ಈ ದಿನ ಸಂಪಾದಕೀಯ | ಶೇ 50ರಷ್ಟು ಮಹಿಳಾ ಮುಖ್ಯಮಂತ್ರಿಗಳು!- ಹೇಳಿಕೆಯಾಗೇ ಉಳಿಯದಿರಲಿ, ಅನುಷ್ಠಾನಕ್ಕೂ ಬರಲಿ

Date:

Advertisements
ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ ಒಂದೇ ತಿಂಗಳಲ್ಲಿ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿ, ಮತದಾನ ಮುಗಿದು ಡಿ. 3ರಂದು ಮತ ಎಣಿಕೆಯಾಗಿ ಫಲಿತಾಂಶವೂ ಬರಲಿದೆ. ಈ ಮಧ್ಯೆ ಯಾವ ಪಕ್ಷಗಳಾದರೂ ಮಹಿಳೆಯರಿಗೆ ಹೆಚ್ಚು ಟಿಕೆಟ್‌ ಕೊಟ್ಟು ಮಹಿಳಾ ಮೀಸಲಾತಿ ಕಾಯ್ದೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆಗೊಡ್ಡಿವೆಯೇ ಎಂದು ನೋಡಿದರೆ ನಿರಾಶೆಯೇ ಉತ್ತರ.

 

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರು ನಿನ್ನೆ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, ಮುಂದಿನ ಹತ್ತು ವರ್ಷಗಳಲ್ಲಿ ಶೇ 50 ರಷ್ಟು ಮಹಿಳಾ ಮುಖ್ಯಮಂತ್ರಿಗಳನ್ನು ಹೊಂದುವ ಗುರಿ ತಮ್ಮ ಪಕ್ಷಕ್ಕಿದೆ ಎಂದು ಹೇಳಿದ್ದಾರೆ. ನಿಜಕ್ಕೂ ಮಹಿಳೆಯರಿಗೆ ಸಾಮಾಜಿಕ, ರಾಜಕೀಯ ನ್ಯಾಯ ಒದಗಿಸುವ ನೈಜ ಉದ್ದೇಶ ಇದ್ದರೆ ಇದೊಂದು ಆಶಾದಾಯಕ ಹೇಳಿಕೆ. ಸದ್ಯಕ್ಕೆ ಇದನ್ನು ಹೇಳಿಕೆಯಾಗಿಯೇ ನೋಡೋಣ.

2021ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮತ್ತು ಯುಪಿ ಚುನಾವಣಾ ಉಸ್ತುವಾರಿಯಾಗಿದ್ದ ಪ್ರಿಯಾಂಕ ಗಾಂಧಿ ಅವರು ಶೇ 50ರಷ್ಟು ಮಹಿಳೆಯರಿಗೆ ಟಿಕೆಟ್‌ ನೀಡಿದ್ದರು. ಆದರೆ, ಇದೇ ಪ್ರಯೋಗವನ್ನು ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲಿ ಮಾಡಿಲ್ಲ. ಅದಕ್ಕೆ ಬೇರೆ ರಾಜಕೀಯ ಕಾರಣವೂ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಈ ಬಾರಿಯ ಚುನಾವಣೆ ಮಾಡು, ಇಲ್ಲವೇ ಮಡಿಎಂಬ ಮಟ್ಟಿನ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಪ್ರಯೋಗಕ್ಕೆ ಅವಕಾಶ ಇರಲಿಲ್ಲ ಎಂಬ ಸಮರ್ಥನೆ ನೀಡಲಾಗಿದೆ.

ಎರಡು ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನ ದಿಢೀರ್ ವಿಶೇಷ ಅಧಿವೇಶನ ಕರೆದು ಎರಡು ದಶಕಗಳಿಂದ ನನೆಗುದಿಗೆ ಬಿದ್ದಿದ್ದ, ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಪ್ರಾತಿನಿಧ್ಯ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದರು. ನಂತರ ಅದು ಅಂಗೀಕಾರವಾಗಿ ರಾಷ್ಟ್ರಪತಿಯವರ ಅಂಕಿತ ಪಡೆದು ಕಾಯ್ದೆಯೂ ಆಯ್ತು. ಆದರೆ ಈ ಕಾಯ್ದೆ ಜಾರಿಯಾಗುವುದು 15 ವರ್ಷಗಳ ತರುವಾಯ. ಜೊತೆಗೆ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಯ (ಡೀಲಿಮಿಟೇಷನ್) ಎರಡು ಕೊಕ್ಕೆಗಳನ್ನು ತಗುಲಿಸಲಾಗಿದೆ. ಅಲ್ಲಿಗೆ ಕನಿಷ್ಠ ಇನ್ನು ಮೂರು ಲೋಕಸಭಾ ಚುಣಾವಣೆಗಳ ತನಕ ಮಹಿಳಾ ಮೀಸಲಾತಿ ಕನ್ನಡಿಯೊಳಗಿನ ಗಂಟೇ ಸರಿ.

