ಇತ್ತೀಚಿನ ಉಪಗ್ರಹ ಚಿತ್ರಗಳಲ್ಲಿ ಭಾರತ ಬಹುತೇಕ ಮೋಡರಹಿತವಾಗಿ ಕಾಣುತ್ತಿದೆ. ವಿಶೇಷವಾಗಿ ವಾಯುವ್ಯ ಮತ್ತು ಮಧ್ಯಭಾಗದ ಪ್ರದೇಶಗಳಲ್ಲಿ ಮೋಡಗಳು ತೀವ್ರವಾಗಿ ಕಡಿಮೆಯಾಗಿವೆ. ಇದನ್ನು ನೋಡಿ ಮುಂಗಾರು ಹಿಂದೆ ಸರಿಯುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಆದರೆ ಮೋಡಗಳು ಕಡಿಮೆಯಾಗಿದ್ದರೂ ಅಧಿಕೃತವಾಗಿ ಮುಂಗಾರು ಇನ್ನೂ ಹಿಂದೆ ಸರಿದಿಲ್ಲ.
ಉಪಗ್ರಹ ಚಿತ್ರಗಳಲ್ಲಿ ಭಾರತದ ವಿಶಾಲ ಪ್ರದೇಶಗಳಲ್ಲಿ ಮೋಡಗಳು ಗಮನಾರ್ಹವಾಗಿ ಕಡಿಮೆಯಾಗಿರುವುದು ಕಂಡುಬಂದಿದೆ. ಈ ಬದಲಾವಣೆ ಕೇವಲ ಭಾರತಕ್ಕೆ ಸೀಮಿತವಲ್ಲ. ಅರೇಬಿಯನ್ ಸಮುದ್ರದಿಂದ ಪಶ್ಚಿಮ ಪೆಸಿಫಿಕ್ ಸಾಗರದವರೆಗೆ ವ್ಯಾಪಕ ಪ್ರದೇಶದಲ್ಲಿ ಮೋಡಗಳು ಕಡಿಮೆಯಾಗಿವೆ. ಚೀನಾ, ಇಂಡೋನೇಷ್ಯಾ, ಸುಮಾತ್ರಾ ಸೇರಿದಂತೆ ದಕ್ಷಿಣ ಮತ್ತು ಪೂರ್ವ ಏಷ್ಯಾದ ಹಲವು ಭಾಗಗಳಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ.
ಈ ವ್ಯಾಪಕ ಮೋಡ ಕಡಿತಕ್ಕೆ ಬಲವಾದ ಎಲ್ ನಿನೊದ ಪ್ರಭಾವವೇ ಮುಖ್ಯ ಕಾರಣವೆಂದು ಹೇಳಲಾಗುತ್ತಿದೆ. ಎಲ್ ನಿನೊದಿಂದಾಗಿ ವಾತಾವರಣದ ಪರಿಚಲನೆ ಬದಲಾಗುತ್ತಿದ್ದು, ಮಾನ್ಸೂನ್ ಚಟುವಟಿಕೆಗೆ ಪರಿಣಾಮ ಬೀರುತ್ತಿದೆ.
ಆದರೆ ಆಕಾಶದಲ್ಲಿ ಸ್ಪಷ್ಟ ಮೋಡಗಳನ್ನು ಗಮನಿಸಿದಾಗ ಕಾಣುವುದರಿಂದ ಮುಂಗಾರು ಅಧಿಕೃತವಾಗಿ ಹಿಂದೆ ಸರಿದಿದೆ ಎನ್ನಲಾಗುವುದಿಲ್ಲ, ಅಧಿಕೃತ ಸೆಪ್ಟೆಂಬರ್ 15ರ ನಂತರ ಮುಂಗಾರು ಹಿಂದೆ ಸರಿಯುವ ಪ್ರಕ್ರಿಯೆ ಪ್ರಾರಂಭವಾಗುವ ಸಾಧ್ಯತೆ ಇದೆ. ಇದು ಮೊದಲು ವಾಯುವ್ಯ ಭಾರತದಿಂದ ಆರಂಭವಾಗುತ್ತದೆ.
