ಉತ್ತರಾಖಂಡದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರ ಸುರಂಗದಲ್ಲಿ ಸಿಕ್ಕಿಬಿದ್ದ ಕಾರ್ಮಿಕರಿಗೆ ‘ತಾವು ಬದುಕಿದ್ದೇವೆ ಮತ್ತು ಸುರಕ್ಷಿತವಾಗಿದ್ದೇವೆಂದು’ ಹೊರಜಗತ್ತಿಗೆ ಸಂದೇಶ ಕಳಿಸುವುದು ಮೊದಲ ಆದ್ಯತೆಯಾಗಿತ್ತು. ಸುರಂಗದಲ್ಲಿ ನೆಟ್ವರ್ಕ್ ಇರದಿದ್ದ ಕಾರಣ ಅವರ ಮೊಬೈಲ್ ಫೋನುಗಳು, ವಾಕಿಟಾಕಿಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಸಂದೇಶ ರವಾನೆಗೆ ಅವರು ಏನು ಉಪಾಯ ಮಾಡಿರಬಹುದು?
ಸುರಂಗದಿಂದ ಹೊರಕ್ಕೆ ಸಾಗಿದ್ದ ಕೊಳವೆಯ ಮೂಲಕ, ಸುರಂಗದೊಳಗಿದ್ದ ನೀರನ್ನು ಪಂಪ್ ಮಾಡಲು ತೊಡಗಿದರು. ಪಂಪ್ ಮಾಡುವುದನ್ನು ನಿಲ್ಲಿಸಿ ಮತ್ತೆ ಶುರು ಮಾಡಿದರು. ಹಲವು ಸಲ ಹೀಗೆ ಮಾಡಿದ ನಂತರ ಹೊರಗೆ ಕಾಪಾಡುವ ಕಾರ್ಯಾಚರಣೆಯಲ್ಲಿ ತೊಡಗಿದ್ದವರಿಗೆ ಸಂದೇಶ ದೊರೆಯಿತು.
‘ನಾವು ನೀರು ಪಂಪ್ ಮಾಡಿದ್ದ ಅದೇ ಕೊಳವೆಯ ಮೂಲಕ ನವೆಂಬರ್ 12ರಂದು ತಾಜಾ ಆಮ್ಲಜನಕವನ್ನು ಸುರಂಗದೊಳಕ್ಕೆ ಸರಬರಾಜು ಮಾಡಿದರು. ಆರಂಭದ 18 ತಾಸುಗಳನ್ನು ಭಯದಲ್ಲೇ ಕಳೆದೆವು. ಆಮ್ಲಜನಕ ತಲುಪಿದ ತಕ್ಷಣವೇ ನಮಗೆ ಹೊಸ ಭರವಸೆ ಸಿಕ್ಕಿತ್ತು. ಬದುಕಿ ಹೊರಬೀಳುತ್ತೇವೆಂಬ ವಿಶ್ವಾಸ ಮೂಡಿತು’ ಎಂದು ಕಾಪಾಡಲಾದ 41 ಕಾರ್ಮಿಕರಲ್ಲಿ ಒಬ್ಬರಾದ ಒಡಿಶಾದ ಧೀರೇನ್ ನಾಯಕ್ ಅವರು ‘ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ’ಗೆ ತಿಳಿಸಿದ್ದಾರೆ.
#WATCH | Uttar Pradesh: Workers hailing from Shravasti who were rescued from the Silkyara tunnel received a warm welcome as they reached their homes. pic.twitter.com/uHVpM0sNls
— ANI (@ANI) December 1, 2023
‘ನವೆಂಬರ್ 12ರಂದು ನನಗೆ ರಾತ್ರಿ ಪಾಳಿಯಿತ್ತು. ಮುಂಜಾನೆ ಎಂಟಕ್ಕೆ ಮುಗಿಯಬೇಕಿತ್ತು. ಆದರೆ ಬೆಳಗಿನ ಜಾವ ಐದೂವರೆಯ ಹೊತ್ತಿಗೆ ಭಾರೀ ಸದ್ದು ಕೇಳಿಸಿತು. ಸುರಂಗದ ಒಂದು ಭಾಗ ಕುಸಿದಿದೆಯೆಂದು ತಿಳಿದುಬಂತು. ಕುಸಿದ ಜಾಗ ನಾವಿದ್ದೆಡೆಯಿಂದ ಎರಡು ಕಿ.ಮೀ.ದೂರದಲ್ಲಿತ್ತು. ಅಲ್ಲಿಗೆ ಹೋಗಿ ನೋಡಿದಾಗ ಆಘಾತವೆನಿಸಿತು. ಆದರೆ ಆಶಾಭಾವ ಕಳೆದುಕೊಳ್ಳಲಿಲ್ಲ’ ಎಂದು ಧೀರೇನ್ ನಾಯಕ್ ತಿಳಿಸಿದ್ದಾರೆ.

