ಮಾಜಿ ದೇವದಾಸಿ ಮಹಿಳೆಯರ ಮಾಸಾಶನ ಮತ್ತು ಸಮೀಕ್ಷೆಯಿಂದ ಬಿಟ್ಟು ಹೋದ ದೇವದಾಸಿಯರನ್ನು ಪಟ್ಟಿಗೆ ಸೇರಿಸುವುದಾಗಿ ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದಿಂದ ಭರವಸೆಯ ಪತ್ರ ನೀಡಿದ್ದು, ರಾಯಚೂರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ್ದಾರೆ.
ದೇವದಾಸಿ ಮಹಿಳೆಯರಿಗೆ ಬಾಕಿ ಪಿಂಚಣಿ ನೀಡುವುದು ಹಾಗೂ ಮಕ್ಕಳಿಗೆ ಶಿಷ್ಯವೇತನ ನೀಡುವುದು ಸೇರಿದಂತೆ ಹಲವು ಬೇಡಿಕೆಗೆ ಆಗ್ರಹಿಸಿ ರಾಜ್ಯ ಮಹಿಳಾ ಒಕ್ಕೂಟ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಸ್ಪಂದಿಸಿದ್ದು, ಕರ್ನಾಟಕ ಮಹಿಳಾ ಅಭಿವೃದ್ಧಿ ನಿಗಮದಿಂದ ನೀಡಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
“ಮಾಜಿ ದೇವದಾಸಿ ಮಹಿಳೆಯರ ಮಾಸಾಶನವನ್ನು ಪ್ರತಿ ಮಾಹೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಇಟಿ ಮೂಲಕ ಪಾವತಿಸುತ್ತಿದ್ದು, ಸೆಪ್ಟೆಂಬರ್ ಮತ್ತು ಅಕ್ಟೋಬರ್ ಮಾಹೆಯ ಮಾಸಾಶನವನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯಕ್ಕೆ ಬಿಲ್ಲನ್ನು ಸೃಜಿಸಿ ಖಜಾನೆ-2ಕ್ಕೆ ಪಾವತಿಗಾಗಿ ಕಳುಹಿಸಿದ್ದು, ಖಜಾನೆ-2ರಲ್ಲಿ ತಾಂತ್ರಿಕ ತೊಂದರೆಯಿಂದಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಮಾಸಾಶನ ಜಮೆ ಆಗಿಲ್ಲದಿರುವುದು ಕಂಡುಬಂದಿದೆ. ಸಮಸ್ಯೆಯನ್ನು ಪರಿಹರಿಸಲು ಖಜಾನೆ -2ರವರಿಗೆ ತಿಳಿಸಲಾಗಿದ್ದು, ಎರಡ್ಮೂರು ದಿನಗಳಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
“ಸಮೀಕ್ಷಾ ಪಟ್ಟಿಯಿಂದ ಹೊರಗುಳಿದ ಮಾಜಿ ದೇವದಾಸಿ ಮಹಿಳೆಯರಿಗೆ ಮರು ಸಮೀಕ್ಷೆಯನ್ನು ನಡೆಸಲು ಸರ್ಕಾರಕ್ಕೆ ಏಕ ಕಡತವನ್ನು ಸಲ್ಲಿಸಿದ್ದು ಸರ್ಕಾರದಿಂದ ಅನುಮೋದನೆ ದೊರೆತ ನಂತರ ಮರು ಸಮೀಕ್ಷೆ ಕೈಗೊಂಡು ಅರ್ಹತಾ ಮಾನದಂಡಗಳಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ದೇವದಾಸಿ ಮಹಿಳೆಯರ ಮಕ್ಕಳಿಗೆ ವಸತಿ ನಿಲಯ, ಪರಿಶಿಷ್ಟ ಜಾತಿಯ ವಿದ್ಯಾರ್ಥಿ ವೇತನ ಹೊರತುಪಡಿಸಿ ಹೆಚ್ಚುವರಿಯಾಗಿ ವಿದ್ಯಾರ್ಥಿ ವೇತನ ನೀಡಬೇಕು ಹಾಗೂ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಸಬ್ಸಿಡಿ ಸಾಲ ನೀಡಬೇಕೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದು, “ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಾಜಿ ದೇವದಾಸಿ ಮಹಿಳೆಯರ ಜೀವನೋಪಾಯಕ್ಕಾಗಿ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ದೇವದಾಸಿ ಪುನರ್ವಸತಿ ಯೋಜನೆಯಡಿ ಆದಾಯೋತ್ಪನ್ನಕರ ಚಟುವಟಿಕೆಯನ್ನು ಕೈಗೊಳ್ಳಲು ₹30,000 ಸಹಾಯಧನ ನೀಡಲಾಗುತ್ತಿದೆ” ಎಂದು ಉತ್ತರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಜ್ಯ ಮಹಿಳಾ ಒಕ್ಕೂಟದಿಂದ ಅನಿರ್ದಿಷ್ಟಾವಧಿ ಧರಣಿ; ಅಹವಾಲು ಆಲಿಸಿದ ಅಧಿಕಾರಿಗಳು
ಈ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು, “ಕೇವಲ ಆಶ್ವಾಸನೆಗಳ ಪತ್ರಗಳನ್ನು ನೀಡಿದರೆ ಸಾಲದು. ನಮ್ಮ ಬೇಡಿಕೆಗಳು ಸೂಕ್ತ ಕಾರ್ಯ ರೂಪಕ್ಕೆ ಬರಬೇಕು ಅಲ್ಲಿಯವರೆಗೆ ಧರಣಿ ನಿರಂತರವಾಗಿ ಮುಂದುವರೆಯುತ್ತದೆ” ಎಂದು ಪ್ರತಿಭಟನಾಕಾರರು ಪಟ್ಟುಹಿಡಿದಿದ್ದಾರೆ.