ಬಹುನಿರೀಕ್ಷಿತ ಮೆಟ್ರೋ ಮಾರ್ಗವಾದ ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರ ನಡುವಿನ ಮೆಟ್ರೋ ರೈಲುಗಳು ಜುಲೈ 15ರಿಂದ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಯಮಿತ ನಿಗಮ (ಬಿಎಂಆರ್‌ಸಿಎಲ್) ಹೇಳಿದೆ.
ಕಳೆದ ಒಂದು ವರ್ಷದಿಂದಲೂ ಬಿಎಂಆರ್‌ಸಿಎಲ್ ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರ ಮಾರ್ಗದ ಮೆಟ್ರೋ ಸಂಚಾರಕ್ಕೆ ಗಡುವು ನೀಡುತ್ತಲೇ ಬಂದಿದೆ. 2022ರ ಡಿಸೆಂಬರ್‌ನಲ್ಲೇ ಆರಂಭವಾಗಬೇಕಿದ್ದ ಮೆಟ್ರೋ ಸಂಚಾರ ಮಾರ್ಚ್‌ಗೆ ಮುಂದೂಡಲಾಗಿತ್ತು. ಇದೀಗ ಮತ್ತೆ ಜುಲೈಗೆ ಗಡುವು ನೀಡಲಾಗಿದೆ.
ಬೆನ್ನಿಗಾನಹಳ್ಳಿಯ ಬಳಿ ಬರುವ ಬೆಂಗಳೂರು–ಸೇಲಂ ರೈಲ್ವೆ ಮಾರ್ಗದ ಮೇಲ್ಭಾಗದಲ್ಲಿ ವೆಬ್‌ಗರ್ಡರ್ ಅಳವಡಿಸುವುದು ಬಿಎಂಆರ್‌ಸಿಎಲ್‌ಗೆ ತಲೆನೋವಾಗಿತ್ತು. ಪೆಬ್ರವರಿಯಲ್ಲಿ ಈ ಕಾರ್ಯ ಮುಗಿದಿದ್ದು, ಬಾಕಿ ಇರುವ ಕೆಲಸಗಳು ವೇಗಗತಿ ಪಡೆದಿವೆ ಎನ್ನಲಾಗಿದೆ.
ಬೆನ್ನಿಗಾನಹಳ್ಳಿ ನಿಲ್ದಾಣದಲ್ಲಿ ಟ್ರ್ಯಾಕ್, ಸಿಗ್ನಲಿಂಗ್ ಮತ್ತು ನಿಲ್ದಾಣದ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ. ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲು ಒಂದು ತಿಂಗಳು ಬೇಕಾಗಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.
ವೈಟ್‌ಫೀಲ್ಡ್ ಸುತ್ತಮುತ್ತ ಇರುವ ಪ್ರದೇಶವು ಕೈಗಾರಿಕಾ ತಾಣವಾಗಿರುವ ಕಾರಣ ಹೆಚ್ಚು ಉದ್ಯಮಿಗಳು ಈ ಭಾಗದಲ್ಲಿ ಇದ್ದಾರೆ. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಈ ಮಾರ್ಗದಲ್ಲಿ ಪ್ರಯಾಣಿಸಲಿದ್ದಾರೆ. ಆದರೆ, ಸದ್ಯ 20 ಸಾವಿರ ಮಂದಿ ಮಾತ್ರ ಪ್ರಯಾಣ ಮಾಡುತ್ತಿದ್ದಾರೆ. ಬೈಯಪ್ಪನಹಳ್ಳಿ–ಕೆ ಆರ್ ಪುರ ನಡುವಿನ ಕಾಮಗಾರಿ ಪೂರ್ಣಗೊಂಡರೆ ನಿರೀಕ್ಷೆಯಂತೆ ಜನ ಪ್ರಯಾಣ ಮಾಡಲಿದ್ದಾರೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚೀನಾ ಮೂಲದ ಶಿಕ್ಷಣ ಸಂಸ್ಥೆ ಮೇಲೆ ಇ.ಡಿ ದಾಳಿ