ನೀಟ್ ಸೇರಿದಂತೆ ಇತ್ತೀಚೆಗೆ ನಡೆದ ಪರೀಕ್ಷಾ ಅಕ್ರಮಗಳ ವಿರೋದ್ಧ ಹೋರಾಟಗಳು ತೀವ್ರಗೊಳ್ಳುತ್ತಿವೆ. ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ 20ನೇ ದಿನಕ್ಕೆ ಕಾಲಿಟ್ಟಿದೆ. ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸೋನಮ್ ಅವರಿಗೆ ವಿರೋಧ ಪಕ್ಷಗಳು ಬೆಂಬಲ ಘೋಷಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ದೇಶಾದ್ಯಂತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ ತೀವ್ರಗೊಳ್ಳುತ್ತಿದೆ.
ಸೋನಮ್ ಹೋರಾಟವನ್ನು ಬೆಂಬಲಿಸಿರುವ ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ, “ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ಕೈಬಿಡಬೇಕು. ಇದು ಕೇಂದ್ರ ಸರ್ಕಾರ ಮಾಡಬೇಕಾದ ಅತ್ಯಂತ ಸೂಕ್ತ ಕ್ರಮ” ಎಂದು ಪ್ರತಿಪಾದಿಸಿದ್ದಾರೆ.
“ಹಿಂದೆ ಬೇರೆ ಸಚಿವರನ್ನು ಬದಲಾಯಿಸಿದ ಇತಿಹಾಸ ಹೊಂದಿರುವ ಸರ್ಕಾರ, ಈ ಜವಾಬ್ದಾರಿಯುತ ವಿಷಯದಲ್ಲಿ ಏಕೆ ಹಿಂಜರಿಯುತ್ತಿದೆ. ದೇಶದ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಬೀದಿಗೆ ಇಳಿದು ನ್ಯಾಯಕ್ಕಾಗಿ ವಿದ್ಯಾರ್ಥಿಗಳು ಹೋರಾಟ ನಡೆಸುತ್ತಿದ್ದಾರೆ. ರಾಜಕೀಯ ಲಾಭ-ನಷ್ಟ ಅಥವಾ ಕ್ರೆಡಿಟ್ ಯಾರು ತೆಗೆದುಕೊಳ್ಳುತ್ತಾರೆ ಎಂಬ ಗೊಂದಲದಲ್ಲಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದು ಸರಿಯಲ್ಲ. ಸರ್ಕಾರದ ಈ ವಿಳಂಬ ಧೋರಣೆಯು ಸಾರ್ವಜನಿಕರಲ್ಲಿನ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಲಿದೆ” ಎಂದು ಅವರು ಎಚ್ಚರಿಸಿದ್ದಾರೆ.
ಇನ್ನು,
ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಜಂತರ್ ಮಂತರ್ನಲ್ಲಿನ ಪ್ರತಿಭಟನಾ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಸೋನಮ್ ವಾಂಗ್ಚುಕ್ ಮತ್ತು ಪ್ರತಿಭಟನಾಕಾರರನ್ನು ಭೇಟಿ ಮಾಡಿ ಬೆಂಬಲ ಸೂಚಿಸಿದ್ದಾರೆ. “ಜೀವ ಪಣಕ್ಕಿಟ್ಟರೆ ಪ್ರಯೋಜನವಿಲ್ಲ, ಹೋರಾಟದ ಹಾದಿ ಬದಲಾಗಲಿ” ಎಂದು ಸೋನಮ್ ಅವರಿಗೆ ಮನವಿ ಮಾಡಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಪ್ರಜಾಪ್ರಭುತ್ವದ ಮಾದರಿಯ ಪ್ರತಿಭಟನೆಗಳ ಭಾಷೆ ಅರ್ಥವಾಗದ ಅತ್ಯಂತ ಸಂವೇದನಾ ರಹಿತ ಸರ್ಕಾರದ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ಇಂತಹ ಕಠಿಣ ಮನಸ್ಥಿತಿಯ ಸರ್ಕಾರದ ಮುಂದೆ ಜೀವ ಪಣಕ್ಕಿಟ್ಟು ಹೋರಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ, ನಮ್ಮ ಪ್ರತಿಭಟನಾ ಮಾರ್ಗಗಳು ಬದಲಾಗಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕಾಂಗ್ರೆಸ್ ಪಕ್ಷವು ಈಗಾಗಲೇ ‘ಛಾತ್ರೋಂ ಕಿ ಗೂಂಜ್’ ಅಭಿಯಾನದ ಮೂಲಕ ದೇಶಾದ್ಯಂತ ವಿದ್ಯಾರ್ಥಿಗಳ ಧ್ವನಿಯಾಗಿ ಗಲ್ಲಿ ಗಲ್ಲಿಗಳಲ್ಲಿ ಹಾಗೂ ಕಾಲೇಜು ಆವರಣಗಳಲ್ಲಿ ಧ್ವನಿ ಎತ್ತುತ್ತಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಮತ್ತು ಶಿಕ್ಷಣ ಸಚಿವರ ರಾಜೀನಾಮೆಗೆ ನಿರಂತರವಾಗಿ ಒತ್ತಾಯಿಸುತ್ತಿದೆ” ಎಂದು ಪವನ್ ಖೇರಾ ವಿವರಿಸಿದ್ದಾರೆ.
ಕಾಂಗ್ರೆಸ್ನ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್ ಅವರು ಸಾಮಾಜಿಕ ಜಾಲತಾಣದ ಮೂಲಕ ವಾಂಗ್ಚುಕ್ ಅವರಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಮನವಿ ಮಾಡಿದ್ದಾರೆ. “ನಿಮ್ಮ ಆತಂಕ ಹಾಗೂ ಕಾಳಜಿಗಳು ನಮ್ಮದೂ ಹೌದು, ಶಿಕ್ಷಣ ಸಚಿವರ ರಾಜೀನಾಮೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಆದರೆ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಧರಣಿ ಕೊನೆಗೊಳಿಸಿ” ಎಂದು ಮನವಿ ಮಾಡಿದ್ದಾರೆ.
ಉಪವಾಸದ 20ನೇ ದಿನದ ವೇಳೆಗೆ ಸೋನಮ್ ವಾಂಗ್ಚುಕ್ ಅವರ ದೇಹದ ತೂಕ ಬರೋಬ್ಬರಿ 9 ಕೆಜಿಗಿಂತಲೂ ಹೆಚ್ಚು ಕಡಿಮೆಯಾಗಿದೆ. ದೀರ್ಘಾವಧಿಯ ಉಪವಾಸದಿಂದ ಅವರ ದೇಹದ ಆಂತರಿಕ ಅಂಗಾಂಗಗಳು ವೈಫಲ್ಯ ಕಾಣುವ ಭೀತಿ ಎದುರಾಗಿದೆ ಎಂದು ವೈದ್ಯರು ತೀವ್ರ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ, ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ವಾಂಗ್ಚುಕ್, “ಸರ್ಕಾರದ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬರುವ ಮುನ್ನವೇ ನಾನು ಉಪವಾಸವನ್ನು ಕೈಬಿಟ್ಟರೆ, ಅದು ಹೋರಾಟಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ” ಎಂದು ಹೇಳಿದ್ದಾರೆ. ಹೋರಾಟ ಕೈಬಿಡುವ ಮಾತೇ ಇಲ್ಲ ಎಂದಿದ್ದಾರೆ.
ಮುಂಬರುವ ಜುಲೈ 20ರಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಂದೇ ದೇಶದ ‘ಕಾಕ್ರೋಚ್ ಜನತಾ ಪಾರ್ಟಿ’ ಮತ್ತು ಬೆಂಬಲಿಗರು ಬೃಹತ್ ‘ಸಂಸತ್ ಚಲೋ’ ಮೆರವಣಿಗೆಗೆ ಕರೆ ನೀಡಿದ್ದಾರೆ.



