ಸಮಾಜ ಎದುರಿಸುತ್ತಿರುವ ಸಮಸ್ಯೆಗಳು, ಬೇಡಿಕೆ ಮತ್ತಿತರ ವಿಚಾರಗಳ ಬಗ್ಗೆ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಅಧಿವೇಶನದಲ್ಲಿ ನಿರ್ಣಯಗಳನ್ನು ಮಂಡಿಸಿ ರಾಜ್ಯ ಸರ್ಕಾರಕ್ಕೆ ಕೊಡಲಾಗುವುದು ಎಂದು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ದಾವಣಗೆರೆಯ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಡಿಸೆಂಬರ್ 23 ಮತ್ತು 24ರಂದು ನಡೆಯಲಿರುವ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನದ ಹಂದರ(ವೇದಿಕೆ) ಪೂಜೆ ನೆರವೇರಿಸಿ ಮಾತನಾಡಿದರು.
“ಡಿಸೆಂಬರ್ 23 ಮತ್ತು 24ರಂದು ನಡೆಯುವ ಮಹಾ ಅಧಿವೇಶನದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವರು. ಹತ್ತು ಲಕ್ಷದಷ್ಟು ಜನರನ್ನು ಸೇರಿಸಬಹುದಿತ್ತು. ಆದರೆ ನಾವೇ ಮಿತಿ ಹಾಕಿಕೊಂಡಿದ್ದೇವೆ. ಅಧಿವೇಶನಕ್ಕೆ ಬಂದವರಿಗೆ ಊಟ, ವಸತಿ ವ್ಯವಸ್ಥೆ ಮಾಡಲಾಗುವುದು” ಎಂದು ಹೇಳಿದರು.
“ಜಾತಿಗಣತಿ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುವುದಿಲ್ಲ. ಏಕೆಂದರೆ ವರದಿ ಏನಿದೆ ಎಂಬುದನ್ನು ನೋಡಿಯೇ ಚರ್ಚೆ ಮಾಡುತ್ತೇವೆ” ಎಂದರು.
“ದಾವಣಗೆರೆಯಲ್ಲಿ 1917ರ ನಂತರ ಎರಡನೇ ಬಾರಿಗೆ ಅಧಿವೇಶನ ನಡೆಯುತ್ತಿದೆ. ನೂರಾರು ಸಂಖ್ಯೆಯಲ್ಲಿ ನಾಡಿನ ವಿವಿಧ ಸ್ವಾಮೀಜಿಗಳು, ಮಠಾಧೀಶರು ಎಲ್ಲರೂ ಭಾಗವಹಿಸುವರು. ಭಾಲ್ಕಿಯಲ್ಲಿ ಭೀಮಣ್ಣ ಖಂಡ್ರೆಯವರ ಶತಮಾನೋತ್ಸವದಲ್ಲಿ ಭಾಗವಹಿಸಿ ಅಲ್ಲಿಯೇ ಅಧಿವೇಶನಕ್ಕೆ ಆಹ್ವಾನಿಸಲಾಗುವುದು” ಎಂದು ತಿಳಿಸಿದರು.
ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ, ಅಣಬೇರು ರಾಜಣ್ಣ, ಜಿಲ್ಲಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಬಿ ಸಿ ಉಮಾಪತಿ, ಕೆ ಜಿ ಶಿವಕುಮಾರ್, ಐನಳ್ಳಿ ಶುಭಮಂಗಳ ಸೇರಿದಂತೆ ಇತರರು ಇದ್ದರು.