- ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ: ಸಿಎಂ
- ಮೊದಲನೇ ಕಂತಿನಲ್ಲಿ 2 ಸಾವಿರ ವರೆಗೆ ಪರಿಹಾರ ಬಿಡುಗಡೆ
ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಬರುವವರೆಗೂ ಕಾಯಲು ಸಾಧ್ಯವಿಲ್ಲ ಎನ್ನುವ ಕಾರಣದಿಂದ ರಾಜ್ಯ ಸರ್ಕಾರ ಮೊದಲ ಕಂತನ್ನು ಬಿಡುಗಡೆ ಮಾಡಿದ್ದು, ಅರ್ಹ ರೈತರಿಗೆ ತಲಾ 2000 ರೂ.ವರೆಗೆ ಬೆಳೆ ಪರಿಹಾರ ಹಣ ನೀಡಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ತುರ್ತು ಪತ್ರಿಕಾಗೋಷ್ಠಿ ಕರೆದು ಮಾತನಾಡಿ, ಮೊದಲನೇ ಕಂತಿನಲ್ಲಿ 2 ಸಾವಿರ ರೂ. ವರೆಗೆ ಬೆಳೆ ಪರಿಹಾರ ಬಿಡುಗಡೆಯನ್ನು ಘೋಷಿಸಿದರು.
“ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ಪರಿಹಾರ ಕೊಡಲು ಇನ್ನೂ ಪ್ರಾಥಮಿಕ ಸಭೆಯನ್ನೇ ನಡೆಸದ ಹಿನ್ನೆಲೆಯಲ್ಲಿ ರಾಜ್ಯದಿಂದ ತುರ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರಕ್ಕೆ ಬರೆದ ಪತ್ರಗಳಿಗೂ ಪ್ರತಿಕ್ರಿಯೆ ಇಲ್ಲ. ರಾಜ್ಯದಿಂದ ಮೂವರು ಸಚಿವರು ದೆಹಲಿಗೆ ಹೋದರೂ ಸಕಾರಾತ್ಮಕ ಪ್ರತಿಕ್ರಿಯೆ ಕೇಂದ್ರದಿಂದ ಸಿಕ್ಕಿಲ್ಲ” ಎಂದರು.
“ಉದ್ಯೋಗ ಖಾತರಿ ಯೋಜನೆಯಡಿ 150 ಮಾನವ ದಿನ ಉದ್ಯೋಗ ಕೊಡಲು ಅನುಮತಿ ಕೋರಲಾಗಿತ್ತು. ಕೇಂದ್ರ ಇನ್ನೂ ಅನುಮತಿ ನೀಡಿಲ್ಲ. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ಮೂರು ಹಂತದಲ್ಲಿ ಘೋಷಿಸಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. 18171.44 ಕೋಟಿ ಪರಿಹಾರದ ಆರ್ಥಿಕ ನೆರವು ನೀಡಲು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ” ಎಂದು ವಿವರಿಸಿದರು.
“ಕೇಂದ್ರ ನಮ್ಮ ತೆರಿಗೆ ಹಣದ ಪಾಲನ್ನು ನಮಗೆ ವಾಪಸ್ ಕೊಟ್ಟರೂ ಸಾಕು. ಕೇಂದ್ರದ ತಂಡ 4/10 ರಿಂದ 9/10 ರ ವರೆಗೆ ರಾಜ್ಯ ಪ್ರವಾಸ ಮಾಡಿ ಬರ ಸಮೀಕ್ಷೆ ನಡೆಸಿ, ವರದಿ ನೀಡಿದೆ. ನಾವೆಲ್ಲಾ ಕೇಂದ್ರ ತಂಡವನ್ನು ಭೇಟಿ ಮಾಡಿ ಚರ್ಚಿಸಿ ಬರದ ಸ್ಥಿತಿ ವಿವರಿಸಿದ್ದೇವೆ. ದೇಶದಲ್ಲಿ 12 ರಾಜ್ಯಗಳಲ್ಲಿ ಬರಗಾಲದ ಸ್ಥಿತಿ ಇದೆ. 4,663 ಕೋಟಿ ಬೆಳೆ ನಷ್ಟ ಪರಿಹಾರ ಕೇಂದ್ರಕ್ಕೆ ಕೇಳಿದ್ದೆವು. ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಇವತ್ತಿನವರೆಗೂ ಕೇಂದ್ರ ಸಭೆಯನ್ನೇ ನಡೆಸಿಲ್ಲ. ಸಮಯ ಕೇಳಿದರೂ ಭೇಟಿಗೆ ಅವಕಾಶ ಕೊಟ್ಟಿಲ್ಲ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉತ್ತರಕಾಶಿ ಸುರಂಗ ಕುಸಿತದಲ್ಲಿವೆ ಹಿಂದು-ಮುಸ್ಲಿಮ್ ಏಕತೆ ಪಾಠಗಳು
“ಫೈನಾನ್ಸ್ ಮಿನಿಸ್ಟರ್ ಅವರನ್ನು ನಮ್ಮ ಸಚಿವರು ಭೇಟಿ ಮಾಡಿದ್ದಾರೆ. ರಾಜ್ಯದ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಕೇಂದ್ರ ಕೃಷಿ ಮತ್ತು ಗೃಹ ಸಚಿವರನ್ನು ನಾನೇ ಭೇಟಿ ಮಾಡ್ತೀನಿ, ಸಮಯ ಕೊಡಿ ಎಂದು ಪತ್ರ ಬರೆದಿದ್ದೀನಿ. ಇವತ್ತಿನವರೆಗೂ ಸಮಯ ಕೊಟ್ಟಿಲ್ಲ” ಎಂದರು.
“ಬಿತ್ತನೆ ವೈಫಲ್ಯ ಮತ್ತು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರ ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ನಮ್ಮ ಸರ್ಕಾರ ಬಿಡುಗಡೆ ಮಾಡಿದೆ. ಕುಡಿಯುವ ನೀರು, ಮೇವಿಗೆ 327 ಕೋಟಿ ರೂ. ಬಿಡುಗಡೆ, 780 ಕೋಟಿ ಡಿಸಿಗಳ ಪಿಡಿ ಖಾತೆಯಲ್ಲಿದೆ. ಅವರೂ ತಹಶೀಲ್ದಾರ್‌ಗಳಿಗೆ ಬಿಡುಗಡೆ ಮಾಡಿದ್ದಾರೆ” ಎಂದು ತಿಳಿಸಿದರು.
“ಯಾವ ತಾಲ್ಲೂಕುಗಳಲ್ಲೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲದಂತೆ ನಿರ್ವಹಿಸಿದ್ದೇವೆ. ಹಲವು ತಾಲ್ಲೂಕುಗಳ 60 ಹಳ್ಳಿಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿದ್ದೇವೆ. ಹೊರ ರಾಜ್ಯಕ್ಕೆ ಮೇವು ಹೋಗದಂತೆ ತಡೆದಿದ್ದೇವೆ. ಮೇವಿನ ಬೀಜ ವಿತರಣೆ ಮಾಡಿದ್ದೇವೆ” ಎಂದರು.