- ಒಂದು ಜಿಲ್ಲೆಗೆ ಸೀಮಿತವಾಗಿಲ್ಲ, ಎರಡು ಮೂರು ಜಿಲ್ಲೆಗೆ ಸೇರಿದೆ
- ಸಿ.ಐ.ಡಿಗೆ ಪ್ರಕರಣ ವಹಿಸುವ ಬಗ್ಗೆ ಸಿದ್ದರಾಮಯ್ಯ ಜೊತೆ ಚರ್ಚೆ
ಬೆಂಗಳೂರಿನ ಬಯ್ಯಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಭ್ರೂಣ ಹತ್ಯೆಯ ಬಗ್ಗೆ ದಾಖಲಾಗಿರುವ ಪ್ರಕರಣ ತನಿಖೆ ಹಂತದಲ್ಲಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, “ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿಲ್ಲ. ಎರಡು ಮೂರು ಜಿಲ್ಲೆಗೆ ಸೇರಿದೆ. ಸ್ಕ್ಯಾನಿಂಗ್ ಕೆಲಸ ನಡೆದ ಸ್ಥಳಗಳಲ್ಲಿ ಯಾವುದೇ ರೀತಿಯ ಸ್ಕ್ಯಾನಿಂಗ್ ಉಪಯೋಗಿಸುವ ವಸ್ತುಗಳು ದೊರಕಿರುವುದಿಲ್ಲ. ಈ ಹಿನ್ನಲೆಯಲ್ಲಿ ಸಿಐಡಿಗೆ ಪ್ರಕರಣ ವಹಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು” ಎಂದರು.
“ಭ್ರೂಣ ಹತ್ಯೆ ತಡೆಗಟ್ಟಲು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಂದಾಯ, ಪೊಲೀಸ್, ಮಹಿಳಾ, ಆರೋಗ್ಯ ಇಲಾಖೆ ಸದಸ್ಯರನ್ನೊಳಗೊಂಡ ತಂಡ ರಚಿಸಲಾಗಿದೆ. ಈ ತಂಡಗಳು ನಿರಂತರವಾಗಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು” ಎಂದು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗುತ್ತಿಗೆದಾರ ಅಂಬಿಕಾಪತಿ ಸಾವು | ಕೆಂಪಣ್ಣ ಹೇಳಿಕೆ ಸರ್ಕಾರ ಗಂಭೀರವಾಗಿ ಪರಿಗಣಿಸಲಿ: ಯತ್ನಾಳ ಆಗ್ರಹ
“ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಡಯಗ್ನೋಸ್ಟಿಕ್ ಸೆಂಟರ್, ಲ್ಯಾಬ್ ಗಳನ್ನು ಪರಿಶೀಲಿಸಬೇಕು. ಅನಧಿಕೃತ ಲ್ಯಾಬ್, ಪರವಾನಗಿ ಇಲ್ಲದ ವೈದ್ಯರು ಕ್ಲಿನಿಕ್ ನಡೆಸುತ್ತಿದ್ದಲ್ಲಿ ಕ್ರಮ ಕೈಗೊಂಡು ವರದಿ ನೀಡಬೇಕು” ಎಂದು ಅಧಿಕಾರಿಗಳಿಗೆ ತಿಳಿಸಿದರು.
“ಯಾವುದಾರರೂ ಅಪರಿಚಿತ ವ್ಯಕ್ತಿ, ವಾಹನದ ಓಡಾಟ ಕಂಡುಬಂದಲ್ಲಿ ನಿಗಾ ವಹಿಸಿ, ತನಿಖೆ ನಡೆಸಿ ಇದು ನಿರಂತರವಾಗಿ ನಡೆಯಬೇಕು” ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಮಧು ಜಿ ಮಾದೇಗೌಡ, ದಿನೇಶ್ ಗೂಳೀಗೌಡ, ಮಂಡ್ಯ ಶಾಸಕ ರವಿಕುಮಾರ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್ ಎಲ್ ನಾಗರಾಜು, ಡಿಎಚ್‌ಒ ಡಾ.ಮೋಹನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.