ಜಾತಿ ಗಣತಿ | ಬ್ರಿಟಿಷರ ಕಾಲದ ಅಂಕಿ- ಅಂಶಗಳನ್ನೇ ಎಷ್ಟು ದಿನ ಅವಲಂಬಿಸಬೇಕು?

Date:

Advertisements

ಬ್ರಿಟಿಷರು ಮಾಡಿದ ಜಾತಿ ಗಣತಿಯನ್ನೇ ಪರಿಶಿಷ್ಟರಿಗೆ ಮತ್ತು ಒಬಿಸಿಗಳಿಗೆ ಮೀಸಲಾತಿ ನೀಡುವಾಗ ಭಾರತ ಸರ್ಕಾರ ಅವಲಂಬಿಸಬೇಕಾಗಿತ್ತು…

ಭರತ ಖಂಡದ ಬದುಕು ಜಾತಿಗಳಿಂದ ತುಂಬಿದೆ. ಇಲ್ಲಿ ಪ್ರತಿಯೊಬ್ಬರೂ ಶೇಕಡಾ 90ರಷ್ಟು ಜೀವನ ತಮ್ಮ ಜಾತಿಯವರ ನಡುವೆಯೇ ಕಳೆದು ಬಿಡುತ್ತಾರೆ. ಕೇವಲ ಜೀವನ ಮಾತ್ರವಲ್ಲ ಪ್ರತಿ ಜಾತಿಗಳ ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಬದುಕನ್ನು ಜಾತಿಗ್ರಸ್ತ ಸಮಾಜ ನಿಯಂತ್ರಿಸುತ್ತದೆ. ಇಂತಹ ಜಾತಿ ವ್ಯವಸ್ಥೆಯನ್ನು ಬ್ರಿಟಿಷರು ತಮ್ಮ 200 ವರ್ಷಗಳ ಆಡಳಿತದಲ್ಲಿ ಚೆನ್ನಾಗಿ ಅರ್ಥ ಮಾಡಿಕೊಂಡು ಜಾತಿಗಳ ಅಧ್ಯಯನಕ್ಕೆ ತೊಡಗಿದರು. ತಮ್ಮ ಆಡಳಿತಕ್ಕೆ ಅನುಕೂಲವಾಗುತ್ತದೆಂಬ ದೂರದೃಷ್ಟಿ ಬ್ರಿಟಿಷರಿಗಿದ್ದರೂ, ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಸ್ವಲ್ಪ ಮಟ್ಟಿಗೆ ಕದಲಿಸಬಹುದೆಂಬ ತಿಳುವಳಿಕೆಯನ್ನು ಅವರು ಹೊಂದಿದ್ದರು. 1881ರಿಂದ 1931ರವರೆಗೆ ನಿರಂತರವಾಗಿ ಬ್ರಿಟಿಷರು ಜಾತಿ ಗಣತಿಯ ಅಂಕಿ ಅಂಶಗಳನ್ನು ಕಲೆ ಹಾಕುತ್ತಲೇ ಇದ್ದರು. 1931ರಲ್ಲಿ ಪ್ರಕಟಪಡಿಸಿದ ಜಾತಿ ಗಣತಿ ಪ್ರಮುಖವಾದ ಅಂಕಿ ಅಂಶವಾಗಿದೆ.

ಸ್ವಾತಂತ್ರ್ಯ ಭಾರತದಲ್ಲಿ ಜಾತಿ ಗಣತಿಯನ್ನು ಮಾಡುವ ಧೈರ್ಯವನ್ನು ಯಾವುದೇ ಸರ್ಕಾರಗಳು ಮಾಡಲಿಲ್ಲ. ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕೊಡಬೇಕಾದ ಶೇಕಡಾ 18ರಷ್ಟು ಮೀಸಲಾತಿಯನ್ನು 1931ರಲ್ಲಿ ನಡೆದ ಜಾತಿ ಗಣತಿಯನ್ನು ಆಧಾರವಾಗಿಟ್ಟುಕೊಂಡೇ ಕೊಡಲಾಯಿತು. 1991ರಲ್ಲಿ ಒಬಿಸಿಗಳಿಗೆ ಮೀಸಲಾತಿ ಕೊಡುವ ಮಂಡಲ್ ವರದಿಯ ಶಿಪಾರಸ್ಸುಗಳನ್ನು ಜಾರಿ ಮಾಡಲು 1931ರ ಜಾತಿ ಗಣತಿಯ ಅಂಕಿ ಅಂಶಗಳನ್ನೇ ಅವಲಂಬಿಸಲಾಯಿತು. ಅಂದು ಕೂಡ ಭಾರತದ ಕೇಂದ್ರ ಸರ್ಕಾರ ಸ್ವತಂತ್ರವಾಗಿ ಜಾತಿ ಗಣತಿ ಮಾಡಲೇ ಇಲ್ಲ.

Advertisements

ಪ್ರತಿ ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ, ಪಂಗಡಗಳು, ಹಿಂದುಳಿದ ಜಾತಿಗಳಿಗೆ ಮೀಸಲಾತಿ ಹೆಚ್ಚಿಸಲು ಪ್ರಯತ್ನಿಸಿದಾಗಲೆಲ್ಲಾ ನ್ಯಾಯಾಲಯಗಳು ಜಾತಿಗಳ ಅಂಕಿ ಅಂಶಗಳನ್ನು ಕೇಳಿ, ಹೆಚ್ಚಿಸಿರುವ ಮೀಸಲಾತಿಯನ್ನು ರದ್ದುಪಡಿಸುತ್ತಿವೆ. ಹೊಸದಾಗಿ ಜಾತಿ ಗಣತಿ ಮಾಡುವಂತೆ ಸಲಹೆಯನ್ನು ಕೂಡ ರಾಜ್ಯ ಸರ್ಕಾರಗಳಿಗೆ ನೀಡಿವೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾತಿ ಗಣತಿ ನಡೆಸಲು ಹಿಂದೇಟು ಹಾಕುತ್ತಿವೆ. ಪ್ರಬಲ ಜಾತಿಗಳು ತಮ್ಮ ಜನಸಂಖ್ಯೆ ಹೆಚ್ಚಿರುವುದೆಂದು ಹೇಳುತ್ತಾ ಆಡಳಿತದಲ್ಲಿ ಹೆಚ್ಚು ಪಾಲನ್ನು ಪಡೆಯುತ್ತಿವೆ. ವಾಸ್ತವದಲ್ಲಿ ಅವರ ಜನಸಂಖ್ಯೆ ಎಷ್ಟಿದೆಯೆಂದು ಯಾರಿಗೂ ಸರಿಯಾಗಿ ತಿಳಿದಿಲ್ಲ.

ಈ ಎಲ್ಲಾ ಕಾರಣಗಳಿಗೆ ಸ್ವಾತಂತ್ರ್ಯ ಭಾರತದಲ್ಲಿ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರ ಪ್ರಥಮ ಜಾತಿ ಗಣತಿಯನ್ನು 2015ರಲ್ಲಿ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ಅವರ ಜವಾಬ್ದಾರಿಯಲ್ಲಿ ನಡೆಸಿತು. ಇದೊಂದು ಅಭೂತಪೂರ್ವ, ಐತಿಹಾಸಿಕ ನಡೆಯಾಗಿತ್ತು. ಭಾರತದ ಯಾವೊಂದು ರಾಜ್ಯ ಸರ್ಕಾರಗಳ ಮಖ್ಯಮಂತ್ರಿಗಳು ತೋರಿಸದ ಸಾಹಸವನ್ನು ಸಿದ್ದರಾಮಯ್ಯ ತೋರಿಸಿದರು. ಆದರೆ ಪ್ರಬಲ ಜಾತಿಗಳ ಒತ್ತಡಗಳಿಂದ 2015ರ ಕರ್ನಾಟಕದ ಜಾತಿ ಗಣತಿಯ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯನ್ನು ಸಿದ್ದರಾಮಯ್ಯನವರು ಬಿಡುಗಡೆ ಮಾಡಲಾಗಲಿಲ್ಲ. 2018ರಲ್ಲಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡರು. ನಂತರದ ಐದು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಮತ್ತು ಆಪರೇಷನ್‌ ಕಮಲದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಜಾತಿ ಗಣತಿ ವರದಿಯನ್ನು ಕಸದ ಬುಟ್ಟಿಗೆ ಎಸೆದವು.

