರುವ ಇಮಾಮ್ ಮುಹಮ್ಮದ್ ಬಿನ್ ಅಬ್ದುಲ್ ವಹಾಬ್ ಮಸೀದಿಯಲ್ಲಿ ವಿವಿಧ ರಾಷ್ಟ್ರಗಳ ಜನರು ಜಮಾಯಿಸಿ ಇಸ್ರೇಲ್ ದೇಶದ ಅಮಾನವೀಯ ನಡೆಯನ್ನು ಖಂಡಿಸಿದರು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಆಕ್ರಮಿತ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ನ ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯದ ಪರವಾಗಿ ಭಾರತ ಮತ ಹಾಕಿದೆ. ಇದು ಆಗಬೇಕಾದ ಕೆಲಸ.
ಹೇಳಬೇಕೆಂದರೆ ಮಾನವೀಯವಾಗಿ ಯೋಚಿಸುವ ಲಕ್ಷಾಂತರ ಯಹೂದಿಗಳು ಕೂಡ ಪ್ಯಾಲೆಸ್ತೀನ್ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಖಂಡಿಸುತ್ತಿದ್ದಾರೆ. ಇಸ್ರೇಲ್ ಪ್ರಭುತ್ವದ ನಡೆಯನ್ನು ಬ್ರಿಟನ್ನಲ್ಲಿರುವ ಯಹೂದಿ ಸಂಘಟನೆಗಳು ಕಟುವಾಗಿ ಟೀಕಿಸಿ ಪ್ರತಿಭಟನೆ ನಡೆಸಿದ್ದವು. ’ನಮ್ಮ ಹೆಸರಲ್ಲಿ ಈ ಕೃತ್ಯ ಎಸಗಬೇಡಿ’ ಎಂದು ಯಹೂದಿಗಳೇ ನೊಂದು ನುಡಿಯುತ್ತಿರುವಾಗ, ಕರ್ನಾಟಕ ಸರ್ಕಾರಕ್ಕೇನು ಬಂದಿದೆ ರೋಗ?
ಪ್ಯಾಲೆಸ್ತೀನ್ ವಿಚಾರವಾಗಿ ರಾಜ್ಯ ಸರ್ಕಾರ ನಡೆದುಕೊಂಡಿರುವ ರೀತಿಯನ್ನು ನೋಡುತ್ತಿದ್ದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ, ಕಾಂಗ್ರೆಸ್ ಅಧಿಕಾರದಲ್ಲಿದೆಯೋ ಎಂಬ ಅನುಮಾನ ಮೂಡುತ್ತಿದೆ. ಬಹುಶಃ ಬಿಜೆಪಿ ಅವಧಿಯಲ್ಲೂ ಇಂತಹ ಘಟನೆಯಾದ ಉದಾಹರಣೆಗಳು ಇಲ್ಲ. ಇನ್ನಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಗೃಹ ಸಚಿವ ಜಿ.ಪರಮೇಶ್ವರ್ ಅವರು ಎಚ್ಚೆತ್ತುಕೊಂಡು ಜನರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತಾರೋ ಅಥವಾ ತಾವೂ ಈ ಕೃತ್ಯದ ಭಾಗವಾಗಿದ್ದೇವೆಂದು ಸಾಬೀತು ಮಾಡುತ್ತಾರೋ ನೋಡೋಣ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.