ನೂರು ವರ್ಷ ತುಂಬಿದ ಡಾ.ಭೀಮಣ್ಣಾ ಖಂಡ್ರೆಯವರು ಒಬ್ಬ ಹುಟ್ಟು ಹೋರಾಟಗಾರರು, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಅಪಾರ ಸೇವೆಗೈದಿದ್ದಾರೆ. ಗಡಿ ಜಿಲ್ಲೆ ಬೀದರ ಒಳಗೊಂಡಿರುವ ಹೈದ್ರಾಬಾದ್ -ಕರ್ನಾಟಕ ಪ್ರದೇಶ ಇಂದು ಕರ್ನಾಟಕದಲ್ಲಿ ಉಳಿಯಲು ಶತಾಯುಷಿ ಡಾ. ಭೀಮಣ್ಣಾ ಖಂಡ್ರೆಯವರು ಕಾರಣೀಕರ್ತರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಬೆಂಗಳೂರು ಹಾಗೂ ಡಾ.ಭೀಮಣ್ಣಾ ಖಂಡ್ರೆ ಜನ್ಮ ಶತಮಾನೋತ್ಸವ ಸಮಿತಿಯಿಂದ ಭಾಲ್ಕಿ ಪಟ್ಟಣದ ಬಿಕೆಐಟಿ ಕಾಲೇಜು ಆವರಣದಲ್ಲಿ ಶನಿವಾರ ಆಯೋಜಿಸಿದ ಲೋಕನಾಯಕ, ಮಾಜಿ ಸಚಿವ ಡಾ.ಭೀಮಣ್ಣಾ ಖಂಡ್ರೆ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ʼಲೋಕನಾಯಕʼ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು.
“ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜೀಯವರ ಕರೆಗೆ ಓಗೊಟ್ಟು ದೇಶದ ಸ್ವಾತಂತ್ರ್ಯಕ್ಕಾಗಿ ದುಡಿದವರು, ಭೀಮಣ್ಣಾ ಖಂಡ್ರೆಯವರು ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇರಿದಂತೆ ಎಲ್ಲಾ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಒಳಿತಿಗಾಗಿ ಶ್ರಮಿಸಿದ ಬಗ್ಗೆ ಇಂದು ಲೋಕಾರ್ಪಣೆಗೊಂಡ ಅವರ ಅಭಿನಂದನಾ ಗ್ರಂಥ ಎಲ್ಲರಿಗೂ ಪ್ರೇರಣೆಯಾಗಿದೆ. ಹುಟ್ಟು ಸಾವಿನ ಮಧ್ಯೆ ಸಮಾಜಮುಖಿ ಕಾರ್ಯಗಳಿಂದಲೇ ಸಮಾಜ ನಮ್ಮನ್ನು ಸ್ಮರಿಸುತ್ತದೆ. ಆ ದಿಸೆಯಲ್ಲಿ ಡಾ.ಭೀಮಣ್ಣಾ ಖಂಡ್ರೆಯವರು ಸಾರ್ಥಕ ಬದುಕು ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಭೀಮಣ್ಣಾ ಖಂಡ್ರೆಯವರು ಇನ್ನೂ ಆರೋಗ್ಯವಾಗಿ ಬದುಕು ಸಾಗಿಸಲಿ” ಎಂದು ಹಾರೈಸಿದರು.
ಬಸವಾದಿ ಶರಣರ ವಿಚಾರಧಾರೆ ಎಂದೆಂದಿಗೂ ಪ್ರಸ್ತುತ:
ಸಮಾಜದ ಎಲ್ಲಾ ತಾರತಮ್ಯ ಹೋಗಲಾಡಿಸುವ ಪ್ರಯತ್ನವೇ ವಚನ ಸಾಹಿತ್ಯ, ಅದಕ್ಕಾಗಿ ಬಸವಾದಿ ಶರಣರು ಸಮಾನತೆ ಸಮಾಜ ರೂಪಿಸಲು ಪ್ರಯತ್ನಿಸಿದರು. ಎಂಟು ಶತಮಾನಗಳ ಹಿಂದೆ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿದರು, ಹಲವು ಜಾತಿಗಳಿಂದ ಕೂಡಿದ ವರ್ಣವ್ಯವಸ್ಥೆ ಪದ್ದತಿಯನ್ನು ನಾಶಗೊಳಿಸಿ ಸಮ-ಸಮಾಜ ಕಟ್ಟಲು ಬಯಸಿ ಎಲ್ಲಾ ಜಾತಿ-ಧರ್ಮ-ವರ್ಗದ ಜನರನ್ನು ಅನುಭವ ಮಂಟಪದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಶ್ರೇಯಸ್ಸು ಬಸವಣ್ಣವರಿಗೆ ಸಲ್ಲುತ್ತದೆ. ಬಸವಾದಿ ಶರಣರ ವಿಚಾರಧಾರೆ ಎಂದೆಂದಿಗೂ ಪ್ರಸ್ತುತ. ಸಮಾಜದಲ್ಲಿ ಅಸಮಾನತೆ ಇರುವರೆಗೂ ಬಸವಾದಿ ಶರಣರ ಚಿಂತನೆಗಳು ಪ್ರಸ್ತುತವಾಗಿರುತ್ತವೆ ಎಂದು ಅಭಿಪ್ರಾಯಪಟ್ಟರು.