ಈಗ ಜಾತಿ ಗಣತಿ ವರದಿ ಮುನ್ನೆಲೆಗೆ ಬರಲು ಕಾರಣ 2023ರಲ್ಲಿ ಮತ್ತೆ ಅಧಿಕಾರ ಹಿಡಿದ ಕಾಂಗ್ರೆಸ್, ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಇದಕ್ಕಿಂತಲೂ ಮುಖ್ಯವಾಗಿದ್ದು- ಬಿಹಾರದ ಜೆಡಿಯು ಮತ್ತು ಆರ್‌‌ಜೆಡಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾದ ನಿತೀಶ್‌‌ಕುಮಾರ್‌ ಅವರು ಬಿಹಾರ ರಾಜ್ಯದ ಜಾತಿ ಗಣತಿಯನ್ನು ಮಾಡಿ ಬಿಡುಗಡೆಯನ್ನು ಕೂಡ ಮಾಡಿದರು. ಇದು ಸಿದ್ದರಾಮಯ್ಯ ಸರ್ಕಾರದ ಮೇಲೆ ತೀವ್ರವಾದ ಪರಿಣಾಮ ಬೀರುತ್ತಿದೆ. ಬಿಹಾರಕ್ಕಿಂತಲೂ ಮುಂಚಿತವಾಗಿ ಜಾತಿ ಗಣತಿ ನಡೆಸಿರುವ ಕರ್ನಾಟಕ ರಾಜ್ಯ ಸರ್ಕಾರ ಏಕೆ ವರದಿಯನ್ನು ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿದೆಯೆಂಬ ಚರ್ಚೆಗೆ ಕಾರಣವಾಗಿದೆ.

ಬಿಹಾರ ರಾಜ್ಯ ಪ್ರಕಟಿಸಿರುವ ಜಾತಿಗಣತಿಗೂ ಕರ್ನಾಟಕ ಸರ್ಕಾರ  ಮಾಡಿರುವ ಜಾತಿ ಗಣತಿಗೂ ಬಹಳಷ್ಟು ವ್ಯತ್ಯಾಸವಿದೆ. ಕರ್ನಾಟಕದ ಜಾತಿ ಗಣತಿ ಕೇವಲ ಜಾತಿಗಳ ಜನಸಂಖ್ಯೆಗಳ ಅಂಕಿ ಅಂಶವನ್ನು ಮಾತ್ರ ಕಲೆ ಹಾಕಿಲ್ಲ. ಪ್ರತಿ ಜಾತಿ ಮತ್ತು ಅದರ ಉಪ ಜಾತಿಗಳ ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿಗಳ ಅಂಕಿ ಅಂಶಗಳನ್ನೂ ಸಂಗ್ರಹಿಸಿದೆ. ಆದರೆ ಬಿಹಾರ ಪ್ರಕಟಿಸಿರುವುದು ಜಾತಿಗಳ ಜನಸಂಖ್ಯೆಯನ್ನು ಮಾತ್ರ. ಕರ್ನಾಟಕದ ಜಾತಿ ಗಣತಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ಹೆಸರಿನಲ್ಲಿ ನಡೆದಿದೆ ಮತ್ತು ಹೆಚ್ಚು ವೈಜ್ಞಾನಿಕವಾಗಿದೆ. ಇಲ್ಲಿ ಯಾವ ಜಾತಿಗಳು ಈ ಸಮೀಕ್ಷೆಯನ್ನು ವಿರೋಧಿಸುತ್ತಿವೆಯೆಂದು ನಮ್ಮೆಲ್ಲರಿಗೂ ಗೊತ್ತಿದೆ. ಆ ಜಾತಿಗಳ ಹೆಸರನ್ನು ಮತ್ತೆ ತೆಗೆದುಕೊಳ್ಳುವುದು ಬೇಡ. ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ಜಾತಿಗಳೊಳಗೆ ತೀವ್ರ ತರವಾದ ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿಗಳಲ್ಲಿ ಏರುಪೇರುಗಳು ಕಂಡುಬರುತ್ತಿರುವುದರಿಂದ ಮೀಸಲಾತಿಯನ್ನು ಹೆಚ್ಚಿಸಿ ಅವರ ಪ್ರಗತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿರುವ ಪರಿಶಿಷ್ಟರೊಳಗಿನ ಅಸ್ಪೃಶ್ಯ ಜಾತಿಗಳಿಗೆ ಮತ್ತು ಅತಿ-ಹಿಂದುಳಿದ ಜಾತಿಗಳಿಗೆ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಕೊಡಲು ಸರ್ಕಾರಕ್ಕೆ ಜಾತಿಗಳ ಅಂಕಿಅಂಶಗಳು ಬೇಕಾಗಿದೆ. ಮತ್ತೆ ಕೋರ್ಟ್ ಕೂಡ ಜನಸಂಖ್ಯೆಯ ಅಂಕಿ ಅಂಶಗಳನ್ನು ಕೇಳುತ್ತಿದೆ. ಹಾಗಾಗಿ ಜಾತಿ ಗಣತಿ ಬಹಳ ಮುಖ್ಯವಾಗಿದೆ.