‘ಆಮ್ಲಜನಕವನ್ನು ಕಳಿಸಿದ್ದ ಅದೇ ಕೊಳವೆಯ ಮೂಲಕ ಹೊರಗಿನಿಂದ ಮಂಡಕ್ಕಿ- ಪುರಿ-ಚುರುಮುರಿ ಕಳಿಸಿದರು. ಆದರೆ ಹೀಗೆ ಕಳಿಸಿದ ಮೂರನೆಯ ಒಂದು ಭಾಗ ಮಾತ್ರ ನಮ್ಮನ್ನು ತಲುಪಿತ್ತು. ಅದನ್ನೇ ಸಮನಾಗಿ ಹಂಚಿಕೊಂಡು ತಿಂದೆವು. ಕಾಪಾಡುವ ಕಾರ್ಯಾಚರಣೆಯ ಏಳುಬೀಳುಗಳ ಅರಿವು ನಮಗಿತ್ತು. ಆರಂಭದ ಹಿನ್ನಡೆ ನಮ್ಮ ಚೈತನ್ಯಗಳನ್ನು ಕುಂದಿಸಿತು. ಆದರೆ ಕಾರ್ಯಾಚರಣೆ ಮುಂದುವರೆದಿರುವುದು ತಿಳಿದು ನಮ್ಮ ಆತ್ಮವಿಶ್ವಾಸ ಹೆಚ್ಚಿತು’ ಎಂದು ಸುರಂಗದೊಳಗೆ ಕಳೆದ ದಿನಗಳನ್ನು ಮೆಲುಕು ಹಾಕಿದ ನಾಯಕ್.
‘ತಾಜಾ ಆಮ್ಲಜನಕ ಮತ್ತು ಆಹಾರ ಇರಲಿಲ್ಲ, ಸಾಯುವುದೇ ಆಗಿದ್ದರೆ ಆರಂಭದ 18 ತಾಸುಗಳೊಳಗೆ ಸತ್ತೇ ಹೋಗುತ್ತಿದ್ದೆವು ಎಂದು ಸಹವರ್ತಿಗಳಿಗೆ ತಿಳಿಸಿ ಧೈರ್ಯ ತುಂಬಿದೆ. ಈ ಅಂಶ ಉಳಿದೆಲ್ಲರಿಗೂ ಇಷ್ಟವಾಯಿತು’ ಎಂದು ನಾಯಕ್ ವಿವರಿಸಿದ್ದಾರೆ.
ಹದಿನೇಳು ಸುದೀರ್ಘ ದಿನಗಳನ್ನು ಸುರಂಗದಲ್ಲಿ ಕಳೆದದ್ದಾದರೂ ಹೇಗೆ?
ಕಾರ್ಮಿಕರು ಪರಸ್ಪರರನ್ನು ಹುರಿದುಂಬಿಸಿ ಆಶಾಭಾವನೆ ಆರದಂತೆ ಕಾಪಿಟ್ಟುಕೊಂಡರು. ಕೆಲವರು ಕಾರ್ಡ್ಸ್, ಇನ್ನು ಕೆಲವರು ತಮ್ಮ ಮೊಬೈಲುಗಳಲ್ಲಿ ‘ಲೂಡೋ’ ಆಡಿದರು. ಸುರಂಗದೊಳಗೆ ಅವರ ಪಾಲಿಗೆ ಹಗಲು ಇರುಳು ಒಂದೇ ಆಗಿತ್ತು. ಹೊರಗಿನಿಂದ ಕಳಿಸಿದ ಒಣಹಣ್ಣುಗಳು, ಬಿಸ್ಕತ್ತುಗಳು ಹಾಗೂ ಬಾದಾಮಿ ಗೋಡಂಬಿಯಂತಹ ಬೀಜಗಳನ್ನು ತಿಂದರು. ಹನ್ನೊಂದನೆಯ ದಿನ ಬೇಯಿಸಿದ ಆಹಾರವನ್ನು ಕೊಳವೆಯ ಮೂಲಕ ಅವರಿಗೆ ಕಳಿಸಲಾಯಿತು.
ಹದಿನಾಲ್ಕು ದಿನಗಳ ನಂತರ ಅವರವರ ಕುಟುಂಬಗಳಿಗೆ ಫೋನಿನಲ್ಲಿ ಮಾತಾಡುವ ಸೌಲಭ್ಯ ಎಲ್ಲರಿಗೂ ಸಿಕ್ಕಿತು. ಸ್ಥಿರ ದೂರವಾಣಿ (ಲ್ಯಾಂಡ್ ಲೈನ್) ಸಂಪರ್ಕ ಕಲ್ಪಿಸಿತ್ತು ಬಿ.ಎಸ್.ಎನ್.ಎಲ್. ನೆಲದಾಳದಲ್ಲಿ ಚಿಲುಮೆಯ ನೀರು ಧಾರಾಳವಾಗಿತ್ತು. ಅದೇ ನೀರಿನಲ್ಲಿ ಸ್ನಾನ ಮಾಡಿದರು. ದೇಹಬಾಧೆ ತೀರಿಸಿಕೊಳ್ಳಲು ಸುರಂಗದ ಮತ್ತೊಂದು ದೂರ ತುದಿಗೆ ಹೋಗುತ್ತಿದ್ದರು.