- ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದಕ್ಕೆ 2 ಲಕ್ಷಕ್ಕೆ ಬೇಡಿಕೆ
- ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದವರಿಂದ ಹಣಕ್ಕಾಗಿ ಬೇಡಿಕೆ ಇಟ್ಟು ಸುಲಿಗೆ ನಡೆಸಿದವರೂ ಸೇರಿ ಸುಲಿಗೆಗೊಳಗಾದವರೂ ಕೂಡ ಬಂಧಿಸಲ್ಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸುಲಿಗೆ ನಡೆಸಿದ ಆರೋಪದ ಮೇಲೆ ಸುಂಕದಕಟ್ಟೆಯ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಸೋಮುಗೌಡ ಬಂಧಿಸಲ್ಪಟ್ಟರೆ, ಅಕ್ರಮ ಗೋಮಾಂಸ ಸಾಗಾಟಕ್ಕೆ ಸಂಬಂಧಿಸಿ ಖಾಜಾ ಮೊಯಿನುದ್ದೀನ್ ಹಾಗೂ ಉಮೇಶ್ ಬಂಧನಕ್ಕೊಳಗಾದವರು.
ಕಳೆದ ಜೂ. 21 ರಂದು ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಖಾಜಾ ಮೊಯಿನುದ್ದೀನ್ ಹಾಗೂ ಉಮೇಶ್ ಎಂಬವರು ಮಾಗಡಿಯಲ್ಲಿ ಗೋಮಾಂಸ ಖರೀದಿಸಿ, ಶಿವಾಜಿ ನಗರಕ್ಕೆ ಸ್ಕಾರ್ಪಿಯೋ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು.

ಈ ವೇಳೆ ತುಮಕೂರು ರಸ್ತೆಯಲ್ಲಿ ವಾಹನವನ್ನು ಅಡ್ಡಗಟ್ಟಿದ್ದ ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರಶಾಂತ್ ಹಾಗೂ ಸ್ನೇಹಿತರು ನಿಮ್ಮ ಸ್ಕಾರ್ಪಿಯೋ ನಮ್ಮ ಇನ್ನೋವಾ ಕಾರಿಗೆ ತಾಗಿರುವುದರಿಂದ ಡ್ಯಾಮೇಜ್ ಆಗಿದೆ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಂತರ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದಕ್ಕೆ 2 ಲಕ್ಷ ರೂ. ನೀಡಬೇಕು ಎಂದು ಕೂಡ ಬೇಡಿಕೆ ಇಟ್ಟಿದ್ದಲ್ಲದೆ, ಹಲ್ಲೆ ನಡೆಸಿರುವ ಆರೋಪ ಕೂಡ ಕೇಳಿಬಂದಿದೆ.
ಬಳಿಕ ಗಲಾಟೆ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಪ್ರಕರಣ ದಾಖಲಿಸಿ ಪ್ರಶಾಂತ್ ಹಾಗೂ ಸೋಮು ಗೌಡ ಇಬ್ಬರನ್ನು ಬಂಧಿಸಿದ್ದಾರೆ. ಮತ್ತೊಂದೆಡೆ ಗೋಮಾಂಸ ಅಕ್ರಮ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಉಮೇಶ್ ಹಾಗೂ ಖಾಜಾ ಮೊಯಿನುದ್ದೀನ್ ಅವರನ್ನೂ ಕೂಡ ಪೊಲೀಸರು ಬಂಧಿಸಿದ್ದಾರೆ.
ಸದ್ಯ ಆರ್ಎಂಸಿ ಯಾರ್ಡ್ ಠಾಣೆಯ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.