ಪ್ರತಿ ಹತ್ತು ವರ್ಷಗಳಿಗೊಮ್ಮೆ ರಾಜ್ಯ ಸರ್ಕಾರಗಳು ಜಾತಿ ಗಣತಿ ನಡೆಸಿ, ಕರಾರುವಕ್ಕಾದ ಜನಸಂಖ್ಯೆಯ ಅಂಕಿ ಅಂಶಗಳನ್ನು ಕ್ರೂಢೀಕರಿಸಬೇಕಿದೆ. ಇದರ ಆಧಾರದ ಮೇಲೆ ಮೀಸಲಾತಿಯನ್ನು ಪುನರ್ ವಿಂಗಡಿಸುವ ಇಲ್ಲ ಹೆಚ್ಚಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ. ಇದನ್ನು ಮಾಡದೆ ಬ್ರಿಟಿಷರು 1931ರಲ್ಲಿ ಮಾಡಿಕೊಟ್ಟ ಜಾತಿ ಗಣತಿಯನ್ನು ಅವಲಂಬಿಸಿ ಇಂದಿಗೂ ಮೀಸಲಾತಿಯನ್ನು ಜಾತಿಗಳ ನಡುವೆ ವಿಂಗಡಿಸಿರುವುದು ಅವೈಜ್ಞಾನಿಕವಾಗಿದೆ. ಈ ಕೂಡಲೇ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಕಾಂತರಾಜುರವರ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ಬಹಿರಂಗ ಪಡಿಸುವಂತೆ ನಾವೆಲ್ಲರೂ ಒತ್ತಾಯಿಸೋಣ.

kantaraju k gollarahatti
ಕಾಂತರಾಜು ಕೆ ಗೊಲ್ಲರಹಟ್ಟಿ
+ posts

ಇಂಗ್ಲಿಷ್ ಉಪನ್ಯಾಸಕರು, ಬೆಂಗಳೂರು

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕಾಂತರಾಜು ಕೆ ಗೊಲ್ಲರಹಟ್ಟಿ
ಕಾಂತರಾಜು ಕೆ ಗೊಲ್ಲರಹಟ್ಟಿ
ಇಂಗ್ಲಿಷ್ ಉಪನ್ಯಾಸಕರು, ಬೆಂಗಳೂರು

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X