ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರು ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಮಹಾ ಒಕ್ಕೂಟವು ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ಸುನಿಲ್ ಕುಮಾರ್ ಬಜಾಲ್, “ಸರ್ಕಾರದ ಎಲ್ಲ ಯೋಜನೆಗಳನ್ನು ಮನೆಮನೆಗೆ ತಲುಪಿಸುವ ಹಾಗೂ ಸರ್ಕಾರದ ಪರವಾಗಿ ಬಹಳ ನಿಷ್ಠೆಯಿಂದ ದುಡಿಯುವ ಗ್ರಾಮ ಪಂಚಾಯತಿ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು ಕಳೆದ 5 ವರ್ಷಗಳಿಂದ ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ಆದರೂ, ಸರ್ಕಾರ ಅವರ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸುತ್ತಿಲ್ಲ. ಗೌರವಧನದ ಹೆಸರಿನಲ್ಲಿ 5000, 2500 ರೂ. ನೀಡಿ ದುಡಿಯುವ ಜನತೆಗೆ ಅಗೌರವ ತೋರಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ವಿವಿಧ ರೀತಿಯ ಗ್ಯಾರಂಟಿಗಳನ್ನು ನೀಡುವ ರಾಜ್ಯ ಸರ್ಕಾರ, ದುಡಿಯುವ ಜನತೆಗೆ ಬದುಕುವ ಗ್ಯಾರಂಟಿಯನ್ನು ನೀಡದಿರುವುದು ವಿಪರ್ಯಾಸ. ಎಲ್ಲ ನಮೂನೆಯ ಕೆಲಸಗಳನ್ನು ಮಾಡಿಸುವ ಈ ಸರ್ಕಾರಗಳು ಯಾಕೆ ಇಂತಹ ನೌಕರರನ್ನು ಖಾಯಂಗೊಳಿಸುತ್ತಿಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಇವರ ಬೇಡಿಕೆಗಳನ್ನು ಈಡೇರಿಸಲು ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ,ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೆರಾವ್,ಮುತ್ತಿಗೆ ಚಳವಳಿಯಂತಹ ತೀವ್ರ ಹೋರಾಟಗಳನ್ನು ನಡೆಸಬೇಕಾದಿತು” ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಜಿಲ್ಲಾಧ್ಯಕ್ಷೆ ಸೌಮ್ಯ ಯಶವಂತ ಮಾತನಾಡಿ, “ಸರ್ಕಾರದ ಎಲ್ಲ ಕೆಲಸಗಳನ್ನು ಮಾಡಿಸುವ ಸರ್ಕಾರ ನಮ್ಮ ಹುದ್ದೆಗಳನ್ನು ಖಾಯಂಗೊಳಿಸಬೇಕು. ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಮುಖ್ಯ ಪುಸ್ತಕ ಬರಹಗಾರರಿಗೆ ಮಾಸಿಕ ರೂ.20,000 ಹಾಗೂ ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಮಾಸಿಕ ರೂ.15,000 ವೇತನ ನೀಡಬೇಕು.ಅದರ ಜೊತೆಗೆ ESI, PF, ಸಮವಸ್ತ್ರ, ಗುರುತುಚೀಟಿಗಳನ್ನು ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ನಡೆಸುವ ಈ ಹೋರಾಟಕ್ಕೆ ರಾಜ್ಯ ಸರಕಾರದ ಕೂಡಲೇ ಸ್ಪಂದಿಸುವಂತಾಗಬೇಕು” ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಂಧ್ಯಾ ಪುತ್ತೂರು, ಗೀತಾ ಸುಳ್ಯ, ಶೋಭಾ, ಇಂದಿರಾ, ಜಯಂತಿ, ಗೀತಾಂಜಲಿ ಮೂಡಬಿದ್ರೆ, ನಳಿನಾಕ್ಷಿ ಮುನ್ನೂರು ಮುಂತಾದವರು ಇದ್ದರು.