Advertisements

ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿ ಒಂದೇ ತಿಂಗಳಲ್ಲಿ ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿ, ಮತದಾನ ಮುಗಿದು ಡಿ. 3ರಂದು ಮತ ಎಣಿಕೆಯಾಗಿ ಫಲಿತಾಂಶವೂ ಬರಲಿದೆ. ಈ ಮಧ್ಯೆ ಯಾವ ಪಕ್ಷಗಳಾದರೂ ಮಹಿಳೆಯರಿಗೆ ಹೆಚ್ಚು ಟಿಕೆಟ್‌ ಕೊಟ್ಟು ಮಹಿಳಾ ಮೀಸಲಾತಿ ಕಾಯ್ದೆಯನ್ನು ಪ್ರಾಯೋಗಿಕವಾಗಿ ಪರೀಕ್ಷೆಗೊಡ್ಡಿವೆಯೇ ಎಂದು ನೋಡಿದರೆ ನಿರಾಶೆಯೇ ಉತ್ತರ. ಸ್ವತಃ ಕಾಂಗ್ರೆಸ್‌ ಕೂಡ ಆ ಕೆಲಸವನ್ನು ಮಾಡಿಲ್ಲ. ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಮಹಿಳಾ ಸದಸ್ಯರ ಜೊತೆ ಫೋಟೋ ತೆಗೆಸಿಕೊಂಡು, ಮಹಿಳೆಯರಿಂದ ಸನ್ಮಾನ ಮಾಡಿಸಿಕೊಂಡ ಪ್ರಧಾನಿ ಮೋದಿಯವರೇ ತಮ್ಮ ಪಕ್ಷದ ಎಷ್ಟು ಮಹಿಳೆಯರಿಗೆ ಟಿಕೆಟ್‌ ನೀಡಿದ್ದಾರೆ?

ದೇಶದ ಇಡೀ ರಾಜಕೀಯ ವ್ಯವಸ್ಥೆಯೇ ಪುರುಷಕೇಂದ್ರಿತವಾಗಿದೆ. ಇತ್ತೀಚಿನ ಕೆಲ ವರ್ಷಗಳವರೆಗೂ ರಾಜಕೀಯದಲ್ಲಿ ಸ್ಥಾನಮಾನ ಪಡೆದ ಬಹುತೇಕ ನಾಯಕಿಯರು ರಾಜಕೀಯ ಕುಟುಂಬಗಳ ಹಿನ್ನೆಲೆಯಿಂದ ಬಂದವರು. ಅಥವಾ ಸಿನಿಮಾ ರಂಗದ ನಂಟಿನವರು. ಸಾಮಾನ್ಯ ಕೌಟುಂಬಿಕ ಹಿನ್ನೆಲೆಯಿಂದ ಬರುವ ಮಹಿಳೆಯರು ಸುಶಿಕ್ಷಿತರಾಗಿದ್ದರೂ ರಾಜಕೀಯದಲ್ಲಿ ಗೆಲ್ಲುವ ಅರ್ಹತೆ ಪಡೆಯುವುದು ಕಷ್ಟ. ಪುರುಷ ಆಕಾಂಕ್ಷಿಗಳು ಹೆಚ್ಚು ಇರುವುದು ಒಂದು ಕಾರಣವಾದರೆ, ಹೆಣ್ಣುಮಕ್ಕಳನ್ನು ಶಾಸಕ/ ಸಂಸದ ಸ್ಥಾನದಲ್ಲಿ ನೋಡಲು ಮತದಾರರು ಬಯಸಲ್ಲ. ಅವರಿಗೆ ಆ ಕೆಲಸ ನಿಭಾಯಿಸಲು ಆಗಲ್ಲ ಎಂಬುದು ಗಂಡಾಳಿಕೆ ಪೊರೆದು ಪೋಷಿಸಿರುವ ಪೂರ್ವಗ್ರಹದ ತೀರ್ಮಾನ ಮಹಿಳಾ ಪ್ರಾತಿನಿಧ್ಯಕ್ಕೆ ಮಾರಕವಾಗಿರುವ ಮತ್ತೊಂದು ಮುಖ್ಯ ಕಾರಣ. ದಶಕಗಳ ಕಾಲ ಈ ದೇಶವನ್ನು ದಿಟ್ಟತನದಿಂದ ದೇಶವಾಳಿದ ಇಂದಿರಾ ಗಾಂಧಿ ಅವರ ಐತಿಹಾಸಿಕ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಆದರೆ ಇದನ್ನು ಒಪ್ಪಲೊಲ್ಲದ ಪುರುಷಾಹಂಕಾರದ ಕರಿನೆರಳೂ ಚಾಚಿ ಹಬ್ಬಿದೆ.

