ಅಂಚೆ ಇಲಾಖೆ ಜನರ ಜೀವನಾಡಿಯಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂದೇಶವನ್ನು ರವಾನಿಸುವ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂದು ಕೇಂದ್ರ ಸರ್ಕಾರ ಅಂಚೆ ಕಚೇರಿಯ ಮೂಲಕ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನರಿಗೆ ತಲುಪಿಸುವಂತಹ ಕಾರ್ಯ ನಡೆಸುತ್ತಿದೆ. ಸಾರ್ವಜನಿಕರು ಇದರ ಲಾಭವನ್ನು ಪಡೆಯಬೇಕು ಎಂದು ವಿಜಯಪುರದ ಅಂಚೆ ಅಧಿಕಾರಿ ಜಿ ಬಿ ನಾಯಕ್ ಹೇಳಿದರು.
ವಿಜಯಪುರ ಪಟ್ಟಣದ ಅಳ್ಳಳ್ಳಿ ಮಠದಲ್ಲಿ ಶುಕ್ರವಾರ ಅಂಚೆ ಇಲಾಖೆ ವಿಜಯಪುರ ವಿಭಾಗ ಹಾಗೂ ಸಿಂದಗಿ ಉಪವಿಭಾಗದ ಸಹಯೋಗದಲ್ಲಿ ಏರ್ಪಡಿಸಿದ್ದ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ಕೇಂದ್ರ ಸರ್ಕಾರ ಉತ್ತಮ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಪಂಚ ಸೇವೆಯನ್ನು ಮನೆಯ ಬಾಗಿಲಿಗೆ ಕೊಂಡೊಯ್ಯುವುದರ ಜೊತೆಗೆ ಉಳಿತಾಯ ಖಾತೆ ತೆರೆಯುವಿಕೆ, ಐಪಿಬಿಪಿ ಖಾತೆ ತೆರೆಯುವಿಕೆ, ಆಧಾರ್ ನೋಂದಣಿ ತಿದ್ದುಪಡಿ, ಜೋಡಣೆ, ಮೈ ಸ್ಟಾಂಪ್ ಮೈಲ್ಸ್, ಅಂಚೆ ಜೀವನ ವಿಮೆ ಹಾಗೂ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಅನೇಕ ಯೋಜನೆಗಳನ್ನು ಜಾರಿಗೆ ತಂದಿರುವ ಕಾರಣ ಸಾರ್ವಜನಿಕರು ಅಂಚೆ ಇಲಾಖೆಯೊಂದಿಗೆ ಕೈಜೋಡಿಸಿ ಭವಿಷ್ಯದ ಜೀವನಕ್ಕೆ ಬಲ ತುಂಬಿಕೊಳ್ಳಬೇಕು” ಎಂದರು.
ಎ ಕೆ ನಂದಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎನ್ ಎಸ್ ದೇವರುಮನಿ ಮಾತನಾಡಿ, “ರಾಷ್ಟ್ರದಲ್ಲಿ ಅಂಚೆ ಇಲಾಖೆ ಈ ಮೊದಲು ಸಂಪರ್ಕ ಸಾಧನೆಗೆ ಮಾತ್ರ ಸೀಮಿತವಾಗಿತ್ತು. ಇದೀಗ ನೂರಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡುತ್ತಿರುವುದು ಬಹಳ ಹೆಮ್ಮೆಯ ವಿಷಯ, ಸಾರ್ವಜನಿಕರು ಅಂಚೆ ಇಲಾಖೆಯ ಲಾಭ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ರಿಂಗ್ ರೋಡ್‌ಗಾಗಿ ಮನೆಗಳ ತೆರವು ಕಾರ್ಯಾಚರಣೆ; ನಿಷೇಧಾಜ್ಞೆ ಜಾರಿ
ಅಳ್ಳಳ್ಳಿ ಮಠದ ಶ್ರೀಶೈಲಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯ ಭಾಗ್ಯವಂತ ಆಲ್ಮೇಲ್ಕರ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕ ಘಟಕದ ಅಧ್ಯಕ್ಷ ಸೈಯದ್ ದೇವರಮನಿ, ಸಿಂದಗಿ ಅಂಚೆ ಉಪವಿಭಾಗದ ನಿರೀಕ್ಷಕ ಮಹಾಂತೇಶ ಕುಕರ್ಣಿ, ಆಲಮೆಲ ಸಾಕಾ ಅಂಚೆ ಪಾಲಕ ವಿಐ ಪಾಟೀಲ್, ಮೇಲ್ವಿಚಾರಕ ಮನೋಹರ್ ಪೊಳ್ಳೆ, ಅಂಗನವಾಡಿ ಶಿಕ್ಷಕಿ ಲಕ್ಷ್ಮಿ ಸೇರಿದಂತೆ ಇತರ ಇದ್ದರು.