ರಸ್ತೆ ನಿರ್ಮಾಣಕ್ಕೆ ಜಮೀನು ಸ್ವಾಧೀನಕ್ಕಾಗಿ ಅತ್ಯಲ್ಪ ಪರಿಹಾರ ನೀಡುತ್ತಿದ್ದಾರೆಂದು ಅಸಮಾಧಾನಗೊಂಡಿದ್ದ ನಿವೃತ್ತ ಅಂಚೆ ನೌಕರರೊಬ್ಬರು ತಮ್ಮ ಜಮೀನಿನ ಬಳಿ ರಸ್ತೆಗೆ ಕಡಿದಾದ ‘ಹುಬ್ಬ’ (ಹಂಪ್) ನಿರ್ಮಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾಡವಾಡದ ಸತ್ತೂರು ಬಡಾವಣೆಯ ನಿವಾಸಿ ನಾಗಪ್ಪ ಮಹಾದೇವಪ್ಪ ಅರವಾಳದ್ ಅವರು ರಸ್ತೆಗೆ ಕಡಿದಾದ ಹಂಪ್ ನಿರ್ಮಿಸಿದ್ದಾರೆ. ತಮ್ಮ ಜಮೀನಿನ ಮೂಲಕ ವಾಹನಗಳು ತೆರಳದಂತೆ ಅಡ್ಡಿಪಡಿಸಲು ಹಂಪ್ ನಿರ್ಮಿಸಿದ್ದಾರೆ ಎಂದು ತಿಳಿದುಬಂದಿದೆ.
ದಶಕಗಳ ಹಿಂದಿನ ಜಮೀನು ಬೆಲೆ ಆಧರಿಸಿ ಅಧಿಕಾರಿಗಳು ಪರಿಹಾರ ನೀಡುತ್ತಿದ್ದಾರೆಂದು ಆರೋಪಿಸಿದ್ದ ನಾಗಪ್ಪ ರಸ್ತೆಗಾಗಿ ತಮ್ಮ ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದರು ಎಂದು ವರದಿಯಾಗಿದೆ.
“ಇಂದಿನ ಮಾರುಕಟ್ಟೆ ಬೆಲೆಯನ್ನು ನೀಡದೆ, ಜಮೀನಿನ ಮೂಲ ಬೆಲೆಗೆ ಅನುಗುಣವಾಗಿ ಪರಿಹಾರ ನೀಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅವರು 20 ವರ್ಷಗಳ ಹಿಂದೆ ನೀಡುತ್ತಿದ್ದ ಸಂಬಳವನ್ನು ಈಗ ಪಡೆಯುತ್ತಾರೆಯೇ” ಎಂದು ಅವರು ಪ್ರಶ್ನಿಸಿದ್ದಾರೆ.
ಸುಮಾರು 1,090 ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ರಸ್ತೆ ನಿರ್ಮಾಣಕ್ಕೆ ನೀಡಲು ನಿರಾಕರಿಸಿದ್ದ ಮಹಾದೇವಪ್ಪ, “ನನ್ನ ಭೂಮಿಯಲ್ಲಿ ರಸ್ತೆ ನಿರ್ಮಿಸುವ ಹಕ್ಕು ಅಧಿಕಾರಿಗಳಿಗೆ ಇಲ್ಲ” ಎಂದು ಹೇಳಿದ್ದಾರೆ.
”ನಮ್ಮ ಗಡಿ ಕಲ್ಲನ್ನು ಕಿತ್ತು, ರಸ್ತೆ ಹಾಕುವ ಮುನ್ನ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದರೂ ಪರಿಹಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ರಸ್ತೆ ನಿರ್ಮಾಣಕ್ಕಾಗಿ ನಾನು ಒಟ್ಟು ಒಂದು ಗುಂಟಾ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇನೆ. ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪ್ರಕಾರ ನಾವು ಪರಿಹಾರಕ್ಕೆ ಬೇಡಿಕೆಯಿಟ್ಟಿದ್ದೇವೆ,’’ ಎಂದು ನಾಗಪ್ಪ ಹೇಳಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಪಾಲಿಕೆ ಆಯುಕ್ತರು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವು ಸರ್ಕಾರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಾಗಪ್ಪ ಅವರೊಂದಿಗೆ ಸಂಧಾನಕ್ಕೆ ಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಸೂಕ್ತ ಪರಿಹಾರ ದೊರೆಯದ ಕಾರಣ, ನಾಗಪ್ಪ ಅವರು ಹಂಪ್ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.
“ಕಡಿದಾದ ಹಂಪ್ ನಿರ್ಮಿಸಿರುವುದರಿಂದ ಯಾವುದೇ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಬಗೆಹರಿಸಿ ಸ್ಥಳೀಯರಿಗೆ ನೆರವಾಗಬೇಕು” ಎಂದು ಸತ್ತೂರು ಬಡಾವಣೆ ನಿವಾಸಿಗಳು ಹೇಳಿದ್ದಾರೆ.