ರಾಜಕೀಯ ಅಂದರೆ ಹಣ ಬಿತ್ತಿ ಹಣದ ಸಮೃದ್ಧ ಫಸಲು ಕಟಾವು ಮಾಡುವ ಅದ್ಭುತ ಅವಕಾಶ. ಈ ಕಾರಣಕ್ಕೆ ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿರುವ, ಇನ್ನಷ್ಟು ಲೂಟಿ ಹೊಡೆಯಲು ಹಾತೊರೆಯುವ ದುಷ್ಟರೇ ರಾಜಕಾರಣಕ್ಕೆ ನುಗ್ಗಿ ಬರುತ್ತಿದ್ದಾರೆ. ಈ ನೂಕುನುಗ್ಗಲಿನ ನಡುವೆ ಹೆಣ್ಣುಮಕ್ಕಳು ದಾರಿ ಮಾಡಿಕೊಂಡು ಅಧಿಕಾರ ಸ್ಥಾನಗಳಿಗೆ ಬರುವುದು ದೂರ ದೂರದ ಮಾತೇ ಸರಿ. ಪಂಚಾಯತ್‌ಗಳಲ್ಲಿ 33% ಮೀಸಲಾತಿ ಜಾರಿಗೆ ಬಂದ ನಂತರ ಹಿಂದುಳಿದವರು, ಅಲ್ಪಸಂಖ್ಯಾತರು, .ಬಿ.ಸಿ. ಮಹಿಳೆಯರು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವುದು ಸಾಧ್ಯವಾಯಿತು. ಪಂಚಾಯತಿ ಮಟ್ಟದಲ್ಲಿ ಸ್ಪರ್ಧೆಗಳು ಪಕ್ಷರಹಿತ ಎಂದಿದ್ದರೂ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಈಗ ಬಹಿರಂಗ ಸತ್ಯ. ಅಲ್ಲಿಯೂ ಹಣಬಲ, ಕುಟುಂಬ ಬಲದ ಮೇಲೆಯೇ ಮಹಿಳೆಯರು ಅವಕಾಶ ಪಡೆಯುವ ವಿಪರ್ಯಾಸದ ಸ್ಥಿತಿ ನಿರ್ಮಾಣವಾಗಿದೆ.

ಮೊನ್ನೆ ನಡೆದ ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್‌, ಮಿಜೋರಾಂ, ತೆಲಂಗಾಣ ಚುನಾವಣೆಯಲ್ಲಿ ಒಟ್ಟು 7218 ಪುರುಷರು ಸ್ಪರ್ಧಿಸಿದ್ದರೆ, ಮಹಿಳಾ ಅಭ್ಯರ್ಥಿಗಳ ಸಂಖ್ಯೆ ಕೇವಲ 831. ಅಂದರೆ ಐದು ರಾಜ್ಯಗಳೂ ಸೇರಿ ಕೇವಲ 10% !. ಇದು ಎಲ್ಲ ಪಕ್ಷಗಳ ಮಹಿಳಾ ವಿರೋಧಿ ಧೋರಣೆಗೆ ಹಿಡಿದ ಕನ್ನಡಿ. ಮಹಿಳಾ ಮೀಸಲಾತಿ ಜಾರಿಯಾಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಮೀಸಲಾತಿ ಜಾರಿಗೆ ಮುನ್ನ ಜನಗಣತಿ ನಡೆದು, ಕ್ಷೇತ್ರ  ಮರು ವಿಂಗಡನೆಯ ಬೃಹತ್ ಕಸರತ್ತುಗಳು ಜರುಗಬೇಕಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಿದ್ದ ಜಗಗಣತಿಯ ನಿಯಮವನ್ನು ಮೋದಿ ಸರ್ಕಾರ ಉಲ್ಲಂಘಿಸಿದೆ. 2021ರಲ್ಲಿ ಆಗಬೇಕಿದ್ದ ಜನಗಣತಿ ಪ್ರಕ್ರಿಯೆಯನ್ನು ಕೊರೊನಾ ನೆಪದಲ್ಲಿ ಮುಂದೂಡಲಾಯಿತು. ನಂತರ ಎಲ್ಲವೂ ಸಹಜಸ್ಥಿತಿಗೆ ಬಂದು ಸಾಲು ಸಾಲು ಚುನಾವಣೆಗಳಿಗೆ ತಯಾರಾಗುತ್ತಾರೆ ನರೇಂದ್ರಮೋದಿಕೇಂದ್ರ ಸರ್ಕಾರ. ಆದರೆ ಜನಗಣತಿಯ ಬಗ್ಗೆ ಅದೇ ಉತ್ಸಾಹ ತೋರುತ್ತಿಲ್ಲ ಯಾಕೆ?

ರಾಹುಲ್‌ ಗಾಂಧಿ ಅವರ ನಿನ್ನೆಯ ಹೇಳಿಕೆ, ಹೇಳಿಕೆಯಾಗಿಯಷ್ಟೇ ಉಳಿಯದಿರಲಿ. ಅನುಷ್ಠಾನಕ್ಕೂ ಬರಲಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X