ಹವಾಮಾನ ಮಾದರಿಗಳ ಪ್ರಕಾರ, ಸೆಪ್ಟೆಂಬರ್ ಎರಡನೇ ಅರ್ಧದಲ್ಲಿ ಮುಂಗಾರು ಹಿಂದೆ ಸರಿಯಲು ಅನುಕೂಲಕರ ವಾತಾವರಣ ಸೃಷ್ಟಿಯಾಗುತ್ತಿದೆ. ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್‌ಕ್ಯಾಸ್ಟ್ಸ್(ECMWF) ಮತ್ತು ಗ್ಲೋಬಲ್ ಫೋರ್‌ಕ್ಯಾಸ್ಟ್ ಸಿಸ್ಟಮ್(GFS) ಮಾದರಿಗಳ ಪ್ರಕಾರ, ವಾಯುವ್ಯ ಭಾರತದ ಮೇಲೆ ಮುಂಗಾರು ಹಿಂದೆ ಸರಿಯುವ ಆಂಟಿಸೈಕ್ಲೋನ್ ಕ್ರಮೇಣ ಬಲಗೊಳ್ಳಲಿದೆ. ಈ ಆಂಟಿಸೈಕ್ಲೋನ್ ಸೆಪ್ಟೆಂಬರ್ 21ರ ಸುಮಾರಿಗೆ ಪೂರ್ಣವಾಗಿ ಬಲಗೊಂಡು, ಮುಂಗಾರು ಹಿಂದೆ ಸರಿಯುವುದು ಸ್ಪಷ್ಟವಾಗುತ್ತದೆ.

ಇದು ಭಾರತದ ವಾರ್ಷಿಕ ಹವಾಮಾನ ಚಕ್ರದಲ್ಲಿ ಮುಖ್ಯ ಹಂತ. ವಾಯುವ್ಯ ಭಾರತದಿಂದ ಮುಂಗಾರು ಹಿಂದೆ ಸರಿದಂತೆ, ಆ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗುತ್ತದೆ. ಆಕಾಶ ಸ್ಪಷ್ಟವಾಗುತ್ತದೆ, ತೇವಾಂಶ ಕಡಿಮೆಯಾಗುತ್ತದೆ. ಅಲ್ಲದೆ ಒಣಹವೆ ಹೆಚ್ಚಾಗುತ್ತದೆ.
ಸದ್ಯಕ್ಕೆ, ಉಪಗ್ರಹದಿಂದ ಕಾಣುವ ಬಹುತೇಕ ಮೋಡರಹಿತ ಚಿತ್ರಗಳನ್ನು ಗಮನಿಸಿದರೆ, ಭಾರತದ ಮುಂಗಾರು ದುರ್ಬಲವಾಗುತ್ತಿರುವ ಸಂಕೇತವೇ ಹೊರತು, ಅಧಿಕೃತವಾಗಿ ಮುಗಿದಿದೆ ಎಂದಲ್ಲ. ಮುಂದಿನ ಕೆಲವು ದಿನಗಳಲ್ಲಿ ವಾತಾವರಣದ ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎಂಬುದರ ಮೇಲೆ ಅಧಿಕೃತವಾಗಿ ಮುಂಗಾರು ಹಿಂದೆ ಸರಿಯುವಿಕೆ ಅವಲಂಬಿತವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ; 18 ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ: ಹವಾಮಾನ ಇಲಾಖೆ
ದಕ್ಷಿಣ ಭಾರತಕ್ಕೆ ಮುನ್ಸೂಚನೆ: ದೇಶದ ಬಹುಪಾಲು ಭಾಗಗಳಲ್ಲಿ ಮೋಡಗಳು ಕಾಣೆಯಾಗಿದ್ದರೂ, ಮುಂಗಾರಿನ ಕೊನೆಯ ಹಂತದ ಮಾರುತಗಳು ದಕ್ಷಿಣ ಭಾರತದತ್ತ ಚಲಿಸುತ್ತಿವೆ. ಹೀಗಾಗಿ, ಸೆಪ್ಟೆಂಬರ್ ಎರಡನೇವಾರದ ಬಳಿಕ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಮತ್ತೆ ಮಳೆ ಚಟುವಟಿಕೆಗಳು ಚುರುಕುಗೊಳ್ಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುಯನ್ಸೂಚನೆ ನೀಡಿದೆ.





