ಪ್ರಸ್ತುತ ಹವಾಮಾನ ಬದಲಾವಣೆ, ನೀರಿನ ಕೊರತೆ ಮತ್ತು ಮಾರುಕಟ್ಟೆ ಅನಿಶ್ಚಿತತೆಯಂತಹ ಸವಾಲುಗಳ ನಡುವೆಯೂ ಇಂತಹ ರೈತರು ತೋರಿಸುವ ಮಾರ್ಗವು ಸಾವಿರಾರು ರೈತರಿಗೆ ಪ್ರೇರಣೆಯಾಗಿದೆ. ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಧುನಿಕ ತಂತ್ರಜ್ಞಾನ, ಸಾವಯವ ಕೃಷಿ, ಮೌಲ್ಯವರ್ಧನೆ ಮತ್ತು ಸಂಯೋಜಿತ ಕೃಷಿಯನ್ನು ಅಳವಡಿಸಿಕೊಂಡರೆ ಕೃಷಿ ಕೇವಲ ಜೀವನಾಧಾರವಲ್ಲದೆ, ಲಾಭದಾಯಕ ವೃತ್ತಿಯಾಗಬಲ್ಲದು ಎಂಬುದು ಸ್ಪಷ್ಟ...
ಸಾಂಪ್ರದಾಯಿಕವಾಗಿ ಕಬ್ಬು ಬೆಳೆಯುತ್ತಿದ್ದ ರೈತ ಈ ಬಾರಿ 10 ಎಕರೆ ಜಮೀನಿನಲ್ಲಿ ಚೆಂಡು ಹೂವು ಬೆಳೆದು ಉತ್ತಮ ಇಳುವರಿ ಹಾಗೂ ಲಾಭದ ನಿರೀಕ್ಷೆಯೊಂದಿಗೆ ಇತರ ರೈತರಿಗೆ ಮಾದರಿಯಾಗಿದ್ದಾರೆ. ಕೃಷಿಯಲ್ಲಿ ಹೊಸ ಪ್ರಯೋಗಗಳನ್ನು ಅಳವಡಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಗ್ರಾಮದ ರೈತ ಪಾಂಡುರಂಗ ಕರೆಶೆನ್ನವರ ಅವರು ಸಾಬೀತುಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೃಷಿ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದ್ದು, ಒಂದೇ ಬೆಳೆಯನ್ನು ಅವಲಂಬಿಸಿರುವ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ವಾಣಿಜ್ಯ ಹೂವಿನ ಬೆಳೆಗಳತ್ತ ಮುಖ ಮಾಡಿದರೆ ಹೆಚ್ಚಿನ ಆದಾಯ ಗಳಿಸಬಹುದೆಂಬುದನ್ನು ಪಾಂಡುರಂಗ ಅವರ ಅನುಭವ ಸಾಬೀತುಪಡಿಸಿದೆ.
ಏಪ್ರಿಲ್ ತಿಂಗಳಲ್ಲಿ ಖಾಸಗಿ ಕಂಪನಿಯೊಂದರಿಂದ ಗುಣಮಟ್ಟದ ಚೆಂಡು ಹೂವಿನ ಸಸಿಗಳನ್ನು ಪಡೆದು 10 ಎಕರೆಯಲ್ಲಿ ನಾಟಿ ಮಾಡಲಾಗಿದೆ. ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಮೂರು ಬಾರಿ ಕಟಾವು ನಡೆಸಲಾಗಿದೆ. ಮೊದಲ ಕಟಾವಿನಲ್ಲಿ ಇಳುವರಿ ಕಡಿಮೆಯಾಗಿದ್ದರೂ, ನಂತರದ ಕಟಾವುಗಳಲ್ಲಿ 4 ರಿಂದ 5 ಟನ್ವರೆಗೆ ಹೂವು ದೊರೆತಿದೆ. ಇನ್ನೂ ಎರಡು ಕಟಾವುಗಳು ಬಾಕಿ ಇದ್ದು, ಐದನೇ ಕಟಾವಿನಲ್ಲಿ ಸುಮಾರು 6 ಟನ್ವರೆಗೆ ಇಳುವರಿ ಸಿಗುವ ನಿರೀಕ್ಷೆಯಿದೆ.
