ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್ ಸಮ್ಮಿಟ್ನಲ್ಲಿ ಇನ್ಫೋಸಿಸ್ ಸ್ಥಾಪಕಾಧ್ಯಕ್ಷ ನಾರಾಯಣ ಮೂರ್ತಿ ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡಿದೆ.
‘ಸರ್ಕಾರ ಜನರಿಗೆ ಉಚಿತವಾಗಿ ಸೇವೆಯನ್ನು ಒದಗಿಸಬಾರದು’ ಎಂದು ನಾರಾಯಣ ಮೂರ್ತಿ ನೀಡಿರುವ ಹೇಳಿಕೆಯ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, “ಉಚಿತವಾಗಿ ನೀಡುವ ಕೊಡುಗೆಗಳು ಜನರಲ್ಲಿ ಖರೀದಿ ಮಾಡುವ ಶಕ್ತಿ ಹೆಚ್ಚಿಸುತ್ತದೆ. ಇದೆಲ್ಲವೂ ಕೂಡ ಮತ್ತೆ ಸರ್ಕಾರಕ್ಕೆ ವಾಪಸ್ ಬರುತ್ತದೆ. ನಮ್ಮ ಗ್ಯಾರಂಟಿಯು ‘ಯುನಿವರ್ಸಲ್ ಬೇಸಿಕ್ ಇನ್ಕಮ್’ನ ಪ್ರಯೋಗ ಎಂದು ತಿಳಿಸಿದ್ದಾರೆ.
“ನಮ್ಮ ಗ್ಯಾರಂಟಿಗಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎನ್ನುವುದಕ್ಕೆ ಒಂದು ವರ್ಷದಲ್ಲಿ ತಿಳಿದು ಬರಬಹುದು. ಕಾದು ನೋಡಬೇಕಿದೆ. ನಮ್ಮ ಸರ್ಕಾರದಲ್ಲಿ ಆಚಾರ-ವಿಚಾರ ಇದೆ. ಜೊತೆಗೆ ಪ್ರಚಾರದ ಕೊರತೆಯೂ ಇದೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಿನ್ನೆ(ನ.29) ಆರಂಭಗೊಂಡ ಸಮ್ಮಿಟ್ನ ಸಂವಾದದ ವೇಳೆ, ‘ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳಿಗೆ ಖಂಡಿತಾ ನನ್ನ ವಿರೋಧವಿಲ್ಲ. ಆದರೆ ಅದನ್ನು ಉಚಿತವಾಗಿ ಪಡೆದುಕೊಂಡವರು ಸಮಾಜಕ್ಕೆ ಉಪಕಾರವಾಗುವಂತೆ ಕೆಲಸ ಮಾಡಿ ಹಿಂದಿರುಗಿಸಬೇಕು. ಆಗ ಉಚಿತ ಉಡುಗೊರೆಗಳಿಗೆ ಅರ್ಥ ಸಿಗುತ್ತದೆ’ ಎನ್ನುವ ಮೂಲಕ ರಾಜ್ಯ ಸರ್ಕಾರದ ಗ್ಯಾರಂಟಿಗಳ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ‘ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ಮಾತ್ರವೇ ಏಕೈಕ ಪರಿಹಾರ’ ಎಂದು ಹೇಳಿಕೆ ನೀಡಿದ್ದರು.
‘ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ಮಾತ್ರವೇ ಏಕೈಕ ಪರಿಹಾರ’ ಹೇಳಿಕೆಯನ್ನು ಉಲ್ಲೇಖಿಸಿದ ಸಚಿವ ಖರ್ಗೆ, ‘ಬಂಡವಾಳಶಾಹಿಗಳು ಎಷ್ಟು ಜನ ವಿಶಾಲ ಮನಸ್ಸಿನಿಂದ ಯೋಚಿಸುತ್ತಾರೆ? ಎಲ್ಲರೂ ವಿಶಾಲ ಮನಸ್ಸಿನಿಂದ ಯೋಚನೆ ಮಾಡುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ’ ಎಂದು ಟಾಂಗ್ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಭಾರತದ ಅಭಿವೃದ್ಧಿಗೆ ಬಂಡವಾಳಶಾಹಿ ಮಾತ್ರವೇ ಏಕೈಕ ಪರಿಹಾರ: ಇಸ್ಫೋಸಿಸ್ ನಾರಾಯಣ ಮೂರ್ತಿ
‘ನಾರಾಯಣ ಮೂರ್ತಿಯವರು ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ. ಬಂಡವಾಳ ಶಾಹಿಗಳು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇಟ್ಟುಕೊಳ್ಳಬೇಕು ಅಂತ ಹೇಳಿದ್ದಾರೆ. ಆ ರೀತಿ ಎಷ್ಟು ಜನ ಮಾಡುತ್ತಾರೆ ಹೇಳಿ’ ಎಂದು ಮರು ಪ್ರಶ್ನೆ ಹಾಕಿದ್ದಾರೆ.
