- ಸಮಸ್ಯೆಗಳು ಒಮ್ಮೆಗೆ ಬಗೆಹರಿಯಲೂ ಸಾಧ್ಯವಿಲ್ಲ
- ಬಿ ಆರ್ ಪಾಟೀಲ್‌ಗೆ ಏನೋ ನಿರ್ದಿಷ್ಟ ಸಮಸ್ಯೆ ಇದೆ
ಶಾಸಕರ ಮತ್ತು ಸಚಿವರ ಸಮಸ್ಯೆಗಳಿಗೆ ಕೊನೆ ಇಲ್ಲ. ಅದೆಲ್ಲ ಒಮ್ಮೆಗೆ ಬಗೆಹರಿಯಲೂ ಸಾಧ್ಯವಿಲ್ಲ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ ಆರ್ ಪಾಟೀಲ್‌ಗೆ ಏನೋ ನಿರ್ದಿಷ್ಟ ಸಮಸ್ಯೆ ಇದೆ. ಯಾರಿಂದ ಸಮಸ್ಯೆ ಆಗಿದೆ ಅಂತ ಅವರೇ ಹೇಳಬೇಕು. ನಮ್ಮ ಇಲಾಖೆಗೆ ಸಂಬಂಧಿಸಿದ್ದಲ್ಲ ಎಂದರು.
ಬಿ ಆರ್ ಪಾಟೀಲ್ ಅವರು ತಮ್ಮ ಕ್ಷೇತ್ರದ ಸಮಸ್ಯೆ ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಬೆಳಗ್ಗೆ ಗರಂ ಆಗಿದ್ರು, ಸಾಯಂಕಾಲ ಕೂಲ್ ಆದ್ರು ಅಂತ ಮಾಧ್ಯಮಗಳಲ್ಲೇ ಬಂದಿದೆ. ಅದು ಮುಗಿದು ಹೋದ ಕಥೆ ಅಂತ ಅನಿಸುತ್ತದೆ ಎಂದು ಹೇಳಿದರು.
ಶಾಸಕರು ಮತ್ತು ಮಂತ್ರಿಗಳ ಸಮಸ್ಯೆ ಒಂದೇ ಸಲ ಬಗೆಹರಿಯಲು ಸಾಧ್ಯವಿಲ್ಲ. ಅಧಿಕಾರದ ಖುರ್ಚಿ ಮೇಲೆ ಕೂತಾಗ ಕೆಲವು ಸಮಸ್ಯೆ ಪರಿಹರಿಸುತ್ತೇವೆ ಕೆಲವು ಆಗಲ್ಲ. ಇದು ನಡೆಯುತ್ತಲೇ ಇರುತ್ತದೆ” ಎಂದರು.
ಶಾಸಕಾಂಗ ಸಭೆ ಕರೆದು ಶಾಸಕರ ಸಮಸ್ಯೆ ಬಗೆಹರಿಸುವ ಪ್ರಯತ್ನ ಆಗಿತ್ತು. ಸರ್ಕಾರ ಇದ್ದಾಗ ಪ್ರತಿನಿತ್ಯ ಹೊಸ ಸಮಸ್ಯೆಗಳು ಉದ್ಭವ ಆಗಿಯೇ ಆಗುತ್ತದೆ. ಇವತ್ತು ಒಂದನ್ನು ಪರಿಹಾರ ಮಾಡ್ತೀವಿ, ನಾಳೆ ಇನ್ನೊಂದು ಬಂದೇ ಬರುತ್ತದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉತ್ತರಕಾಶಿ ಸುರಂಗ ಕುಸಿತದಲ್ಲಿವೆ ಹಿಂದು-ಮುಸ್ಲಿಮ್ ಏಕತೆ ಪಾಠಗಳು
ನಿಗಮ ಮಂಡಳಿ ನೇಮಕದಲ್ಲಿ ಹಿರಿಯರ ಅಭಿಪ್ರಾಯ ಪಡೆಯದ ವಿಚಾರವಾಗಿ ಪರಮೇಶ್ವರ್ ಮಾತಿಗೆ ದನಿಗೂಡಿಸಿದ ಸತೀಶ್ ಜಾರಕಿಹೊಳಿ ಹೌದು, ಪರಮೇಶ್ವರ್ ಅವರ ಅಭಿಪ್ರಾಯ ಕೇಳಬೇಕಿತ್ತು. ಎಂಟು ವರ್ಷ ಅವರು ಅಧ್ಯಕ್ಷರಾಗಿದ್ದವರು, ಪಾರ್ಟ್ ಆಫ್ ದಿ ಪಾರ್ಟಿ ಇದ್ದಾರೆ ಪರಮೇಶ್ವರ್. ಅವರ ಅಭಿಪ್ರಾಯವನ್ನೂ ಕೇಳಬೇಕಿತ್ತು ಎಂದರು.
ಮೂರು ನಾಲ್ಕು ಬಾರಿ ಗೆದ್ದವರಿಗೆ ನಿಗಮ ಮಂಡಳಿ ನೀಡಲು ಪಾರ್ಟಿ ಬದ್ದವಾಗಿದೆ. ಮೊದಲ ಸಲ ಬಂದವರಿಗೆ ಇಲ್ಲವೇ ಇಲ್ಲ. ನಮ್ಮ ಜಿಲ್ಲೆಯವರಿಗೂ ಎರಡು ಮೂರು ಜನರು ಸೀನಿಯರ್ಸ್ ಇದ್ದಾರೆ ಅವರಿಗೆ ನಿಗಮ ಮಂಡಳಿ ಕೊಟ್ಟೇ ಕೊಡ್ತಾರೆ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಯಾವತ್ತೂ ಕೂಡ ಉಕ ಭಾಗದ ಸಮಸ್ಯೆ ಬೆಳಗಾವಿಯಲ್ಲಿ ಚರ್ಚೆಯೇ ಆಗಿಲ್ಲ. ಈ ಬಾರಿಯಾದರೂ ಚರ್ಚೆ ಆಗುತ್ತದಾ ನೋಡಬೇಕು ಎಂದರು.