ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ, ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಜಾರಿಗೊಳಿಸುವುದು ಸೇರಿದಂತೆ ಹಲವು ಬೇಡಿಕೆ ಈಡೇರಿಸುವಂತೆ ಶಿವಮೊಗ್ಗ ಜಿಲ್ಲಾ ಹೊಲೆಯ-ಮಾದಿಗ ಜಾತಿಗಳ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಒತ್ತಾಯಿಸಿದರು.
“ಪರಿಶಿಷ್ಟ ಜಾತಿ ಅನ್ಯ ಸಮುದಾಯದವರಿಗೆ ಕೈಗಾರಿಕೋದ್ಯಮಕ್ಕೆ ಹೆಚ್ಚು ಪ್ರೋತ್ಸಾಹ ನೀಡಿ ಸಾಲ
ಸೌಲಭ್ಯದಲ್ಲಿ ಶೇ. 80ರಷ್ಟು ಸಹಾಯಧನ ನೀಡಬೇಕು. ಸ್ಥಾಪನೆಗೆ ಇರುವ ಕಠಿಣ ನಿರ್ಬಂಧ ಕೈಬಿಡಬೇಕು. ಪರಿಶಿಷ್ಟ ಜಾತಿ ಉಪಯೋಜನೆ ಅನುದಾನ ಪ್ರಸ್ತುತ ಸಾಲಿನಲ್ಲಿ ಖರ್ಚಾಗದೆ ಉಳಿದರೆ ಮುಂದಿನ ಸಾಲಿನ ಆಯ-ವ್ಯಯದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ ಸೇರಿಸಲು ಕಾಯ್ದೆ ರೂಪಿಸಬೇಕು” ಎಂದು ಆಗ್ರಹಿಸಿದರು.
“ಪರಿಶಿಷ್ಟ ಜಾತಿ, ಅಸ್ಪೃಶ್ಯ ಜಾತಿಗಳಿಗೆ ಸೇರಿದ ಸಮುದಾಯಗಳು, ಮಲ ಹೊರುವುದು, ಶೌಚಾಲಯ ಶುಚಿಗೊಳಿಸುವುದು, ಸತ್ತ ಜಾನುವಾರುಗಳನ್ನು ಊರ ಹೊರಗೆ ಸಾಗಿಸುವುದು, ಚಪ್ಪಲಿ ಹೊಲಿಯುವುದು ಮುಂತಾದ ಹೀನ ಕಸುಬುಗಳನ್ನು ಮಾಡಿಕೊಂಡು ಬಂದಿರುವ ನೈಜ ಅಸ್ಪೃಶ್ಯ ಜಾತಿಗಳಾಗಿವೆ” ಎಂದರು.
“ಹೊಲಯ, ಛಲವಾದಿ, ಮಾದಿಗ, ಸಮಗಾರ, ಮಚ್ಚಿಗಾರ, ದೋಹರ, ದಕ್ಕಲ ಮುಂತಾದ ಜನಾಂಗಗಳಿಗೆ ಸಂವಿಧಾನಾತ್ಮಕವಾಗಿ ಸಿಗಬೇಕಾದ ರಾಜಕೀಯ, ಶಿಕ್ಷಣ, ಉದ್ಯೋಗ ಮುಂತಾದ ಸೌಲಭ್ಯಗಳನ್ನು ಇತ್ತೀಚಿನ ದಿನಗಳಲ್ಲಿ ಇದರ ಪಾಲನ್ನು ಪರಿಶಿಷ್ಟರಲ್ಲೇ ಸ್ಪೃಶ್ಯರಾಗಿರುವ ಸಮುದಾಯಗಳು ಕಸಿಯತೊಡಗಿವೆ. ಇದರಿಂದ ನಮ್ಮ ಜೀವನ ಹಾಳಾಗುತ್ತಿದೆ. ಹಾಗಾಗಿ ಒಳಮೀಸಲಾತಿಗೆ ಎ ಜೆ ಸದಾಶಿವ ವರದಿ ಜಾರಿ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತುಂಗಾ ನದಿ ಮಲಿನಗೊಳ್ಳುತ್ತಿದ್ದರೂ ಪಾಲಿಕೆ ನಿರ್ಲಕ್ಷ್ಯ; ಎಎಪಿ ಆರೋಪ
ಈ ಸಂದರ್ಭದಲ್ಲಿ ಅಧ್ಯಕ್ಷ ಸಾವಕ್ಕನವರ್, ಉಪಾಧ್ಯಕ್ಷ ಚಂದ್ರಪ್ಪ ಎಚ್ ಎ, ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್ ಬಿ ಎ, ಕಾರ್ಯದರ್ಶಿ ನಾಗಪ್ಪ ಎಂ ಕೆ, ಸಂಘಟನಾ ಕಾರ್ಯದರ್ಶಿ ಶಿವಕುಮಾರ್ ಮತ್ತು ಕೆ ಎನ್ ಅಶೋಕ್ ಕುಮಾರ್ ಇದ್ದರು.