ಭಾರತ ರಾಷ್ಟ್ರೀಯ ಕಾಂಗ್ರೇಸ್ (ಎಐಸಿಸಿ) ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, “ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂದು ಬಸವಣ್ಣನವರ ವಿಚಾರಧಾರೆ ಪ್ರಚಾರ ಮಾಡುವರೇ ಇರಲಿಲ್ಲ. ಅಂತಹ ಸಂದರ್ಭದಲ್ಲಿ ಡಾ. ಭೀಮಣ್ಣಾ ಖಂಡ್ರೆಯವರು ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಿ ಶರಣರ ಚಿಂತನೆ ಪ್ರಸಾರಕ್ಕೆ ಮುಂದಾದರು. ಅನೇಕ ಸಾಮಾಜಿಕ, ಶಿಕ್ಷಣ ಸಂಸ್ಥೆಗಳು ಪ್ರಾರಂಭಿಸಿ ಸಮಾಜದ ಸರ್ವಾಂಗೀಣ ಏಳಿಗಾಗಿ ಶ್ರಮಿಸಿದ್ದಾರೆ” ಎಂದರು.
“ಬೀದರಿಂದ ಮೈಸೂರವರೆಗೆ ಹೋರಾಟ ನಡೆಸಿ ಸಮಾಜವನ್ನು ಎಚ್ಚರಗೊಳಿಸಿದ ಛಲವಾದಿ ರಾಜಕಾರಣಿ ಡಾ.ಭೀಮಣ್ಣಾ ಖಂಡ್ರೆ, ಅವರೊಂದಿಗೆ ನಾನೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಬಹುತೇಕ ರಾಜಕಾರಣಿಗಳು 60-70 ವರ್ಷ ಬದುಕುವುದೇ ಕಷ್ಟ, ಆದರೆ ಮಾಜಿ ಸಚಿವ ಭೀಮಣ್ಣ ಖಂಡ್ರೆ ನೂರು ವರ್ಷದ ಸಾರ್ಥಕ ಬದುಕು ಎಲ್ಲರಿಗೂ ಸ್ಪೂರ್ತಿಗಾಗಿದೆ. ರಾಜಕೀಯ ಬದುಕಿನೊಂದಿಗೆ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ದುಡಿದ ಮಹಾನ್ ವ್ಯಕ್ತಿ ಭೀಮಣ್ಣಾ ಖಂಡ್ರೆ, ಅವರು ಇನ್ನೂ ಹೆಚ್ಚು ದಿನಗಳ ಕಾಲ ಬದುಕು ಸಾಗಿಸಲಿ” ಎಂದು ಹಾರೈಸಿದರು.
ಸ್ವಾಗತ ಸಮಿತಿ ಅಧ್ಯಕ್ಷರು ಆದ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸಮಾಜ ಸೇವೆ ಮುಂದೆ ಹಣ, ಆಸ್ತಿ ಯಾವುದೂ ಶಾಶ್ವತವಲ್ಲ. ನನಗೆ ನನ್ನ ತಂದೆಯೇ ಆದರ್ಶ, ಅವರೇ ಸ್ಫೂರ್ತಿ, ಅವರ ಗರಡಿಯಲ್ಲಿ ಬೆಳೆದು ಬಂದ ನಾನು ಅವರ ದಾರಿಯಲ್ಲಿ ಸಾಗುತ್ತಿದ್ದೇನೆ” ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಗೋ.ರು.ಚನ್ನಬಸಪ್ಪ ಅಭಿನಂದನಾ ಗ್ರಂಥ ಕುರಿತು ಮಾತನಾಡಿದರು, ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ, ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಶೇ 50ರಷ್ಟು ಮಹಿಳಾ ಮುಖ್ಯಮಂತ್ರಿಗಳು!- ಹೇಳಿಕೆಯಾಗೇ ಉಳಿಯದಿರಲಿ, ಅನುಷ್ಠಾನಕ್ಕೂ ಬರಲಿ
ಸಮಾರಂಭದಲ್ಲಿಸುತ್ತೂರು ಶ್ರೀ, ಸಿರಿಗೆರೆ ಶ್ರೀ, ಶ್ರೀಶೈಲ, ಕೂಡಲ ಸಂಗಮ, ಕಾಗಿನೆಲೆ, ಸಿದಗಂಗಾ ಶ್ರೀ, ಡಾ. ಬಸವಲಿಂಗ ಪಟ್ಟದ್ದೇವರು ಭಾಲ್ಕಿ, ನಿಜಗುಣಾನಂದ ಸ್ವಾಮೀಜಿ, ಡಾ. ಚನ್ನವೀರ ಶಿವಚಾರ್ಯ ಹಾರಕೂಡ, ಬಂತೆ ಸೇರಿದಂತೆ ವಿವಿಧ ಪೂಜ್ಯರು ಸಾನಿಧ್ಯ ವಹಿಸಿದರು. ಕರ್ನಾಟಕ ವಿಧಾನ ಸಭೆ ಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿ, ಜಗದೀಶ ಶೆಟ್ಟರ್, ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಶರಣಬಸಪ್ಪ ದರ್ಶನಾಪೂರ್, ಡಾ. ಶರಣಪ್ರಕಾಶ ಪಾಟೀಲ್ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ವಿವಿಧ ಮಠಾಧೀಶರು, ಹರ-ಗುರು-ಚರಮೂರ್ತಿಗಳು, ಶಾಸಕರು, ಗಣ್ಯರು ಉಪಸ್ಥಿತರಿದ್ದರು.