- ಸಭ್ಯತೆ ಮೀರಿದ ಅಧಿಕಾರಿಗಳ ವಿರುದ್ಧ ಸುಮೊಟೊ ಕೇಸ್ ದಾಖಲಿಸಲು ಶಿಫಾರಸು
- ಜಿಲ್ಲಾ ಮಟ್ಟದ ಅಧಿಕಾರಿಗಳು ವಿದ್ಯಾರ್ಥಿನಿಯರೊಂದಿಗೆ ನೃತ್ಯ; ವಿರೋಧ ವ್ಯಕ್ತ
ತುಮಕೂರು ಜಿಲ್ಲಾಧಿಕಾರಿ ಕೆ ಶ್ರೀನಿವಾಸ್ ಸೇರಿದಂತೆ ಜಿಲ್ಲಾಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯದಲ್ಲಿ ತಡರಾತ್ರಿ ಡ್ಯಾನ್ಸ್ ಮಾಡಿದ್ದರು ಎನ್ನಲಾದ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ತುಮಕೂರು ನಗರದ ಗೆದ್ದಲಹಳ್ಳಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ದೀಪಾವಳಿ ಹಬ್ಬದಂದು ಸರ್ಕಾರಿ ಅಧಿಕಾರಿಗಳು ವಿದ್ಯಾರ್ಥಿನಿಯರ ಜೊತೆಯಲ್ಲಿ ಐಟಂ ಸಾಂಗ್‌ಗೆ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದ್ದು, ಡಿಸಿ ಹಾಗೂ ಇತರೆ ಅಧಿಕಾರಿಗಳ ನಡೆಗೆ ವಿರೋಧ ವ್ಯಕ್ತವಾಗಿದೆ.
“ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ, ಸಹಾಯಕ ನಿರ್ದೇಶಕ ದಿನೇಶ್ ಸೇರಿದಂತೆ ವಾರ್ಡನ್ ಉಮಾದೇವಿ, ತನುಜಾ ಕುಮಾರಿ ಅವರೆಲ್ಲರೂ ಜಿಲ್ಲಾಧಿಕಾರಿ ಮುಂದೆಯೇ ದೀಪಾವಳಿ ಹಬ್ಬದ ನೆಪ ಹೇಳಿಕೊಂಡು ಯುವತಿಯರೊಂದಿಗೆ ಹೆಜ್ಜೆ ಹಾಕಿದ್ದಾರೆ ಎನ್ನುವ ವಿಚಾರ ಜಿಲ್ಲಾಡಳಿತವನ್ನು ಮುಜುಗರಕ್ಕೀಡು ಮಾಡಿದೆ” ಎಂದು ಸಾಮಾಜಿಕ ಹೋರಾಟಗಾರ ಜೆಟ್ಟಿ ಅಗ್ರಹಾರ ನಾಗರಾಜು (ಟೈಗರ್ ನಾಗ್) ಕಳವಳ ವ್ಯಕ್ತಪಡಿಸಿದರು.
“ತುಮಕೂರು ನಗರದಲ್ಲಿ 23ಕ್ಕೂ ಹೆಚ್ಚು ಹಾಸ್ಟೆಲ್‌ಗಳು ಇದ್ದರೂ ಕೂಡ ಹೊರವಲಯದ ಹಾಸ್ಟೆಲ್ ಆಯ್ಕೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನ ಹುಟ್ಟಿಸಿದೆ. ಅದೇನೇ ಇರಲಿ, ಜಿಲ್ಲಾಮಟ್ಟದ ಅಧಿಕಾರಿಗಳು ಈ ರೀತಿ ಸರ್ಕಾರಿ ಹಾಸ್ಟೆಲ್‌ಗೆ ರಾತ್ರಿ ವೇಳೆ ತೆರಳಿ ಐಟಂ ಸಾಂಗ್‌ಗೆ ನೃತ್ಯ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪ್ರಕರಣ ಪರಿಶೀಲಿಸಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಈ ದಿನ.ಕಾಮ್‌ಗೆ ಪ್ರತಿಕ್ರಿಯಿಸಿದ್ದು, “ನಾನು ಆ ವಿಡಿಯೋದಲ್ಲಿ ಇಲ್ಲ. ಹಾಸ್ಟೆಲ್‌ನಲ್ಲಿ ದೀಪಾವಳಿ ಹಬ್ಬವನ್ನಷ್ಟೇ ಆಚರಣೆ ಮಾಡಿದ್ದೇವೆ. ನಾನು ಎಲ್ಲಿಯೂ ಡ್ಯಾನ್ಸ್ ಮಾಡಿಲ್ಲ” ಎಂದು ತಿಳಿಸಿದರು.
