ಊಟದಲ್ಲಿ ವಿಷ ಹಾಕಿ ಸುಮಾರು 20ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಕೊಂದಿರುವ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರದ ಬಡೀ ಕಮಾನ್ ಸುತ್ತಲಿನ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಕಳೆದ ನಾಲ್ಕೈದು ದಿನಗಳಿಂದ ಬೀದಿ ನಾಯಿಗಳು ದಾಳಿ ಮಾಡುವ ಘಟನೆಗಳು ಹೆಚ್ಚಾಗಿದ್ದವು. ಇತ್ತೀಚಿಗೆ ಮಕ್ಕಳ ಮೇಲೆ ದಾಳಿ ಮಾಡಿದ್ದವು. ಹೀಗಾಗಿ, ಮಾಂಸಾಹಾರಕ್ಕೆ ವಿಷ ಹಾಕಿ, ಬೀದಿ ನಾಯಿಗಳನ್ನು ಹತ್ಯೆಗೈಯ್ಯಲಾಗಿದೆ.
ನಾಯಿಗಳ ಹತ್ಯೆಗೆ ಹಲವಾರು ಪ್ರಾಣಿ ಪ್ರೇಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಪಶು ವೈದ್ಯರನ್ನು ಕರೆಸಿ, ಔಷಧಿ ಕೊಡಿಸುವ ಪ್ರಯತ್ನ ಮಾಡಿದ್ದಾರೆ. ಆದರೂ, ಸುಮಾರು 20 ನಾಯಿಗಳು ಮೃತಪಟ್ಟಿವೆ. ಯಾರು ವಿಷಹಾಕಿದ್ದರು ಎಂಬುದು ಇನ್ನೂ ಗೊತ್ತಾಗಿಲ್ಲ ಎನ್ನಲಾಗಿದೆ.
ವಿಜಯಪುರದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ತಪ್ಪಿಸಬೇಕು. ಅವುಗಳನ್ನು ಹಿಡಿಯಬೇಕೆಂದು ನಗರದ ನಿವಾಸಿಗಳು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ, ವಿಜಯಪುರ ಮಹಾನಗರ ಪಾಲಿಕೆ ನಾಯಿ ಹಿಡಿಯುವ ಕಾರ್ಯಾಚರಣೆ ಆರಂಭಿಸಿತ್ತು. ಈ ನಡುವೆ, ನಾಯಿಗಳನ್ನು ಹತ್ಯೆಗೈಯ್ಯಲಾಗಿದೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಹಲವರು ಒತ್ತಾಯಿಸಿದ್ದಾರೆ.