In today’s enlightening Fireside Chat featuring Shri N. R. @Infosys_nmurthy, co-founder of @Infosys, highlighted Bengaluru’s appeal, stating, “Bengaluru has thrived with a favorable climate, attracting a diverse population and hosting renowned institutions, fostering a vibrant… pic.twitter.com/8ZhUrMLZ20
— BengaluruTechSummit (@blrtechsummit) November 29, 2023
‘ನಮ್ಮ ದೇಶದಲ್ಲಿ ಸಾಕಷ್ಟು ಬಂಡವಾಳಶಾಹಿಗಳು ಇದ್ದಾರೆ. ಎಷ್ಟು ಕಂಪನಿಗಳು ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇಟ್ಟುಕೊಂಡಿದ್ದಾರೆ. ಕಳೆದ ಒಂದು ದಶಕದಿಂದ ಜನ ಬಡತನ ರೇಖೆಗಿಂತ ಎಷ್ಟು ಕೆಳಗೆ ಹೋಗಿದ್ದಾರೆ ಅನ್ನುವ ಅಂಕಿ-ಅಂಶಗಳನ್ನು ಕೂಡ ನಾವು ಗಮನಿಸಬೇಕು. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ ಎಂದರು.
ಇದನ್ನು ಓದಿದ್ದೀರಾ? ಟೆಕ್ ಸಮ್ಮಿಟ್ | ಕೌಶಲ್ಯಾಧಾರಿತ ಪಠ್ಯಕ್ರಮ ಇಂದಿನ ಅಗತ್ಯ: ಸಚಿವ ಎಂ.ಸಿ. ಸುಧಾಕರ್
‘ನಾರಾಯಣ ಮೂರ್ತಿಯವರು ಇನ್ಫೋಸಿಸ್ ಫೌಂಡೇಶನ್ ಮೂಲಕ ಸಾಕಷ್ಟು ಕೆಲಸ ಮಾಡಿದ್ದಾರೆ, ಈಗಲೂ ಮಾಡುತ್ತಿದ್ದಾರೆ. ನೀವೇನು ಸೇವೆ ಕೊಡ್ತಾ ಇದ್ದೀರಾ ಅದರ ಜೊತೆಗೆ ನಾಗರಿಕ ಜವಾಬ್ದಾರಿ ಕೂಡ ಇರಲಿ ಅಂತ ಹೇಳಿದ್ದಾರೆ. ಮಧ್ಯಾಹ್ನದ ಬಿಸಿ ಊಟ ಶುರು ಮಾಡಿದ ಉದ್ದೇಶ ಏನಿತ್ತು? ಮಕ್ಕಳು ಹೆಚ್ಚು ಶಾಲೆಗೆ ಬರಬೇಕು ಎಂಬುದು. ಗ್ರಾಮೀಣ ಭಾಗದಲ್ಲಿ ಹೆಚ್ಚು ಮಕ್ಕಳು ಶಾಲೆಗೆ ಬರೋದಕ್ಕೆ ಶುರು ಮಾಡಿದರು. ಸ್ಕಾಲರ್ಶಿಪ್ ಕೊಡುವುದು ಶೈಕ್ಷಣಿಕವಾಗಿ ಸಹಾಯ ಆಯ್ತು. ಅಧ್ಯಯನದ ಮೇಲೆಯೇ ‘ಯುನಿವರ್ಸಲ್ ಬೇಸಿಕ್ ಇನ್ಕಮ್’ ಎಂಬ ವಿಚಾರ ಮುನ್ನೆಲೆಗೆ ಬಂದಿದ್ದು’ ಎಂದರು.