ಈ ಬೆಳೆಯ ಮತ್ತೊಂದು ವಿಶೇಷವೆಂದರೆ ನಿರ್ವಹಣಾ ವೆಚ್ಚ ಕಡಿಮೆ ಇರುವುದು. ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕಾಗುತ್ತದೆ. ಗಿಡಗಳು ದಟ್ಟವಾಗಿ ಬೆಳೆಯುವುದರಿಂದ ಕಳೆ ಬೆಳೆಯುವ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಕಳೆ ತೆಗೆಯುವ ವೆಚ್ಚವೂ ಉಳಿಯುತ್ತದೆ. ಒಂದು ಬಾರಿ ಗೊಬ್ಬರ ಹಾಕಿದರೆ ಸಾಕಾಗುತ್ತಿದ್ದು, ಕೀಟನಾಶಕ ಸಿಂಪಡಿಸುವ ಅಗತ್ಯವೂ ಬಹುತೇಕ ಇಲ್ಲ ಎಂಬುದು ರೈತರ ಅಭಿಪ್ರಾಯವಾಗಿದೆ.

ಚೆಂಡು ಹೂವು ಕಟಾವು ಮಾಡುವ ಕೆಲಸಕ್ಕೆ ಒಂದು ಬಾರಿ ಸುಮಾರು 20 ಕೃಷಿ ಕಾರ್ಮಿಕರ ಅಗತ್ಯವಿರುತ್ತದೆ. ಇದರಿಂದ ಸ್ಥಳೀಯ ಕಾರ್ಮಿಕರಿಗೂ ಉದ್ಯೋಗ ದೊರೆಯುತ್ತಿದೆ. ಹೂವು ಕಟಾವು ಮಾಡಿದ ಕೂಡಲೇ ಖಾಸಗಿ ಕಂಪನಿಯವರು ನೇರವಾಗಿ ಹೊಲಕ್ಕೆ ಬಂದು ಖರೀದಿಸಿಕೊಂಡು ಹೋಗುವುದರಿಂದ ರೈತರಿಗೆ ಮಾರುಕಟ್ಟೆ ಹುಡುಕುವ ತೊಂದರೆ ಇಲ್ಲ. ಸಾರಿಗೆ ವೆಚ್ಚವೂ ಕಡಿಮೆಯಾಗುತ್ತಿದೆ.
ಈ ದಿನ.ಕಾಮ್ ಜತೆ ಮಾತನಾಡಿದ ರೈತ ಪಾಂಡುರಂಗ ಕರೆಶೆನ್ನವರ ಅವರು, “ನಾವು ಹಲವು ವರ್ಷಗಳಿಂದ ಕಬ್ಬು ಬೆಳೆಯುತ್ತಿದ್ದೆವು. ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಖಾಸಗಿ ಕಂಪನಿಯ ಸಹಕಾರದಲ್ಲಿ ಚೆಂಡು ಹೂವು ಬೆಳೆಯಲು ಮುಂದಾದೆವು. ಕಂಪನಿಯವರು ಸಸಿಗಳನ್ನು ನೀಡಿ ತಾಂತ್ರಿಕ ಮಾರ್ಗದರ್ಶನವನ್ನೂ ನೀಡಿದರು. ಈಗ ಅವರು ಹೂವನ್ನು ನೇರವಾಗಿ ಹೊಲದಲ್ಲೇ ಖರೀದಿಸಿಕೊಂಡು ಹೋಗುತ್ತಿದ್ದಾರೆ. ನಾಲ್ಕು ತಿಂಗಳಲ್ಲಿ ಐದರಿಂದ ಆರು ಬಾರಿ ಕಟಾವು ಸಿಗುತ್ತದೆ. ವಾರಕ್ಕೊಮ್ಮೆ ನೀರು ಹಾಯಿಸಿದರೆ ಸಾಕು. ಕೀಟನಾಶಕದ ವೆಚ್ಚವೂ ಇಲ್ಲ. ಆರಂಭದಲ್ಲಿ ಸ್ವಲ್ಪ ಹೂಡಿಕೆ ಇದ್ದರೂ ನಂತರ ಉತ್ತಮ ಲಾಭ ಸಿಗುತ್ತಿದೆ. ರೈತರು ಸಾಂಪ್ರದಾಯಿಕ ಬೆಳೆಗಳ ಜತೆಗೆ ಇಂತಹ ವಾಣಿಜ್ಯ ಬೆಳೆಗಳತ್ತಲೂ ಗಮನ ಹರಿಸಿದರೆ ಉತ್ತಮ ಆದಾಯ ಗಳಿಸಬಹುದು” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಕೊಪ್ಪಳ | ತೊಗರಿ ಬೆಳೆಯ ಸಂರಕ್ಷಣೆಗೆ ರೈತರ ಹರಸಾಹಸ: ಬೆಳೆಗಳಿಗೆ ಟ್ಯಾಂಕರ್ ನೀರು ಪೂರೈಕೆ
ಬದಲಾಗುತ್ತಿರುವ ಕೃಷಿ ಪದ್ಧತಿಯಲ್ಲಿ ಸಾಂಪ್ರದಾಯಿಕ ಬೆಳೆಗಳ ಜತೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇರುವ ವಾಣಿಜ್ಯ ಬೆಳೆಗಳನ್ನು ಅಳವಡಿಸಿಕೊಳ್ಳುವುದು ರೈತರ ಆದಾಯ ಹೆಚ್ಚಿಸುವ ಪ್ರಮುಖ ಮಾರ್ಗವಾಗಿದೆ. ಚುಂಚನೂರು ಗ್ರಾಮದ ರೈತ ಪಾಂಡುರಂಗ ಕರೆಶೆನ್ನವರ ಅವರ ಚೆಂಡು ಹೂವಿನ ಕೃಷಿ ಪ್ರಯೋಗವು ಕಡಿಮೆ ನಿರ್ವಹಣಾ ವೆಚ್ಚದಲ್ಲಿ ಉತ್ತಮ ಇಳುವರಿ ಮತ್ತು ಲಾಭಗಳಿಸಬಹುದೆಂಬುದನ್ನು ಸಾಬೀತುಪಡಿಸಿದೆ. ಹೊಸ ಬೆಳೆಗಳ ಕುರಿತು ಮಾಹಿತಿ ಪಡೆದು ವೈಜ್ಞಾನಿಕ ಕೃಷಿ ಪದ್ಧತಿಗಳನ್ನು ಅನುಸರಿಸಿದರೆ ಕೃಷಿಯನ್ನೂ ಲಾಭದಾಯಕ ಉದ್ಯಮವನ್ನಾಗಿ ರೂಪಿಸಬಹುದು ಎಂಬುವದನ್ನು ರೈತ ಪಾಂಡುರಂಗ ಅವರು ಸಾಧಿಸಿ ತೋರಿಸಿದ್ದಾರೆ.
ಪ್ರಸ್ತುತ ಹವಾಮಾನ ಬದಲಾವಣೆ, ನೀರಿನ ಕೊರತೆ ಮತ್ತು ಮಾರುಕಟ್ಟೆ ಅನಿಶ್ಚಿತತೆಯಂತಹ ಸವಾಲುಗಳ ನಡುವೆಯೂ ಇಂತಹ ರೈತರು ತೋರಿಸುವ ಮಾರ್ಗವು ಸಾವಿರಾರು ರೈತರಿಗೆ ಪ್ರೇರಣೆಯಾಗಿದೆ. ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಧುನಿಕ ತಂತ್ರಜ್ಞಾನ, ಸಾವಯವ ಕೃಷಿ, ಮೌಲ್ಯವರ್ಧನೆ ಮತ್ತು ಸಂಯೋಜಿತ ಕೃಷಿಯನ್ನು ಅಳವಡಿಸಿಕೊಂಡರೆ ಕೃಷಿ ಕೇವಲ ಜೀವನಾಧಾರವಲ್ಲದೆ, ಲಾಭದಾಯಕ ವೃತ್ತಿಯಾಗಬಲ್ಲದು ಎಂಬುದು ಸ್ಪಷ್ಟ…