“ದೀಪಾವಳಿ ದಿನದಂದು ವಿದ್ಯಾರ್ಥಿ ನಿಲಯದಲ್ಲಿ ಮಕ್ಕಳ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ವೇದಿಕೆ ಕಾರ್ಯಕ್ರಮವೂ ನಡೆಯಿತು. ವಿದ್ಯಾರ್ಥಿಗಳ ಒತ್ತಾಯದ ಮೇರೆಗೆ ಅಧಿಕಾರಿಗಳು ನೃತ್ಯ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ನೃತ್ಯದಲ್ಲಿ ಭಾಗವಹಿಸಿಲ್ಲ. ಈ ಘಟನೆಗೆ ಯಾವುದೇ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ ಮತ್ತು ಯಾವ ದುರುದ್ದೇಶವೂ ಇದರಲ್ಲಿ ಅಡಗಿಲ್ಲ” ಎಂದು ತುಮಕೂರು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ದಿನೇಶ್ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಮನರೇಗಾ ಕಾರ್ಮಿಕರಿಗೆ ಕೆಲಸ ನೀಡದಿದ್ದಲ್ಲಿ ಕಠಿಣ ಕ್ರಮ: ಸಿಇಒ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ ಟಿ ಈ ದಿನ.ಕಾಮ್‌ನಿಂದಿಗೆ ಮಾತನಾಡಿ, “ಮಕ್ಕಳ ಜೊತೆಗಿನ ವರ್ತನೆ ಜವಾಬ್ದಾರಿಯುತವಾಗಿರಬೇಕು. ಅದರಲ್ಲೂ ಅಧಿಕಾರಿಗಳಾಗಿ ಹೆಣ್ಣು ಮಕ್ಕಳ ಜೊತೆಗೆ ಸಂವೇದನಾಶೀಲತೆಯಿಂದ ನಡೆದುಕೊಳ್ಳಬೇಕಿದೆ. ಮಕ್ಕಳಿಗೆ ಆಯೋಜಿಸುವ ಯಾವುದೇ ಕಾರ್ಯಕ್ರಮಗಳು ಮಕ್ಕಳ ಘನತೆಯನ್ನು ರಕ್ಷಿಸುವಂತಿರಬೇಕು. ತುಮಕೂರಿನ ಹೆಣ್ಣು ಮಕ್ಕಳ ವಸತಿ ನಿಲಯದಲ್ಲಿ ನಡೆದಿದೆ ಎನ್ನಲಾದ ಕಾರ್ಯಕ್ರಮವೊಂದರಲ್ಲಿ ಅಧಿಕಾರಿಗಳು ಮಕ್ಕಳೊಂದಿಗೆ ಸಭ್ಯತೆ ಮೀರಿ ನಡೆದುಕೊಂಡಿರುವ ಬಗ್ಗೆ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ಬಂದಿದೆ. ಈ ಬಗ್ಗೆ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸೂಕ್ತ ತನಿಖೆಗೆ ಶಿಪಾರಸು ಮಾಡಲಿದೆ” ಎಂದು ತಿಳಿಸಿದ್ದಾರೆ.