ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 50 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ಭಾನುವಾರ (ಫೆ.16) ನಡೆಯಬೇಕಿದ್ದ ಪರೀಕ್ಷೆಯನ್ನು ಶನಿವಾರ (ಫೆ.15) ಮುಂದೂಡಿಕೆ ಮಾಡಲಾಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಹಠಾತ್ ಪರೀಕ್ಷೆ ಮುಂದೂಡಲಾಗಿದೆ. ಇದರಿಂದ ಪರೀಕ್ಷೆಗಾಗಿ ದೂರದ ಊರುಗಳಿಂದ ಆಗಮಿಸಿದ್ದ ಅಭ್ಯರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ರಾಜ್ಯ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತ್ತು ರೈತ ಸಂಘಟನೆಗಳ ಒಕ್ಕೂಟ ಬೆಂಗಳೂರು ಆಕ್ರೋಶ ವ್ಯಕ್ತಪಡಿಸಿದೆ.
ಪರೀಕ್ಷೆಗೆ 950 ಪಿಹೆಚ್‌ಡಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಜಪಾನ್, ಜರ್ಮನಿ, ಚೀನಾ, ಕೊರಿಯಾ, ಯುರೋಪ್ ಮತ್ತು ದೇಶದ ಹಲವೆಡೆಯಿಂದ ಬಂದವರು ಇದ್ದಾರೆ. ಹಲವಾರು ಅಭ್ಯರ್ಥಿಗಳು ತಮ್ಮ ಪೋಷಕರೊಂದಿಗೆ ರೈಲು ಮತ್ತು ವಿಮಾನದ ಮೂಲಕ ಬೆಂಗಳೂರು ತಲುಪಿದ್ದಾರೆ. ಒಂದು ದಿನ ಮೊದಲು ಪರೀಕ್ಷೆ ಮುಂದೂಡುವ ಮೂಲಕ ಈ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದಿದೆ.
ಸರ್ಕಾರದ ನೇಮಕಾತಿ ಮತ್ತು ಮೀಸಲಾತಿ ಆದೇಶಗಳ ಅನುಸಾರ ನ್ಯಾಯ ಸಮ್ಮತವಾಗಿ ನೇಮಕಾತಿಗಳನ್ನು ನಡೆಸಲು ತೀರ್ಮಾನಿಸಿದ್ದು, ಅದಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ ತನ್ನ ಸ್ವಪ್ರತಿಷ್ಠೆಗೆ ಮತ್ತು ವಿಶ್ರಾಂತ ಕುಲಪತಿ ರಾಜೇಂದ್ರ ಪ್ರಸಾದ್, ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿ ಅರುಣಿಕುಮಾರ್ ಅವರ ಕುತಂತ್ರಗಳಿಗೆ ಕಿವಿಗೊಟ್ಟು ತಡೆಯಾಜ್ಞೆ ನೀಡಿರುವುದು ಸಂವಿಧಾನಬಾಹಿರ ಮತ್ತು ನಿರಂಕುಶವಾದ. ಈ ನಿರ್ಧಾರಗಳು ದಲಿತ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯ ಮತ್ತು ಉದ್ಯೋಗವಕಾಶಗಳಲ್ಲಿ ತೀವ್ರ ಅನ್ಯಾಯ ಉಂಟು ಮಾಡಿವೆ ಎಂದು ಒಕ್ಕೂಟ ಆರೋಪಿಸಿದೆ.
ಈಗಾಗಲೇ ನಾಳೆ ನಡೆಯಬೇಕಿದ್ದ ಪರೀಕ್ಷೆಗೆ ದೇಶ-ವಿದೇಶಗಳಿಂದ ಆಗಮಿಸಿರುವ ಅಭ್ಯರ್ಥಿಗಳಿಗೆ ಒಂದೇ ವಾರದೊಳಗೆ ಪರೀಕ್ಷೆಯ ದಿನಾಂಕ ನಿಗದಿಪಡಿಸಿ ಪರೀಕ್ಷೆಯನ್ನು ನಡೆಸಬೇಕು. ಇಲ್ಲವಾದಲ್ಲಿ, ರಾಜ್ಯದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ರೈತ ಸಂಘಟನೆಗಳ ಒಕ್ಕೂಟದಿಂದ ಸರ್ಕಾರದ ವಿರುದ್ಧ ಹಾಗೂ ಸೂತ್ರದಾರರಾದ ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಹೋರಾಟ ನಡೆಸಲಾಗುವುದು ಮತ್ತು ಅವರ ರಾಜೀನಾಮೆಗೆ ಆಗ್ರಹಿಸಲಾಗುವುದು ಎಂದು ಒಕ್ಕೂಟ ಎಚ್ಚರಿಸಿದೆ.