ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ ಬಾಡಿಗೆ ಕಟ್ಟಡದಲ್ಲಿ ಗಾಳಿ, ಬೆಳಕಿನ ಕೊರತೆ ಇರುವ ಕಾರಣ ತಕ್ಷಣ ಕಟ್ಟಡ ಸ್ಥಳಾಂತರಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಬುಧವಾರ (ನ.29) ವಿದ್ಯಾರ್ಥಿ ನಿಲಯದ ಮುಂದೆ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಸಂಖ್ಯೆಗೆ ಹೋಲಿಸಿದರೆ, ಮಲಗುವ ಕೊಠಡಿಗಳು ಚಿಕ್ಕವು, ಕಟ್ಟಡದಲ್ಲಿನ ಶೌಚಾಲಯ ಮತ್ತು ಸ್ಥಾನ ಗೃಹಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲ. ಬಟ್ಟೆ ತೊಳೆಯಲು ಸೂಕ್ತ ಸ್ಥಳವಿಲ್ಲ. ಮುಖ್ಯ ರಸ್ತೆಗೆ ಹೊಂದಿಕೊಂಡಿದೆ. ಅದರಿಂದಾಗಿ ವಿದ್ಯಾರ್ಥಿಗಳ ವಿದ್ಯಾಭಾಸಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಕಟ್ಟಡ ಸ್ಥಳಾಂತರಿಸಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸರಸ್ವತಿ ಗಜಕೋಶ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಕಟ್ಟಡ ಸ್ಥಳಾಂತರಿಸಲು ಮುಂದಾಗಿದ್ದರು, ಆದರೆ, ಕಟ್ಟಡ ಮಾಲೀಕ ಸಿದ್ದಾರ್ಥಗೌಡ ಪಾಟೀಲ್, ಕಳೆದ 10ತಿಂಗಳ ₹3.78 ಲಕ್ಷ ಬಾಡಿಗೆ ಹಣ ನೀಡಬೇಕು. ಅಲ್ಲದೆ ಕಟ್ಟಡದ ಗೋಡೆಗಳು ಅಲ್ಲಲ್ಲಿ ಹಾನಿಯಾಗಿದ್ದು, ಅದರ ಹಾನಿ ತುಂಬಬೇಕು. ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಬೇಕು. ಇಲ್ಲವಾದಲ್ಲಿ ಇಲ್ಲಿನ ಸಾಮಗ್ರಿಗಳನ್ನು ಹೊರ ಹಾಕಲು ಬಿಡುವುದಿಲ್ಲ ಎಂದು ತಡೆದಿದ್ದಾರೆ.
ಕಟ್ಟಡ ಮಾಲೀಕರು ನವೀಕರಣ ಮಾಡದ ಕಾರಣ ಬಾಡಿಗೆ ಹಣ ವಿತರಣೆಯಲ್ಲಿ ವಿಳಂಬವಾಗಿದೆ. ಆದರೆ, ಬಾಡಿಗೆ ಹಣ ಗುರುವಾರ ಸರ್ಕಾರಿ ರಜೆ ಇರುವ ಕಾರಣ ಶುಕ್ರವಾರ ಸಂಪೂರ್ಣ ಹಣ ನೀಡಲಾಗುತ್ತಿದೆ. ಅಲ್ಲಿವರೆಗೆ ಅವಕಾಶ ನೀಡಬೇಕು. ಹೊಸ ಕಟ್ಟಡವನ್ನು ಗುರುತಿಸಲಾಗಿದೆ. ಹಣ ತುಂಬಿದ ನಂತರ ಇಲ್ಲಿನ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಅಧಿಕಾರಿ ಸರಸ್ವತಿ ಗಜಕೋಶ ಹೇಳಿದ್ದಾರೆ.